ಶಿವಶರಣೆ ಸೂಳೆ ಸಂಕವ್ವೆ, ಕೇತಲ ದೇವಿಯರ ಆದರ್ಶ ವ್ಯಕ್ತಿತ್ವದ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಪ್ರತಿ ಕಾಯಕ ಮತ್ತು ಅದನ್ನು ನಿರ್ವಹಿಸುವವರಿಗೆ ಅದರದೇ ಆದ ವೃತ್ತಿಗೌರವ ಮತ್ತು ಮಾನ್ಯತೆ ಇದೆ ಎನ್ನುವುದು ೧೨ನೇ ಶತಮಾನದ ಎಲ್ಲ ಕಸುಬಿನವರಿಗೆ ಮನವರಿಕೆಯಾಗಿತ್ತು. ಆ ಕಾರಣ ಅವರು ಎಂತಹ ಕೆಲಸವೇ ಇರಲಿ ಅದನ್ನು ತುಂಬಾ ಶ್ರದ್ಧೆ, ನಂಬಿಕೆ, ವಿಶ್ವಾಸಗಳಿಂದ ಮಾಡುವ ಪ್ರವೃತ್ತಿ ಅವರಲ್ಲಿತ್ತು.

ಅಂತಹ ಕಾಯಕ ಕರ್ತವ್ಯದ ಶರಣೆಯರಲ್ಲಿ ಸೂಳೆಸಂಕವ್ವೆಯೂ ಒಬ್ಬರಾಗಿದ್ದು ವೃತ್ತಿ ವೇಶ್ಯೆಯಾಗಿದ್ದರೂ ಕಾಲಾಂತರದಲ್ಲಿ ಅದನ್ನು ಬಸವಣ್ಣನವರ ದಿಟ್ಟ ಮಾರ್ಗದರ್ಶನದಲ್ಲಿ ತ್ಯಜಿಸಿ ತಾವೂ ಸಹ ಅನುಭವ ಮಂಟಪದ ಚರ್ಚೆಯಲ್ಲಿ ಪಾಲ್ಗೊಂಡು ತುಂಬಾ ಮಾರ್ಮಿಕ ಮತ್ತು ವೈಚಾರಿಕ ಹಿನ್ನೆಲೆಯ ವಚನ ರಚನೆ ಮಾಡಿದ ಕೀರ್ತಿ ಸಂಕವ್ವೆಗೆ ಸಲ್ಲುತ್ತದೆ. ಆದರೆ ಅವರ ಕೇವಲ ಒಂದು ವಚನ ಲಭ್ಯವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವಪರ ಚಿಂತಕ, ಹೋರಾಟಗಾರ ಬಸವರಾಜ ಕಟ್ಟಿ ಅವರು ಸಂಕವ್ವೆ ಅವರ ಜೀವನ ವೃತ್ತಾಂತವನ್ನು ಸಭೆಯಲ್ಲಿ ಮಂಡಿಸಿದರು.

ಅವರು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತೀಕ ಮಾಸದ ಅಂಗವಾಗಿ ಇಲ್ಲಿನ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನ ಕಾರ್ತೀಕ ಶರಣ-ಶರಣೆಯರ ವಚನ ಹಾಗೂ ಜೀವನ ದರ್ಶನ ಕಾರ್ಯಕ್ರಮದ ೪ನೇ ದಿನವಾದ ನಿನ್ನೆ ಶಿವಶರಣೆ ಸೂಳೆ ಸಂಕವ್ವೆ ಅವರ ಕುರಿತು ಮಾತನಾಡಿದರು.

ಎಂ.ಡಿ.ಆರ್.ಎಸ್. ಶಾಲೆಯ ಸಂಗಿತ ಶಿಕ್ಷಕ ಎ.ಎಂ.ಆರ್. ಮಲ್ಲಿಕಾರ್ಜುನಯ್ಯ ಅವರು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ ಅವರ ಬಗ್ಗೆ ಮಾತನಾಡುತ್ತ, ಕುಂಬಾರ ಕಸುಬಿನ ಮಹತ್ವ ಅಂದರೆ ನಾವು ಯಾವುದೇ ಮಣ್ಣಿನ ವಸ್ತುಗಳನ್ನು ತಯಾರು ಮಾಡುವ ಮೊದಲು ಮಣ್ಣನ್ನು ಹದಗೊಳಿಸಿಕೊಂಡರೆ ಸುಂದರ ಕಲಾ ಕೃತಿಗಳು ರೂಪುಗೊಳ್ಳುತ್ತವೆ. ಹಾಗೆಯೇ ಮನುಷ್ಯರು ಸಹ ತಮ್ಮ ಜೀವನಕ್ಕೆ ಸಂಸ್ಕಾರ, ಸನ್ನಡತೆ, ಸದ್ಗುಣಿಗಳ ಸಂಗ ಎನ್ನುವ ಗುಣವಿಶೇಷಗಳನ್ನು ಹೊಂದಿ ಸಾಗಿದಾಗ ಬದುಕೂ ಸಹ ಸರ್ವಾಂಗ ಸುಂದರವಾಗುತ್ತದೆ.

ಕೇತಲದೇವಿ ಮನುಷ್ಯ ಜೀವನ ಎನ್ನುವುದು ಒಂದು ವ್ರತ. ಅದನ್ನು ತಪ್ಪಿ ನಡೆಯಬಾರದು ಎಂದು ಹೇಳಿದ್ದಾರೆ. ಶಿವನಿಷ್ಠೆಗೆ ತನ್ನನ್ನು ಒಪ್ಪಿಸಿಕೊಂಡಿದ್ದ ಕೇತಲದೇವಿ ಅವರ ಎರಡು ವಚನಗಳು ಲಭ್ಯವಾಗಿವೆ ಎಂದು ಹೇಳಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಶ್ರೀಮಠದ ಬಸವಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಮಹಿಳೆಯರಿಗೆ ೧೨ನೇ ಶತಮಾನದಲ್ಲಿ ಸಮಾನತೆ ನೀಡಿ ಅನುಭವ ಮಂಟಪಕ್ಕೆ ಮುಕ್ತ ಸ್ವಾತಂತ್ರ‍್ಯ ನೀಡಿದ ಪ್ರಯುಕ್ತ ಎಷ್ಟೊಂದು ಮಹಿಳೆಯರು ನಿರ್ಭಿಡೆಯಿಂದ ವಚನ ರಚನೆಗೆ ಸಾಧ್ಯವಾಯಿತು. ಅದೊಂದು ಸರ್ವ ಸಮಾನತೆಯ ಪಕ್ವ ಕಾಲ. ಕಾಯಕದಲ್ಲಿ ಮೇಲುಕೀಳಿಲ್ಲ ಎಂದು ಪರಿಭಾವಿಸಿ ಯಾವುದೇ ಇರಲಿ ಮಾಡುತ್ತ ಸಾಗಿದರು. ಸಂಕವ್ವೆ ಹಾಗೂ ಕೇತಲದೇವಿ ಶರಣೆಯರು ಅತ್ಯಂತ ನಿಷ್ಟಾವಂತ, ಭಕ್ತಿ, ಸಂಪನ್ನ ಶರಣೆಯರಾಗಿ ಬಾಳಿ ಬದುಕಿದವರು ಅಂತವರು ನಿತ್ಯಸ್ಮರಣೆಗೆ ಯೋಗ್ಯ ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ನಿವೃತ್ತ ಉಪಪ್ರಾಚಾರ್ಯ ಮಲ್ಲಿಕಾರ್ಜುನಪ್ಪ ಸೇರಿದಂತೆ ವಿವಿಧ ಸಮಾಜಗಳ ಪದಾಧಿಕಾರಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳವರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲಸಿಬ್ಬಂದಿ ಭಾಗವಹಿಸಿದ್ದರು.

ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಹಾಗು ಶರಣೆಯರಾದ ಕೇತಲದೇವಿ ಹಾಗು ಸೂಳೆಸಂಕವ್ವೆಯವರ ಒಂದೊಂದು ವಚನ ಹಾಡಿದರು. ನಿಂಗೇಶದೇವರು ಹಾಗು ಮದನ್ ದೇವರು ವಚನ ಪಠಣ ಮಾಡಿದರು. ಎಸ್.ಜೆ.ಎಂ. ಐಟಿಐನ ಪ್ರಾಚಾರ್ಯರಾದ ಟಿ.ಬೋರೇಶ್ ಕಾರ್ಯಕ್ರಮ ನಿರ್ವಹಿಸಿದರು. ವಿ. ವನಜಾಕ್ಷಿ ಸ್ವಾಗತಿಸಿದರು. ಎಂ.ಎ. ಯುವರಾಜ್ ಶರಣುಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *