ಗದಗ
ಯುಗಾದಿ ಎಂದರೆ ಸಂಭ್ರಮ. ಯುಗಾದಿ ಭಾರತೀಯ ಪರಂಪರೆಯಲ್ಲಿ ಹೊಸವರ್ಷ. ಯುಗಾದಿ ಮತ್ತು ರಂಜಾನ್ ಎರಡು ಶಾಂತಿಯ ಸಂಕೇತ. ಸರ್ವಧರ್ಮಗಳ ಭಾವ, ಸಂದೇಶ ಒಂದೇ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೩೯ ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ರಂಜಾನ್ ನ್ಯಾಯದ ದಿನ. ಒಳ್ಳೆಯದನ್ನೆ ಮಾಡು, ಕೆಟ್ಟದನ್ನು ಮಾಡಬೇಡ ಎಂದು ಸಾರುತ್ತದೆ. ಸಾಮರಸ್ಯದ ಸೇತುವೆ ಕಟ್ಟಿಕೊಡುತ್ತದೆ. ಭಾವೈಕ್ಯತೆಯ ಸಂದೇಶ ಹೊತ್ತು ತರುತ್ತದೆ. ಜಗದ ಜನರೆಲ್ಲರೂ, ಭಾವೈಕ್ಯತೆಯಿಂದ ಬದುಕಬೇಕು. ಆಚರಣೆ ಬೇರೆಯಾದರೂ, ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವ ಹಬ್ಬಗಳು ಯುಗಾದಿ ಮತ್ತು ರಂಜಾನ್ ಹಬ್ಬಗಳು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಗದಗ ತಾಲೂಕಿನ ನೀರಲಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪಿ.ಟಿ. ಬೈಲಪ್ಪನವರ ಮಾತನಾಡಿ, ಯುಗಾದಿ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ದೃಷ್ಟಿಕೋನವಿದೆ. ಮಾವಿನ ತಳಿರಿನಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ರೈತರಿಗೆ ಯುಗಾದಿ ಕೃಷಿ ಕಾಯಕ ಕೈಗೊಳ್ಳಲು ಉತ್ತಮ ದಿನ. ಗಿಡಮರಗಳೆಲ್ಲಾ ಹಸಿರು ತೊಟ್ಟರೆ, ಮನೆಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟು ಆನಂದಿಸುವ ಯುಗಾದಿ, ಹೊಸತನದ ಸಂಕೇತ ಎಂದು ಆಚರಣೆಯ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು. ಯುಗಾದಿ ಮತ್ತು ರಂಜಾನ್ ಈ ಎರಡು ಹಬ್ಬಗಳು ಸಾಮರಸ್ಯದಿಂದ ಬದುಕಲು ಕಲಿಸುತ್ತವೆ. ಒಳ್ಳೆಯದನ್ನೆ ಬೋಧಿಸುತ್ತವೆ ಎಂದರು.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ, ಸುತಾರ ಸಾಂಸ್ಕೃತಿಕ ಕಲಾ ಸಂಘ ಬೇಟಗೇರಿಯ ಅಶೋಕ್ ಸುತಾರ ಹಾಗೂ ತಂಡದವರಿಂದ ಬಯಲಾಟ ಪ್ರದರ್ಶನ ನಡೆಯಿತು. ಬಯಲಾಟ ಪ್ರದರ್ಶನ ನೀಡಿದ ಅಶೋಕ್ ಸುತಾರ ಮಾತನಾಡಿ, ಶ್ರೀಮಠದ ಹಿಂದಿನ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು ನಮ್ಮಂತಹ ಎಷ್ಟೋ ಕಲಾವಿದರು ರೂಪುಗೊಳ್ಳಲಿಕ್ಕೆ, ಕಾರಣವಾಗಿದ್ದಕ್ಕೆ ನಾವಿಂದು ಕಲಾವಿದರಾಗಿದ್ದೇವೆ. ಐವತ್ತು ವರ್ಷಗಳಲ್ಲಿ ಈ ವೇದಿಕೆಯಿಂದ ಸಾವಿರಾರು ಜನ ಉಪನ್ಯಾಸಕರು, ಕಲಾವಿದರು ಸಂಗೀತಗಾರರು ಮತ್ತು ನಾಟಕಕಾರರು ರೂಪಗೊಂಡಿದ್ದಾರೆ ಎಂದರು.

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಿರಿಯ ಕಲಾವಿದರಾದ ಸುಭಾಸ ಮಳಗಿ, ಮಲ್ಲೇಶಗೌಡ ತಿಮ್ಮೇಗೌಡ್ರ ಹಾಗೂ ಬಾಲ ಕಲಾವಿದೆಯಾದ ನಿಖಿತಾ ಅಶೋಕ್ ಸುತಾರ ಇವರನ್ನು ಸಂಮಾನ ಮಾಡಲಾಯಿತು.
ವಚನ ಸಂಗೀತ ಸೇವೆಯನ್ನು, ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ರೇವತಿ ಕೆ. ಗೌಡರ ಹಾಗೂ ವಚನ ಚಿಂತನವನ್ನು ಲಾವಣ್ಯ ಕೆ. ಗೌಡರ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶಿವಯೋಗಿ ಕಂಠಯ್ಯ ತೆಗ್ಗಿನಮಠ ಹಾಗೂ ಗಂಗಾಧರ ಬ. ಹಿರೇಮಠ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ- ೨೦೧೮ ಇವರುಗಳು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮು ಪುರಾಣಿಕ ಹಾಗೂ ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ, ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.
ಮಹೇಶ ಗಾಣಿಗೇರ ಸ್ವಾಗತಿಸಿದರು. ಐ.ಬಿ.ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.