ಶಹಾಬಾದ
ದೇವರ ಹೆಸರಿನಲ್ಲಿ ಜನಸಮಾನ್ಯರಿಗೆ ಮೌಢ್ಯವನ್ನು ಬಿತ್ತಿದ ಪಟ್ಟಭದ್ರ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಶರಣರು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಉಂಟು ಮಾಡಿದರು ಎಂದು ಸಾಹಿತಿ, ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ತಾಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ಬಸವ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ದೀನ ದಲಿತರಿಗೆ ದೇವರ ಗುಡಿಯಲ್ಲಿ ಪ್ರವೇಶ ಇರದ ಸಂದರ್ಭದಲ್ಲಿ ಅವರಿಗೆ ದೇಹವೇ ದೇವಾಲಯ ಪರಿಕಲ್ಪನೆ ಕೊಟ್ಟು ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲೆಂದು ಹೇಳಿದ ಇಷ್ಟಲಿಂಗದ ಜನಕ ಬಸವಣ್ಣ. ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಬರೆದರೆ, ಜಾಗತಿಕ ಮಟ್ಟದ ಸಂವಿಧಾನವನ್ನು ಬರೆದವರು ಬಸವಣ್ಣನವರು. ಆದ್ದರಿಂದ ವಿಶ್ವಗುರು ಎಂದು ಕರೆಯಿಸಿಕೊಳ್ಳುತ್ತಾರೆ ಎಂಬುದನ್ನು ಮರೆಯಬಾರದು ಎಂದರು.
ದೇವರ ಬಗ್ಗೆ ಭಯ, ಆಶ್ಚರ್ಯ ಹುಟ್ಟಿಸಿ ಅವರನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿದ್ದ ಪುರೋಹಿತಶಾಹಿಗಳ ವ್ಯವಸ್ಥೆಯಿಂದ ಹೊಳಲಾಡುತ್ತಿರುವ ಜನರಿಗೆ ನಮ್ಮೊಳಗೆ ದೇವರಿದ್ದಾನೆ. ಮಣ್ಣು ಬಿಟ್ಟು ಮಡಕೆ ಇಲ್ಲ. ತನ್ನ ಬಿಟ್ಟು ದೇವರಿಲ್ಲ ಎಂದು ಅರಿಯುವ ಮಾರ್ಗವನ್ನು ಹೇಳಿಕೊಟ್ಟವರಲ್ಲಿ ಬಸವಾದಿ ಶರಣರೇ ಮೊದಲಿಗರಾಗಿದ್ದಾರೆ ಎಂದು ವಿವರಿಸಿದರು.

ಪ್ರವಚನಕಾರರಾದ ಬೆಳಗಾವಿ ಜನವಾಡದ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಜಾತಿರಹಿತ ಸಮಾಜದ ಪರಿಕಲ್ಪನೆ, ಸಮಸಮಾಜವನ್ನು ನಿರ್ಮಾಣ ಮಾಡುವ ಕನಸು ಶರಣರದಾಗಿತ್ತು. ಅವರ ವಚಗಳನ್ನು ಪಚನ ಮಾಡಿಕೊಂಡರೆ ಲೋಕದಲ್ಲಿ ಶಾಂತಿ, ಸುವ್ಯವಸ್ಥಿತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಅತಿಥಿಗಳಾಗಿ ಅನಿಲ ಜಗನ್ನಾಥ ಕಲ್ಯಾಣಿ, ಬಸವ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಮುಸ್ತಾರಿ ಮಾತನಾಡಿದರು. ಭಂಕೂರ ಗ್ರಾಮದ ಗಣ್ಯರಾದ ಬಸವಂತರಾಯ ದಳಪತಿ ವೇದಿಕೆಯಲ್ಲಿದ್ದರು.
ಬಸವ ಸಮಿತಿ ಕಾರ್ಯದರ್ಶಿ ಸಿದ್ದರಾಮ ಕೊರಪಳ್ಳಿ ನಿರೂಪಿಸಿದರು. ಶರಣಬಸಪ್ಪ ನಾಗನಹಳ್ಳಿ ಸ್ವಾತಿಸಿದರು. ಅಮರಪ್ಪ ಹೀರಾಳ ವಂದಿಸಿದರು. ಬಸವ ಸಮಿತಿ ಸರ್ವ ಪದಾಧಿಕಾರಿಗಳು ಹಾಗೂ ಭಂಕೂರಿನ ಗ್ರಾಮಸ್ಥರು ಹಾಜರಿದ್ದರು.