ಆಳಂದ
ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನಿಗೆ ಶಿಕ್ಷಣ ಎಷ್ಟು ಮಹತ್ವದ ಸ್ಥಾನವನ್ನು ನೀಡಿದೆಯೋ ಅದಕ್ಕಿಂತಲೂ ಮುಖ್ಯವಾಗಿ ಇಂದು ಉತ್ತಮ ಸಂಸ್ಕಾರದ ಅವಶ್ಯಕತೆಯಿದೆ. ಸಂಸ್ಕಾರ ಇಲ್ಲದೇ ಹೋದರೆ ಮನುಷ್ಯ ರಾಕ್ಷಸನಾಗುವ ಅಪಾಯವಿದೆಯೆಂದು ಗದಗ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಕಲ್ಬುರ್ಗಿ ಜಿಲ್ಲೆ, ಆಳಂದದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ಶನಿವಾರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ಶಿಕ್ಷಣವನ್ನು ಪಡೆದು ಸಹಿತ ಸರಿಯಾದ ಸಂಸ್ಕಾರವಿಲ್ಲದ ಕಾರಣ ಸಮಾಜಘಾತುಕ ಕೃತ್ಯಗಳಿಗೆ ಕೈಹಾಕುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಇಂದು ವಿಶ್ವದಲ್ಲಿ ನಡೆಯುತ್ತಿರುವ ಹಲವು ದೇಶಗಳ ನಡುವಿನ ಯುದ್ಧ-ಹಿಂಸಾಚಾರವು, ಧರ್ಮದ ಹೆಸರಿನಲ್ಲಿ, ರಾಷ್ಟ್ರದ ಹೆಸರಿನಲ್ಲಿ ನಡೆಯುತ್ತಿದೆ. ಯುದ್ಧ-ಹಿಂಸೆ ನಡೆಸುತ್ತಿರುವ ಅವರಾರೂ ಅನಕ್ಷರಸ್ಥರಲ್ಲ, ಅವರೆಲ್ಲರೂ ಮಾನವೀಯತೆಯನ್ನು ಮರೆತ ಸಾಕ್ಷರರು. ಅದಕ್ಕಾಗಿ ಇಂದಿನ ಪರಿಸ್ಥಿತಿಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಗುಣಮಟ್ಟದ ಸಂಸ್ಕಾರವನ್ನು ಕೊಡುವುದು ಅವಶ್ಯಕ.
ಶಾಲಾ-ಕಾಲೇಜುಗಳಿಂದ ಪದವಿಯನ್ನು ಪಡೆದು ಹೊರಬರುವ ಪ್ರತಿಯೊಬ್ಬ ಸಾಧಕನು ಉತ್ತಮ ಮನುಷ್ಯನಾಗಿ ಹೊರಬರುವಂತಾಗಬೇಕು. ಹಾಗಾದಾಗ ಸಮಾಜಕ್ಕು ಮತ್ತು ದೇಶಕ್ಕೂ ಹಿತಕರವಾಗಿರುತ್ತದೆ. ಆದಕಾರಣ ನಮ್ಮ ಪಠ್ಯಕ್ರಮದಲ್ಲಿ ಬಸವಾದಿ ಶರಣ, ಸಂತ, ಮಹಾತ್ಮರ ಮಾನವೀಯ ಮೌಲ್ಯದ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕತೆ ಸಮಾಜದ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಶ್ರೀ ಕೋರ್ಣೇಶ್ವರ ಸ್ವಾಮಿಗಳು, ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಗುರುಶರಣ ಪಾಟೀಲ, ರಾಜಶೇಖರ ಪಾಟೀಲ, ಮಲ್ಲಪ್ಪ ಹತ್ತರಕಿ, ಸುಭಾಷ ಪಾಟೀಲ, ರಮೇಶ ಲೋಹಾರ, ಕಾರ್ಯದರ್ಶಿಗಳಾದ ಮಲ್ಲಿನಾಥ ಎಲಶೆಟ್ಟಿ, ಡಾ. ಅಭಿನಂದನ್ ಬ್ಯಾಡಿಗೆ, ಶ್ರೀಶೈಲ ನಾಯ್ಕೋಡ, ಮೇಲಿಗರೆಪ್ಪ ವಾಲೆ, ಸುನಿಲ ಢಗೆ, ರಾಜಶೇಖರ ಹರಿಹರ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.