ಹುನಗುಂದ
ಹುನಗುಂದ ತಾಲ್ಲೂಕಿನ ಹೂವನೂರು ಗ್ರಾಮದಲ್ಲಿ ಸ್ವಾಭಿಮಾನಿ ಶರಣ ಮೇಳ ಕಾರ್ಯಕ್ರಮವನ್ನು ನವ ಮುಂಬೈ ಮಾಜಿ ಮೇಯರ್ ಶಶಿಕಾಂತ ಬಿರಜದಾರ ಸೋಮವಾರ ಉದ್ಘಾಟಿಸಿದರು.
‘ದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ತಿಳಿಸಿದವರು ಬಸವೇಶ್ವರರು. ವರ್ಣಭೇದ ಮತ್ತು ಜಾತಿಭೇದ ವಿರುದ್ಧ ಹೋರಾಟ ಮಾಡಿದರು. ವಚನ ಸಾಹಿತ್ಯ ಮತ್ತು ಅವರ ವಿಚಾರ ಧಾರೆಯಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಬಸವೇಶ್ವರ ಪುತ್ಥಳಿ, ಭವನ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದೇನೆ,’ ಎಂದರು.
ಲಿಂಗಾಯತ ಧರ್ಮ ಸ್ಥಾಪನೆಯಾಗಿ ಒಂಬೈನೂರು ವರ್ಷವಾದರೂ ಸ್ವತಂತ್ರ ಧರ್ಮದ ಮಾನ್ಯತೆ ಸಿಗದೇ ಇರುವುದು ಬಹು ದೊಡ್ಡ ದುರಂತ ಎಂದು ಸ್ವಾಭಿಮಾನಿ ಶರಣ ಮೇಳದ ಉತ್ಸವ ಸಮಿತಿ ಅಧ್ಯಕ್ಷರಾದ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಮೇಳದ ಮೊದಲ ದಿನ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟದ ಮುಂದಿನ ನಡೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತೆ ಮಹಾದೇವಿ ಅವರು ಲಿಂಗಾಯಿತ ಧರ್ಮ ಒಂದು ಸ್ವತಂತ್ರ ಧರ್ಮ ಎಂದು ಮೊಟ್ಟಮೊದಲ ಬಾರಿಗೆ ಘೋಷಿಸಿದರು, ನಾವೆಲ್ಲರೂ ಒಟ್ಟಾಗಿ ಹೋರಾಡಿ ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ್ಯ ಧರ್ಮದ ಮಾನ್ಯತೆ ಪಡೆಯೋಣ ಎಂದರು.

ಬೀದರ ಬಸವಮಂಟಪದ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ ಮಹಿಳಾ ಗಣ ರಾಷ್ಟ್ರೀಯ ಅಧ್ಯಕ್ಷೆ ಸತ್ಯಾದೇವಿ ಮಾತನಾಡಿ, ಎಲ್ಲರೂ ನಾನು ಲಿಂಗಾಯಿತ ಎಂದು ಎದೆ ತಟ್ಟಿ ಹೇಳಿಕೊಂಡು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಹೋರಾಟ ಮಾಡಿದಾಗ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಸಾಧ್ಯ. ಪ್ರತಿಯೊಬ್ಬರ ತಲೆಯ ಮೇಲೆ ಧರ್ಮದ ಹೊರೆ ಇದೆ, ಎಂದರು.

ಮಂಡ್ಯದ ಸಾಲಳ್ಳಿಯ ಓಂಕಾರ ಸ್ವಾಮೀಜಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಧರ್ಮವೇ ಲಿಂಗಾಯಿತ ಧರ್ಮವಾಗಿದೆ, ರಾಜ್ಯದಲ್ಲಿ ಲಿಂಗಾಯತ ಪ್ರಬಲವಾಗಿದೆ. ನಮ್ಮ ಸಮುದಾಯ ಧರ್ಮಗ್ರಂಥ ವಚನ ಸಾಹಿತ್ಯವಾಗಿದೆ. ಲಿಂಗಾಯತ ಧರ್ಮದ ಮಾನ್ಯತೆ ಪಡೆಯೋಣ ಎಂದರು.

ಧಾರವಾಡದ ಸೂಫಿ ಗುರು ಅಬ್ದುಲ್ ರಜಾಕ್ ಖಾದ್ರಿ ಮಾತನಾಡಿದರು. ಮಕ್ಕಳ ವಚನ ನೃತ್ಯ, ವಚನ ಗಾಯನ ಭಕ್ತರ ಕಣ್ಮನ ಸೆಳೆಯಿತು. ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾತೆ ಸತ್ಯದೇವಿ, ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಜಯಬಸವಾನಂದ ಸ್ವಾಮೀಜಿ, ಸಾಲಹಳ್ಳಿಯ ಓಂಕಾರೇಶ್ವರ ಸ್ವಾಮೀಜಿ, ಅಭಿನವ ಗುರು ಲಿಂಗರೂಢರು, ಮಾತೆ ಶಾಂತಾದೇವಿ, ಮುದಕಪ್ಪ ಚಲವಾದಿ ಇತರರಿದ್ದರು.

ಮೂರ್ತಿ ಪೂಜೆ ವಿರೋದಿಸಿ ಕಾರ್ಯಕ್ರಮದಲ್ಲಿ ಎರಡೆರಡು ಮೂರ್ತಿಗಳನ್ನು ಇಟ್ಟು ಪೂಜೆ ಮಾಡಿದದ್ದರ ಹಿನ್ನಲೆ ಏನು
ಬಸವನ ಮೂರ್ತಿಯೇ ಧಾನ್ಯಕ್ಕೆ ಮೂಲ,
ಬಸವನ ಕೀರ್ತಿಯೇ ಜ್ಞಾನಕ್ಕೆ ಮೂಲ,
ಬಸವಾ ಬಸವಾ ಎಂಬುದೇ ಭಕ್ತಿ ಕಾಣಾ
ಕಪಿಲಸಿದ್ಧ ಮಲ್ಲಿಕಾರ್ಜುನ
ಇಲ್ಲಿ ಯಾವುದು ಹೋಮ ಹವನ ಯಜ್ಞ ಇನ್ನಿತರ ಮೂಢನಂಬಿಕೆಗಳು ಆಚರಣೆ ಮಾಡಿಲ್ಲ