ಸ್ವಾತಂತ್ರ್ಯ ಹೋರಾಟದಂತೆಯೇ ಸರ್ವೋದಯ ಚಳುವಳಿ ನಡೆಯಬೇಕು: ಪ್ರಕಾಶ್ ಅರಸ್

ಹೊಸದುರ್ಗ

ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯಲ್ಲಿ ನಡೆದ ೩ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಗ್ಗೆ ತಾವರಕೆರೆಯಿಂದ ಬುಧವಾರ ಮಧ್ಯಾಹ್ನ ೧ ಗಂಟೆಗೆ ಪಾಂಡೋಮಟ್ಟಿಗೆ ತಲುಪಿತು.

ಮಧ್ಯಾಹ್ನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಪ್ರಕಾಶ್ ಅರಸ್ ಮಾತನಾಡಿ ಸರ್ವೋದಯದ ಹೋರಾಟಗಳಲ್ಲಿ ಅನೇಕ ಅಡೆತಡೆಗಳು ಬರುವುದು ಸಹಜ. ಆದರೆ ಹೋರಾಟದಿಂದ ಹಿಂದೆ ಸರಿಯಬಾರದು. ಸ್ವಾತಂತ್ರ್ಯ ಸಂದರ್ಭದಲ್ಲಿ ಅನೇಕ ಹೋರಾಟದ ಫಲವಾಗಿಯೇ ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು.

ಸ್ವಾತಂತ್ರ್ಯದ ಹೋರಾಟದಂತೆ ಸರ್ವೋದಯದ ಹೋರಾಟ ಮಾಡಬೇಕಾಗಿದೆ. ಆದರೆ ಸರಿಯಾದ ತಿಳಿವಳಿಕೆಯ ಕೊರತೆಯಿಂದ ಅನೇಕ ಹೋರಾಟ, ಸಂಘಟನೆಗಳು ಹಿಂದಕ್ಕೆ ಸರಿಯುತ್ತಿವೆ. ಆದ್ದರಿಂದ ಅವರಿಗೆ ಇಂತಹ ಸಂಘಟನೆಗಳ ಮೂಲಕ ಅರಿವನ್ನು ಮೂಡಿಸುವ ಕಾರ್ಯ ನಡೆಯಬೇಕು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬುದ್ಧ, ಬಸವ, ಗಾಂಧಿ ಅಂಬೇಡ್ಕರರ ತತ್ವಗಳು ನಮ್ಮ ಕಣ್ಮುಂದೆ ಇವೆ. ಅವುಗಳನ್ನು ಜಾರಿಗೆ ತರುವ ಹಿನ್ನಲೆಯನ್ನಿಟ್ಟುಕೊಂಡು ಹೋರಾಟ ಮಾಡಬೇಕಾದ ಅಗತ್ಯತೆ ಇದೆ.

ಈ ಲೋಕಕ್ಕೆ ಬಂದ್ಮೇಲೆ ಏನಾದರೂ ಉಪಕಾರ ಮಾಡುವ ಗುಣ ಪ್ರತಿಯೊಬ್ಬ ಮನುಷ್ಯ ಬೆಳೆಸಿಕೊಂಡರೆ ತಾಯಿ ಋಣ ತೀರಿಸಿದಂತೆ. ಲೋಕಕಲ್ಯಾಣದ ಕಾರ್ಯ ಮಾಡಬೇಕೆ ಹೊರತು ಲೋಕಕಂಟಕ ಕಾರ್ಯ ಮಾಡಬಾರದು. ಈ ಹಿನ್ನಲೆಯಲ್ಲೇ ಸರ್ವೋದಯದ ಪಾದಯಾತ್ರೆ ನಡೆಯುತ್ತಿದೆ. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಂಬಿಕೆ ಹೀನ ಮನುಷ್ಯನ ಬದುಕು ಬರಡು.

ಮನುಷ್ಯನಿಗೆ ಬಾಹ್ಯ ಪರಿಸರಕ್ಕಿಂತ ಆಂತರಿಕ ಪರಿಸರ ಕೆಟ್ಟೋಗಿದೆ. ಆಂತರಿಕ ಪರಿಸರ ಕೆಟ್ಟೋಗದ ಹಾಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನುಷ್ಯನಿಗೆ ಒಂದು ಬದ್ಧತೆ ಬೇಕು. ಬದ್ಧತೆಹೀನ ಬದುಕಿನಿಂದ ಸಮಾಜ ಸುಧಾರಣೆ ಅಸಾಧ್ಯ. ದೈಹಿಕವಾಗಿ ಸರ್ವೋದಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮಾನಸಿಕವಾಗಿ ಪಾಲ್ಗೊಳ್ಳುವಂತಾದರೆ ಸರ್ವೋದಯದ ಪಾದಯಾತ್ರೆ ಸಾರ್ಥಕವಾಗುವುದು.

ಇನ್ನೋರ್ವ ಸಾಹಿತಿ, ಹೋರಾಟಗಾರತಿ ಕೆ ಎಸ್ ವಿಮಲಾ ಮಾತನಾಡಿ ಒಟ್ಟು ಪರಿಸರ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಪರಿಸರವನ್ನು ನಾಶ ಮಾಡಿ ಅಭಿವೃದ್ಧಿಯಾಗದೇ ಪರಿಸರದ ಜೊತೆಗೆ ಅಭಿವೃದ್ಧಿಯಾಗಬೇಕು. ಇದನ್ನು ಸರಕಾರ ಗಮನಿಸಬೇಕು.

ರಾಜಕೀಯ ಎಂದರೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಎಚ್ಚರ ಮತದಾರ ಪ್ರಭುವಿಗೆ ಇರಬೇಕು. ಏನಾದರೂ ಬದಲಾವಣೆ ಬಯಸಬೇಕೆಂದರೆ ಗಟ್ಟಿಯಾದ ಧ್ವನಿಬೇಕು. ಸರ್ವೋದಯದ ಅಂಶಗಳು ಈಡೇರಬೇಕಾದರೆ ಎಲ್ಲರಿಂದ ಗಟ್ಟಿಯಾದ ಧ್ವನಿ ಬಂದಾಗ ಪಾದಯಾತ್ರೆ ಸಾರ್ಥಕ. ಈ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೆಣ್ಣಿಗೆ ಸಮಾನ ಅವಕಾಶ ಇರುವುದರಿಂದ ಬದಲಾವಣೆಗೆ ಮಹಿಳೆಯರು ಮುಂದೆ ಬರಬೇಕು.

ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಪ್ರತಿಜ್ಞಾವಿಧಿ ಬೋಧಿಸಿದರು. ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮಿಗಳು, ವೇದಿಕೆಯ ಮೇಲೆ ಮಾಜಿ ಶಾಸಕ ಮಹಿಮಾ ಜೆ ಪಾಟೀಲ್, ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ಲೋಕಶಪ್ಪ ಮತ್ತಿತರರಿದ್ದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ‘ಒಕ್ಕಲಿಗ ಒಕ್ಕದಿರೆ ನಾಡೆಲ್ಲ ಬಿಕ್ಕುವುದು’ ಎನ್ನುವ ಬೀದಿ ನಾಟಕ ಪ್ರದರ್ಶಿಸಿದರು. ಕೆ ಜಿ ಶಿವಮೂರ್ತಿ ಸ್ವಾಗತಿಸಿದರೆ ಧನಂಜಯ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *