ಕಲಬುರಗಿ
ಯಾವುದು ಮಾನವನ ಕಲ್ಯಾಣಕ್ಕೆ ಪೂರಕವಾಗಿರುವುದೋ ಅದೇ ಧರ್ಮ. ಅಂತಹ ಸಕಲ ಜೀವಾತ್ಮರಿಗೆ ಲೇಸು ಬಯಸುವ ಲಿಂಗಾಯತ ಧರ್ಮವನ್ನು ವಿಶ್ವಗುರು ಬಸವಣ್ಣನವರು ಸ್ಥಾಪಿಸಿದರು ಎಂದು ಸಂತೋಷ ಹೂಗಾರ ತಿಳಿಸಿದರು.
ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವರಾಜ ಕಲ್ಲಾ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ಮನೆಯಂಗಳದಲ್ಲಿ ವಚನ ವೈಭವ ವಿಶೇಷ ಕಾರ್ಯಕ್ರಮದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ವಿಷಯ ಕುರಿತು ಮಾತನಾಡಿದ ಅವರು, ಲಿಂಗಾಯತರು ವೈದಿಕ ಜಾತಿವ್ಯವಸ್ಥೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ ಎಂದರು.
ಅನುಭವ ಮಂಟಪವೇ ಜಗತ್ತಿನ ಮೊದಲ ಪ್ರಜಾಸಂಸತ್ತು ಎಂಬುದನ್ನು ಎತ್ತಿ ಹಿಡಿದರು. ವಚನಗಳಲ್ಲಿ ಇಂದಿನ ವಿಶ್ವಸಂಸ್ಥೆಯ ಉದ್ದೇಶಗಳು ಮತ್ತು ಮಾನವ ಹಕ್ಕುಗಳು ಸಹ ಅಡಕವಾಗಿವೆ ಎಂದು ಅವರು ಹೇಳಿದರು.
ಇಂತಹ ಉದಾತ್ತ ತತ್ತ್ವಗಳನ್ನು ಹೊಂದಿರುವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂದು ಅವರು ಒತ್ತಾಯಿಸಿದರು.
ಮೌಢ್ಯಾಚರಣೆಗಳು, ಕಂದಾಚಾರಗಳು ಮತ್ತು ಬೌದ್ಧಿಕ ದಾರಿದ್ರ್ಯಗಳಿಂದ ಮುಕ್ತಿ ಪಡೆಯಲು ವಚನ ಸಾಹಿತ್ಯವೇ ದಾರಿದೀಪ ಎಂದು ಅವರು ತಿಳಿಸಿದರು. “ನಿಜವಾದ ವಚನ ತತ್ತ್ವಗಳನ್ನು ಪಾಲಿಸುವ ಮುಖೇನವೇ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ಅರಿತು ಬದುಕಲು ಸಾಧ್ಯ” ಎಂಬ ಸಂದೇಶ ನೀಡಿದರು.
ಉದ್ಯಮಿ ಎಂ.ಕೆ. ಪಾಟೀಲ ಕೆಲ್ಲೂರ್ ಅಧ್ಯಕ್ಷತೆ ವಹಿಸಿದ್ದರು. ಆರ್.ಜಿ. ಶೆಟಗಾರ, ನಳಿನಿ ಮಹಾಗಾಂವಕರ್, ಶಿವಶರಣಪ್ಪ ದೇಗಾಂವ ಮತ್ತು ಶರಣು ಶರಣೆಯರು ಉಪಸ್ಥಿತರಿದ್ದರು.