ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ: ಮಲ್ಲೇಪುರಂ ವೆಂಕಟೇಶ್ ಸೇರಿ ಹಲವರು ಭಾಗಿ

ಬಸವ ಮೀಡಿಯಾ
ಬಸವ ಮೀಡಿಯಾ

ತೇರದಾಳ

ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ದೇವಸ್ಥಾನಕ್ಕೆ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಸೋಮವಾರ ಜರುಗಿತು.

ನೂತನ ದೇವಸ್ಥಾನದ ಎಲ್ಲ ಕಳಶಗಳನ್ನು ಶಾಸ್ರೋಕ್ತ ವಿಧಿ-ವಿಧಾನಗಳಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೂಜಿಸಿ ಗೋಪುರಗಳ ಕಳಸಾರೋಹಣ ನಡೆಸಲಾಯಿತು.

ವಿವಿಧ ಮಠಾಧೀಶರಿಂದ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ದೊಡ್ಡ ಕಳಸ ಸೇರಿದಂತೆ ನವಕಳಸಗಳ ಆರೋಹಣ ಜರುಗಿತು. ಬಳಿಕ ಪೂಜ್ಯರಿಂದ ದೇವಸ್ಥಾನದ ಒಳಗೆ-ಹೊರಗೆ ಜ್ಯೋತಿ ಬೆಳಗಿಸುವ ಮೂಲಕ ಜೀರ್ಣೋದ್ಧಾರ ಗೊಂಡ ಅಲ್ಲಮಪ್ರಭುದೇವಸ್ಥಾನವು ಲೋಕಾರ್ಪಣೆ ಗೊಂಡಿತು. ಬಳಿಕ ನಂದಿಕೋಲು ಸಮೇತ ಪಲ್ಲಕ್ಕಿ ಉತ್ಸವ ಜರುಗಿತು.

ದೇವಸ್ಥಾನದ ಲೋಕಾರ್ಪಣೆ ನಂತರ ನಡೆದ ಧರ್ಮಸಭೆಯನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು.

ಸಮಸಮಾಜದ ನಿರ್ಮಾಣಕ್ಕೆ ಅಲ್ಲಮರು, ಬಸವಣ್ಣನವರು ನಿರ್ಮಿಸಿದ ಅನುಭವಮಂಟಪದ ಶೂನ್ಯ ಸಿಂಹಾಸನಾಧೀಶರಾದ ಅಲ್ಲಮರು ಬಯಲಿನಲ್ಲಿ ಬಯಲಾಗಿದ್ದವರು. ಜಗತ್ತಿನ ಎಲ್ಲ ದಾರ್ಶನಿಕರನ್ನು ಒಟ್ಟುಗೂಡಿಸಿದರೂ ಶ್ರೀಅಲ್ಲಮಪ್ರಭುಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ, ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಜಿ ಹೇಳಿದರು.

ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಅಲ್ಲಮರು ಎಲ್ಲೆಡೆ ಸಂಚರಿಸಿ ಭಕ್ತಿಯ, ಜ್ಞಾನದ ಹಾಗೂ ಸಮಸಮಾಜದ ಕನಸನ್ನು ನನಸಾಗಿಸಲು ಜಾಗೃತಿ ಮೂಡಿಸಿದರು ಎಂದರು.

ಸಭೆಯಲ್ಲಿ ವಕ್ಫ್ ವಿಷಯದ ಬಗ್ಗೆ ಮಾತನಾಡಲು ಯತ್ಮಿಸಿದ ಬಿಜೆಪಿ ಶಾಸಕ ಯತ್ನಾಳ್ ಜನರ ಪ್ರತಿರೋಧ ಎದುರಿಸಿ ನಿರ್ಗಮಿಸಿದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಶ್ರೀಗಳು, ಹಿಪ್ಪರಗಿ ಸಂಗಮೇಶ್ವರ ಆಶ್ರಮದ ಪೂಜ್ಯ ಪ್ರಭು ಮಹಾರಾಜರು, ಹಂದಿಗುಂದದ ಶಿವಾನಂದಶ್ರೀಗಳು, ಶೇಗುಣಸಿಯ ಡಾ.ಮಹಾಂತ ಪ್ರಭುಶ್ರೀಗಳು, ಚಿಮ್ಮಡದ ಪ್ರಭು ಶ್ರೀ, ಕುರುಹಿನಶೆ ಸಮಾಜದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಸೇರಿದಂತೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ನಾಡೋಜ ಜಗದೀಶ ಗುಡಗುಂಟಿಮಠ, ವಿಜಯಪುರ ಶಾಸಕ ಬಸನಗೌಡ ಪಾಟೀಲ, ಹಿರೇಮಠದ ಗಂಗಾಧರ ದೇವರು, ತೆಲಂಗಾಣದ ವಿರುಪಾಕ್ಷದೇವರು, ಶಾಸಕ ಸಿದ್ದು ಸವದಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ದೇವಸ್ಥಾನದ ಶಿಲ್ಪಿ ಉಡುಪಿಯ ರಾಜಶೇಖರ ಹೆಬ್ಬಾರ ದಂಪತಿಗೆ, ಬೆಳ್ಳಿ-ಬಂಗಾರ ಸೇವೆ ಸಲ್ಲಿಸಿದ ಮಲ್ಲಪ್ಪಣ್ಣ ಜಮಖಂಡಿ, ಚಂದ್ರಪ್ಪ ಜಗದಾಳ, ಡಾ.ಶಂಕರ ಅಥಣಿ, ಅಜಿತ ದೇಸಾಯಿ, ಭಾರತಿ ಆಸಂಗಿ, ಪ್ರಭುಗೌಡ ಪಾಟೀಲ, ಭೀಮಗೊಂಡ ಸದಲಗಿ, ಶಿವಶಂಕರ ಮುಕರಿ, ಶಿವಾನಂದ ಬಡಿಗೇರ, ನಾಗಪ್ಪ ಸನದಿ, ಪ್ರಕಾಶ ಕಾಲತಿಪ್ಪಿ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಹಾಪ್ರಸಾದ ವಿತರಣೆಯಾಯಿತು.

Share This Article
2 Comments
  • ಅಲ್ಲಮಪ್ರಭುದೇವರ ವಿಚಾರವೇ ಗುಡಿ ಇಲ್ಲದ ಬಯಲು ವಿಚಾರವಾಗಿದೆ ಆದರೆ ಪ್ರಸ್ತುತ ಜಗತ್ತಿಗೆ ಶರಣರ ವಿಚಾರ ಪ್ರಸಾರದ ಅವಶ್ಯಕತೆಯಿರುವ ಕಾರಣ ಶರಣರ ಗುಡಿಗಳು ನಿರ್ಮಾಣವಾಗುತ್ತಿವೆ. ಬಹಳ ಸಂತೋಷ

  • ಶರಣರ ಹಾಗೂ ಅಲ್ಲಮ ಪ್ರಭುಗಳ ವಿಚಾರಧಾರೆ ಎಷ್ಟು ಬಸವ ಭಕ್ತರಿಗೆ ಮನವರಿಕೆಯಾಗಿದೆ.
    ಕಲ್ಲು ಮನೆಯ ಮಾಡಿ
    ಕಲ್ಲು ದೇವರ ಮಾಡಿ…ಕಲ್ಲಮೇಲೆ ಕಲ್ಲನಿಟ್ಟು ಕಡೆದಡೆ ದೇವರೆತ್ತ ಹೊಂದಲು… ಗುಹೇಶ್ವರಾ ನೀ ಕಲ್ಲಾದಡೆ ನಾನೇನನಪ್ಪುವೆನಯ್ಯಾ…..

Leave a Reply

Your email address will not be published. Required fields are marked *