“ಪ್ರತಿದಿನ ಕನಿಷ್ಠ ಐದು ವಚನಗಳನ್ನು ಪಠಿಸಿದರೆ ಉದ್ವೇಗ, ಚಿಂತೆ ದೂರ”

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರತಿದಿನ ಕನಿಷ್ಠ ಐದು ವಚನಗಳನ್ನು ಪಠಿಸಬೇಕು. ಬಸವ ವಚನ ಪಠಣದಿಂದ ವ್ಯಕ್ತಿಯ ಉದ್ವೇಗ ಮತ್ತು ಕೆಟ್ಟ ಚಿಂತೆಗಳು ದೂರವಾಗುತ್ತವೆ. ಎಂದು ಹಾರಕೂಡ ಶ್ರೀಮಠದ ಡಾ.ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಬಸವಕಲ್ಯಾಣ ನಗರದ ಎಂ.ಎಂ.ಬೇಗ್ ಸಭಾಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಆಯೋಜಿಸಿದ ಮೂರನೇ ಸ್ವಾಭಿಮಾನಿ ಕಲ್ಯಾಣ ಪರ್ವ ಉದ್ಘಾಟಿಸಿ ಮಾತನಾಡಿದರು.

ಜನರ ಹೃದಯ ಬೆಳಗುವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಸರ್ವರ ಹೃದಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಏಕೈಕ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ

ಮಾತೆ ಸತ್ಯಾದೇವಿ ವಿರಚಿತ ʼವಚನ ಸಂಗಮʼ ಮತ್ತು ʼಯೋಗಾಂಗ ತ್ರಿವಿಧಿʼ ಕೃತಿಗಳನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಸ್.ನಾಗರಾಳೆ ಅವರು ಬಿಡುಗಡೆಗೊಳಿಸಿ ಮಾತನಾಡಿ, ʼಜಾಗತಿಕ ಸಮಸ್ಯೆಗಳಿಗೆ ಬಸವ ತತ್ವವೇ ಔಷಧಿಯಾಗಿದೆ. ವಿಶ್ವಶಾಂತಿಗಾಗಿ ವಚನ ಸಾಹಿತ್ಯಾಧ್ಯಯನ ಅತ್ಯವಶ್ಯಕʼ ಎಂದರು.

ಸ್ವಾಭಿಮಾನಿ ಕಲ್ಯಾಣ ಪರ್ವದ ಅಧ್ಯಕ್ಷರಾದ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕಲ್ಯಾಣದ ಕೀರ್ತಿ ವಿಶ್ವದಾದ್ಯಂತ ಬೆಳಗಬೇಕೆಂಬುದು ಲಿಂಗಾನಂದ ಸ್ವಾಮಿ, ಮಾತಾಜಿಯವರ ಸದಾಶಯವಾಗಿತ್ತು. ಬಸವಾದಿ ಶರಣರು ನಡೆದಾಡಿದ ಕಲ್ಯಾಣದ ನೆಲದಲ್ಲಿ ಪ್ರತೀ ವರ್ಷ ಹೆಚ್ಚು ಕಲ್ಯಾಣ ಪರ್ವಗಳು ನಡೆಯಬೇಕು.

ಹುಬ್ಬಳ್ಳಿ ಹೊಸಮಠದ ಡಾ. ಚಂದ್ರಶೇಖರ ಸ್ವಾಮೀಜಿ ಬಸವ ಧ್ಜಜಾರೋಹಣ ನೆರವೇರಿಸಿ ಮಾತನಾಡಿ, ʼ2025ರ ಮೇ ತಿಂಗಳಲ್ಲಿ ಲಂಡನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಬಸವ ತತ್ವ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಳ್ಳಬೇಕುʼ ಎಂದು ಕರೆ ನೀಡಿದರು.

ಚಿತ್ರದುರ್ಗದ ಕು.ತರಂಗಿಣಿ, ಕಲಬುರಗಿಯ ಕು.ಶ್ರೇಯಾ ಚೀಲಾ ಅವರ ವಚನ ನೃತ್ಯ ಸಭೀಕರ ಗಮನ ಸೆಳೆಯಿತು. ಮಂಡ್ಯ ಜಿಲ್ಲೆ ಮದ್ದೂರಿನ ಜನ್ಯ ಮ್ಯೂಜಿಕ್ ಅಕಾಡೆಮಿಯ ಹರ್ಷಿತಾ ಮತ್ತು ಶಿವು ಮದ್ದೂರ ಅವರ ಭಕ್ತಿ ಗೀತೆಗಳ ಗಾಯನ ನೆರೆದ ಭಕ್ತರ ಹುಬ್ಬೇರಿಸುವಂತೆ ಮಾಡಿತು.

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ನ್ಯಾಯಮೂರ್ತಿ ಎಸ್.ಎಸ್.ನಾಗರಾಳೆ, ಬೆಂಗಳೂರಿನ ಶ್ರೀಶೈಲ ಮಸೂತಿ, ಕೊಪ್ಪಳದ ವೀರಣ್ಣ ಕೊರ್ಲಳ್ಳಿ, ನೃತ್ಯ ರತ್ನ ಪೂರ್ಣಚಂದ್ರ ಮೈನಾಳೆ, ಪ್ರೊ.ಎಸ್.ವಿ.ಕಲ್ಮಠ ಬೀದರ, ಪ್ರದೀಪ ಹೂಗಾರ ಸಿದ್ದೇಶ್ವರ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶಿವಮೊಗ್ಗ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯಬಸವಾನಂದ ಸ್ವಾಮೀಜಿ ಚಿಕ್ಕಮಗಳೂರು, ಮಾತೆ ಶಾಂತಾದೇವಿ ಧಾರವಾಡ, ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರು, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ, ಬಸವಕಲ್ಯಾಣ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ಹುಬ್ಬಳ್ಳಿಯ ಸೂಫಿ ಸಂತರು, ಕೊಪ್ಪಳದ ವೀರಣ್ಣ ಕೊರ್ಲಳ್ಳಿ, ಕಲ್ಲಪ್ಪ ದೇಶಮುಖ, ಶಿವರಾಜ ಪಾಟೀಲ ಅತಿವಾಳ, ಬೆಂಗಳೂರಿನ ಶ್ರೀಶೈಲ ಮಸೂತಿ ಸೇರಿದಂತೆ ಮಹಾರಾಷ್ಟ್ರ ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಶರಣ ಶರಣೆಯರು ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *