ಕೃಷ್ಣದೇವರಾಯನ ತಂದೆ ಕನ್ನಡಿಗನಾಗಿದ್ದರೂ ಅವನ ತಾಯಿಯ ಭಾಷೆ ತೆಲುಗು ಅವನಿಗೆ ಹತ್ತಿರವಾಯಿತು. ಕನ್ನಡಿಗರ ರಾಜನಾಗಿದ್ದರೂ ‘ಆಂಧ್ರ ಭೋಜ’ನೆಂದು ಪ್ರಸಿದ್ಧನಾದ.
ತನ್ನ ಆಸ್ಥಾನದಲ್ಲಿ ತೆಲುಗಿನ ೮ ಮಹಾಕವಿಗಳಿಗೆ ಆಶ್ರಯ ನೀಡಿ, ‘ಆಮುಕ್ತ ಮಾಲ್ಯದ’ ಎಂಬ ತೆಲುಗು ಕೃತಿಯನ್ನು ಸ್ವತಃ ರಚಿಸಿದನು. ಅವನ ಕಾಲ ತೆಲುಗು ಸಾಹಿತ್ಯದ ಸುವರ್ಣಯುಗವಾಗಿತ್ತು.
ತೆಲುಗಿನ ನಂತರ ಸಂಸ್ಕೃತವನ್ನು ಪ್ರೋತ್ಸಾಹಿಸಿ ‘ಜಾಂಬವತೀ ಕಲ್ಯಾಣ’ ಎಂಬ ಕೃತಿಯನ್ನು ಸ್ವತಃ ರಚಿಸಿದ. ಅವನು ಬರೆಸಿದ ಕನ್ನಡ ಕೃತಿ ಒಂದೇ ಒಂದು – ತಿಮ್ಮಣ್ಣ ಕವಿಯ ‘ಉತ್ತರ ಮಹಾಭಾರತ.’
ತೆಲುಗು ಮೂಲದ ಮಂತ್ರಿ ತಿಮ್ಮರಸನ ಬೆಂಬಲದಿಂದ ಪಟ್ಟಕ್ಕೆ ಬಂದ ಕೃಷ್ಣದೇವರಾಯನ ಆಸ್ಥಾನ, ಅರಮನೆ, ಆಡಳಿತ, ಸೈನ್ಯದಲ್ಲಿ ತೆಲುಗಿನವರೇ ತುಂಬಿಕೊಂಡರು.
ಗಂಡುಮಕ್ಕಳಿಲ್ಲದ ಅವನು ತನ್ನ ಇಬ್ಬರೂ ಹೆಣ್ಣುಮಕ್ಕಳನ್ನು ತೆಲುಗಿನವರಾದ ರಾಮರಾಯ, ತಿರುಮಲ ರಾಯರಿಗೆ ಕೊಟ್ಟು ಮದುವೆ ಮಾಡಿದ.
ತೆಲುಗಿನ ತಿರುಪತಿ ವೆಂಕಟೇಶ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಹಂಪಿಯ ವಿರೂಪಾಕ್ಷನನ್ನು ಉಪೇಕ್ಷಿಸಿದ. ಮೂಲೆಗುಂಪಾದ ಕನ್ನಡಿಗರು ಅವನ ಪಕ್ಷಪಾತದ ವಿರುದ್ಧ ತಿರುಗಿ ಬಿದ್ದರು.
(‘ಕೃಷ್ಣದೇವರಾಯ: ತೆಲುಗು ಸಂಸ್ಕೃತಿಯ ಆಕ್ರಮಣ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)