ಬೂದು ಕುಂಬಳಕಾಯಿಯನ್ನು ಅಂಗಡಿಯ, ಮನೆಯ ತಲೆಬಾಗಿಲಿನ ಹೊರಗೆ ಕರಿ ಕಂಬಳಿಯ ಹಗ್ಗದಿಂದ ಕಟ್ಟಿ ನೇತುಹಾಕಿ ಒಣಗಿಸಿ ಹಾಳು ಮಾಡುತ್ತಾರೆ.
ಹಾಗೂ ಕುಂಬಳಕಾಯಿಯಲ್ಲಿ ಕುಂಕುಮ ಬೆರೆಸಿ, ಹಬ್ಬ ಹರಿದಿನಗಳಲ್ಲಿ, ಅಂಗಡಿ – ಮನೆ ಓಪನಿಂಗ್ ಸಮಯದಲ್ಲಿ, ಅಮವಾಸ್ಯೆ – ಹುಣ್ಣಿಮೆಯ ದಿನಗಳಲ್ಲಿ ಹೊಸ್ತಿಲ ಮುಂದೆ ಒಡೆಯುತ್ತಾರೆ.
ಈ ಕುಂಕುಮ ಬೆರೆಸಿದ ಕಾರಣದಿಂದಾಗಿ ಬಡವರು, ಭಿಕ್ಷುಕರು, ದನಕರುಗಳು ಕೂಡಾ ತಿನ್ನುವುದಿಲ್ಲ. ಇದೇ ರೀತಿ ತೆಂಗಿನಕಾಯಿ ಕೂಡಾ ಬೀದಿಗಳಲ್ಲಿ ಒಡೆದು ಬೀಸಾಕುತ್ತಾರೆ, ಹಸಿ ತೆಂಗು ಮಣ್ಣು ಸೇರಿ ಯಾರಹೊಟ್ಟೆಗೂ ಸೇರುವುದಿಲ್ಲ.
ನಿಂಬೆಹಣ್ಣನ್ನು ವಾಹನಗಳಿಗೆ, ಮನೆಯ, ಅಂಗಡಿಗಳ, ಬಾಗಿಲಿಗೆ ಕಟ್ಟುತ್ತಾರೆ, ನಿಂಬೆಹಣ್ಣನ್ನು ಕೊಯ್ದು ಕುಂಕುಮ ಹಚ್ಚಿ ಹೊಸ್ತಿಲ ಎಡ ಬಲ ಬದಿಗಳಲ್ಲಿ ಇಟ್ಟು ಚೆಲ್ಲುತ್ತಾರೆ, ದೃಷ್ಟಿ ತೆಗೆದು ಕಾಲಿನಿಂದ ತುಳಿದು ಚೆಲ್ಲುತ್ತಾರೆ, ವಾಹನಗಳ ಗಾಲಿಯ ಅಡಿಯಲ್ಲಿ ನಿಂಬೆಹಣ್ಣುಗಳನ್ನು ಇಟ್ಟು ಅದರ ಮೇಲೆ ವಾಹನ ಚಲಾಯಿಸಿ ನಿಂಬೆಹಣ್ಣು ಮಣ್ಣು ಪಾಲು ಮಾಡಲಾಗುತ್ತದೆ.
ಹೊಸ ಮನೆಗೆ ಹೋಗುವಾಗ ಹಾಲನ್ನು ಕಾಯಿಸಿ ಉಕ್ಕಿಸಿ ಹಾಳು ಮಾಡುತ್ತಾರೆ. ನಾಗರ ಪಂಚಮಿ ದಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲನ್ನು ಸುರಿಯುತ್ತಾರೆ, ತಮ್ಮ ಮೆಚ್ಚಿನ ನಾಯಕ ನಟರ, ರಾಜಕಾರಣಿಗಳ ಕಟೌಟ್ ಗಳಿಗೆ ಹಾಲನ್ನು ಸುರಿಯುತ್ತಾರೆ, ಅನೇಕ ದೇವಸ್ಥಾನಗಳಲ್ಲಿ ಕಲ್ಲಿನ ಮೂರ್ತಿಗಳ ಮೇಲೆ ಹಾಲನ್ನು ಸುರಿಯುತ್ತಾರೆ.
ಈ ಬೂದು ಕುಂಬಳಕಾಯಿ, ತೆಂಗಿನಕಾಯಿ, ನಿಂಬೆಹಣ್ಣು, ಹಾಲು, ತುಂಬಾ ಪೌಷ್ಟಿಕಾಹಾರ. ಇವುಗಳು ಜನರ ಬಾಯಿಗೆ ಸೇರದೇ, ಅವರ ಕೈಯಿಂದಲೇ ಹಾಳುಮಾಡಿಸಿ, ಪೂಜಾರಿಗಳ ಕೈಗೆ ಕೊಟ್ಟು ಹಾಳುಮಾಡಿಸಿ, ಮೌಢ್ಯದಿಂದ ಮೌಢ್ಯವನ್ನು ಬೆಳೆಸುವುದು, ಇದರಿಂದ ಜನರಲ್ಲಿ ಅಪೌಷ್ಟಿಕತೆ ಉಂಟಾಗಿ ನರಳುತ್ತಿದ್ದಾರೆ.
ಎಷ್ಟೇ ವಿದ್ಯಾವಂತರಾದರೂ, ಭಕ್ತಿಯ, ದೇವರ ವಿಷಯದಲ್ಲಿ ಅವಿದ್ಯಾವಂತರಿಗಿಂತಲೂ ಕಡೆಯಾಗಬೇಕು.! ಇದು ಭಾರತದ ವಿಶೇಷ ಮೌಢ್ಯ, ಇದು ಹೀಗೇ ಶತ ಶತಮಾನಗಳಿಗೂ ಮುಂದುವರೆಯುತ್ತದೆ..
ಬುದ್ಧ, ಬಸವ, ಭೀಮರ ಸಂದೇಶಗಳನ್ನು ಹೆಚ್ಚು ಹೆಚ್ಚು ತಿಳಿಯೋಣ, ಆ ಮಾರ್ಗದಲ್ಲಿ ಸಾಗೋಣ, ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳೋಣ.!