ಉಳವಿ ಕ್ಷೇತ್ರ ಮಾರ್ಗ ಸುಂದರಗೊಳಿಸಲು ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ಉಳವಿ ಚೆನ್ನಬಸವೇಶ್ವರ ಕ್ಷೇತ್ರಕ್ಕೆ ಸಾಗುವ ಮಾರ್ಗದ ಸೌಂದರ್ಯೀಕರಣ ಮಾಡಬೇಕೆಂದು ಧಾರವಾಡದ ನ್ಯಾಯವಾದಿ, ಲಿಂಗಾಯತ ಮುಖಂಡರಾದ ಕೆ. ಎಸ್. ಕೋರಿಶೆಟ್ಟರ ಸರ್ಕಾರವನ್ನು ವಿನಂತಿಸಿದ್ದಾರೆ.

ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಈಚೆಗೆ ಬೆಂಗಳೂರಲ್ಲಿ ಕಂಡು ಮನವಿಪತ್ರ ನೀಡಿ ಅದರಲ್ಲಿ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿರುವ ಉಳವಿ ಕ್ಷೇತ್ರವು ನಾಡಿನ ಬಸವ ಭಕ್ತರ ಪವಿತ್ರ ಶೃದ್ದಾಕೇಂದ್ರ ಎಂಬುದು ತಮಗೆ ತಿಳಿದ ವಿಷಯವಾಗಿದೆ.

ಚಿನ್ಮಯಜ್ಞಾನಿ, ಷಟಸ್ಥಲ ಚಕ್ರವರ್ತಿ ಶ್ರೀ ಚೆನ್ನಬಸವೇಶ್ವರರು ಕಲ್ಯಾಣ ಕ್ರಾಂತಿಯ ತರುವಾಯ, ಧರ್ಮಗುರು ಬಸವಣ್ಣನವರು ಕೂಡಲ ಸಂಗಮಕ್ಕೆ ಸಾಗಿದ ಬಳಿಕ, ವಚನ ಸಾಹಿತ್ಯ ಸಂರಕ್ಷಿಸುವ ಮಹೋನ್ನತ ಸಂಕಲ್ಪ ಪೂರೈಸಲು ಹಲವಾರು ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಸಹ್ಯಾದ್ರಿಯ ದುರ್ಗಮ ಅರಣ್ಯ ಮಧ್ಯದ ಪ್ರಶಾಂತ ತಾಣದಲ್ಲಿ ಬಂದು ಉಳಿದು ಕಲ್ಯಾಣದ ವೈಭವವನ್ನು ಮರುಕಳಿಸಿದರು.

ಅಲ್ಲಿಯೇ ವಚನ ಸಾಹಿತ್ಯ ರಕ್ಷಿಸಿ ಲಿಂಗಾಯತ ಧರ್ಮವನ್ನು ಉಳಿಸಿದ್ದು ಮಾತ್ರವಲ್ಲ, ಕನ್ನಡ ಸಾರಸ್ವತ ಲೋಕದ ಶ್ರೀಮಂತಿಕೆಗೆ ಕಾರಣರಾದರು.

ಇಂತಹ ಪವಿತ್ರ ಜಂಗಮ ಕ್ಷೇತ್ರಕ್ಕೆ ವರ್ಷದುದ್ದಕ್ಕೂ ಲಕ್ಷಾಂತರ ಸಂಖ್ಯೆಯಲ್ಲಿ ಬಸವ ಭಕ್ತರು ಸಂದರ್ಶಿಸುತ್ತಿದ್ದು, ಧಾರವಾಡ ಮಾರ್ಗವಾಗಿ ಹಳಿಯಾಳ, ದಾಂಡೇಲಿ, ಜೋಯಿಡಾ ಮೂಲಕ ಸಾಗುತ್ತಿದ್ದಾರೆ.

ಧಾರವಾಡ ಪ್ರದೇಶ ದಾಟಿದ ತಕ್ಷಣ ಮುಂದಿನ ಬಹುತೇಕ ದಾರಿ ಅರಣ್ಯದಲ್ಲಿಯೇ ಇರುವುದರಿಂದ ದಾರಿಯ ಅಕ್ಕ ಪಕ್ಕ ವಿವಿಧ ವರ್ಣಗಳ ಹೂ ಬಿಡುವ ಮರಗಳನ್ನು ನೆಟ್ಟು ಬೆಳೆಸಿದರೆ ಕೆಲವೇ ವರ್ಷಗಳಲ್ಲಿ ಅವು ಮರಗಳಾಗಿ ಬೆಳೆದು, ಉಳವಿ ಕ್ಷೇತ್ರದವರೆಗೂ ಹೂವಿನ ತೋರಣದಿಂದ ಅಲಂಕಾರ ಮಾಡಿದಂತಾಗುತ್ತದೆ ಮತ್ತು ಇದರಿಂದ ಪರಿಸರದ ಸೌಂದರ್ಯವೂ ಹೆಚ್ಚಾಗುತ್ತದೆ.

ಮಾನ್ಯರಾದ ತಾವು ವಿಶೇಷ ಮುತುವರ್ಜಿ ವಹಿಸಿ ಈ ಬಗ್ಗೆ ಸೂಕ್ತ ಕ್ರಮವನ್ನು ತಕ್ಷಣ ಕೈಗೊಳ್ಳುವಿರೆಂದು ಸಚಿವರಲ್ಲಿ ಕೋರಿಶೆಟ್ಟರ ಕೋರಿಕೊಂಡಿದ್ದಾರೆ.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *