ಉಳವಿ
ಚನ್ನಬಸವೇಶ್ವರ ರಥೋತ್ಸವ ಅತ್ಯಂತ ವೈಭವದಿಂದ ಮಂಗಳವಾರ ಜರುಗಿತು. ಪ್ರಯುಕ್ತವಾಗಿ ಚನ್ನಬಸವೇಶ್ವರ ಮಹಾಮಠದಲ್ಲಿ ಬಸವ ಕೇಂದ್ರದಿಂದ ವಿವಿಧ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣವನ್ನು ನವಲಗುಂದ ತಾಲೂಕಿನ ಆರಹಟ್ಟಿಯ ಶ್ರೀ ಕೋರಣೇಶ್ವರ ಮಠದ ಪೂಜ್ಯ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮಿಗಳು ನೆರವೇರಿಸಿದರು. ಸಾನಿಧ್ಯವನ್ನು ಉಳವಿ ಚನ್ನಬಸವೇಶ್ವರ ಮಹಾಮಠದ ಪೂಜ್ಯ ಬಸವಲಿಂಗಮೂರ್ತಿ ಸ್ವಾಮಿಗಳು ವಹಿಸಿದ್ದರು.

ಮೈಸೂರು, ಬೀದರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳ ಸಾವಿರಾರು ಜನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬರುವ ಭಕ್ತಾದಿಗಳಿಗೆಲ್ಲ ಶ್ರೀ ಚನ್ನಬಸವೇಶ್ವರ ಮಠದಲ್ಲಿ ಪ್ರಸಾದ, ನೀರು, ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು .
12ನೇ ಶತಮಾನದಲ್ಲಿ ಬಸವಾದಿ ಶರಣರು ಕಷ್ಟಮಯ ಪರಿಸ್ಥಿತಿಯಲ್ಲು ಐದುನೂರು ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿಕೊಂಡು ಬಂದು, ಉಳವಿ ಗವಿಗಳಲ್ಲಿ ಹಾಗೂ ಅರಣ್ಯದಲ್ಲಿ ತಪ್ಪಲು ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಚನ ಸಾಹಿತ್ಯದ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
ಚನ್ನಬಸವಣ್ಣನವರ ಲಿಂಗೈಕ್ಯ ಸಮಾಧಿ ಸ್ಥಳ ಇಲ್ಲೇ ಇದ್ದು, ಪ್ರತಿವರ್ಷದ ಮಾಘ ಮಾಸದಲ್ಲಿ ಅವರ ಸ್ಮರಣೆಯ ಅದ್ಧೂರಿ ರಥೋತ್ಸವ ನಡೆಯುತ್ತದೆ.

ಚೆನ್ನಬಸವಣ್ಣನವರ ಅಪಾರ ಭಕ್ತಾದಿಗಳು ಆಗಮಿಸಿ, ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಆನಂದಿಸಿ ಹೋಗುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಎತ್ತಿನ ಬಂಡಿಗಳು, ವಾಹನಗಳು ಆಗಮಿಸಿ ಸುಮಾರು ಕಿ.ಮೀ.ನಷ್ಟು ವ್ಯಾಪ್ತಿಯಲ್ಲಿ ಜಾತ್ರಾ ಮಹೋತ್ಸವ ಕಳೆಗಟ್ಟಿರುತ್ತದೆ.
ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ತಮ್ಮ ಭಕ್ತಿಯನ್ನು ಮೆರೆಯುತ್ತಾರೆ. ವಚನಗಳನ್ನು ಹೇಳುತ್ತಾರೆ, ಹಾಡುತ್ತಾರೆ. ರಾತ್ರಿ ಎಲ್ಲಾ ಭಜನೆ ನಡೆಯುತ್ತದೆ.

ಬಂದ ಭಕ್ತಾದಿಗಳು ಇಲ್ಲಿನ ಹಲವಾರು ಗವಿಗಳ ದರ್ಶನಕ್ಕೂ ಹೋಗುತ್ತಾರೆ. ಹರಳಯ್ಯನವರ ಚಿಲುಮೆ ಎಲ್ಲರ ಗಮನ ಸೆಳೆಯುತ್ತದೆ. ಆಕಳ ಗವಿ, ರುದ್ರಾಕ್ಷಿ ಗವಿ, ಅಕ್ಕನಾಗಮ್ಮನವರ ಗವಿ, ಪಂಚಗವಿ, ಮಹಾಮನೆ ಮುಂತಾದ ಶರಣರು ಸಾಧನೆ ಮಾಡಿದ ವಿವಿಧ ಪವಿತ್ರ ಸ್ಥಳಗಳನ್ನು ನೋಡಿ ಆನಂದ ಹೊಂದುತ್ತಾರೆ. ಈ ಸಂದರ್ಭದಲ್ಲಿ ಚೆನ್ನಬಸವೇಶ್ವರ ಜಲಪಾತವಂತು ಭಕ್ತರಿಗೆ ಸಂತಸ, ಭಕ್ತಿಭಾವ ಮೂಡಿಸುತ್ತದೆ.

ರಥೋತ್ಸವದ ನಂತರ ಭಕ್ತಾದಿಗಳು ಎತ್ತಿನ ಬಂಡಿಗಳನ್ನು ನಿಧಾನವಾಗಿ ತಮ್ಮ ತಮ್ಮ ಊರುಗಳ ಕಡೆ ತಿರುಗಿಸಿಕೊಂಡು, ಮಡಕೇಶ್ವರ ಚೆನ್ನಬಸವೇಶ್ವರ ಬಹುಪರಾಕ್ ಬಹುಪರಾಕ್ ಎನ್ನುತ್ತ ತೆರಳಿದರು.

ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ ಅನುಭವ ಮಂಟಪ ಶೂನ್ಯ ಪೀಠದ ಅಲ್ಲಮಪ್ರಭುಗಳ ನಂತರ ಉಳವಿ ಶ್ರೀ ಚನ್ನಬಸವಣ್ಣನವರು ಅವರ ಲಿಂಗೖಕ್ಯ ಸಮಾದಿ ಸ್ಥಳ ವಿಶ್ವಬೆಳಕು ಅದರ ವರದಿ ವಿಶೇಷ