ಸಾಣೇಹಳ್ಳಿ
ಬಸವಣ್ಣನವರ ತತ್ವ ಸಿದ್ದಾಂತಗಳು ಸಾಕಾರಗೊಳ್ಳಲಿ ಎಂಬ ಸದಾಯಶಯದಿಂದ ದಿವಂಗತ ಡಾ. ಮಹಾದೇವ ಬಣಕಾರ ಅವರು ಉರಿಲಿಂಗ ಪೆದ್ದಿ ನಾಟಕವನ್ನು ರಚಿಸಿ. ಶರಣರ ತತ್ವ ಸಿದ್ದಾಂತಗಳ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.
ಮೊನ್ನೆ ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘದ ಕಲಾವಿದರು ಶ್ಯಾಮನೂರು ಶಿವಶಂಕ್ರಪ್ಪ ರಂಗಮಂದಿರಲ್ಲಿ ಹಿರಿಯ ರಂಗ ನಿರ್ದೇಶಕರಾದ ವೈ ಡಿ ಬದಾಮಿ ನಿರ್ದೇಶಿಸಿದ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನವಾಯಿತು. ಅನುಭವಿ ಕಲಾವಿದರ ಮನೋಜ್ಞ ಅಭಿನಯದಿಂದ ರಂಗ ಪ್ರದರ್ಶನವು ನೆರೆದ ಜನರನ್ನು ಮಂತ್ರ ಮುಗ್ದರನ್ನಾಗಿಸಿತು.
ಕಲಾವಿದರು ನಾಟಕದ ಆಶಯವನ್ನು ನವರಸˌ ನವ ಭಾವಗಳ ಸಮ್ಮಿಳಿತ ಅಭಿನಯದಿಂದ ಭಾವ ಪರವಶವಾಗುಂತೆ ಮಾಡಿದರು. ಒಂದೂವರೆ ಗಂಟೆಯ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟು ರಂಜಿಸಿದ ಕೀರ್ತಿ ನಟ ನಟಿಯರಿಗೆ ಸಲ್ಲುತ್ತದೆ.

ಮನುಷ್ಯ ಅಂದ್ಮೇಲೆ ಸಮಾಜದಲ್ಲಿ ಒಳ್ಳೆಯವರೂ ಕೆಟ್ಟವರೂ ಇರ್ತಾರೆ. ಒಳ್ಳೆಯವನಲ್ಲಿರುವ ಕೆಟ್ಟ ಗುಣಗಳು ಹೊರ ಜಗತ್ತಿಗೆ ಅಷ್ಟಾಗಿ ಗೋಚರಿಸುವುದಿಲ್ಲ. ಅಂತೆಯೇ ಕೆಟ್ಟವನಲ್ಲಿರುವ ಒಳ್ಳೆಯ ಗುಣಗಳೂ ಕಾಣಿಸುವುದಿಲ್ಲ. ಆದರೆ ಆತನಲ್ಲಿನ ಕೆಟ್ಟ ಗುಣಗಳು ಅವನನ್ನು ಮತ್ತಷ್ಟೂ ಕೆಟ್ಟವನನ್ನಾಗಿ ಮಾಡಿಸಿಬಿಡುತ್ತವೆ. ಬದಲಾಗದಷ್ಟೂ ಆಳವಾಗಿ ಬೇರೂರಿಬಿಡುತ್ತವೆ. ಇವನನ್ನು ಬದಲಾಯಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಕೆಟ್ಟವನಂತೆ ಸಮಾಜ ಅವನನ್ನು ಕಾಣುತ್ತದೆ. ಆದರೆ ವಾಸ್ತವವಾಗಿ ಇದು ತಪ್ಪು ಕಲ್ಪನೆ. ಅರಿವಿನ ಅವಕಾಶ ದೊರೆತಾಗ ಕೆಟ್ಟವನೂ ಒಳ್ಳೆಯವನಾಗಬಹುದು.
ಇಷ್ಟೆಲ್ಲಾ ಪೂರ್ವ ಪೀಠಿಕೆ ಹಾಕಿದ್ದು ಯಾಕೆಂದರೆ ಸಮಾಜದಲ್ಲಿ ಬದಲಾವಣೆ ನಿರಂತರವಾಗಿರುತ್ತದೆ ಜಡವಾಗಿರುವುದಿಲ್ಲ. ಅವಕಾಶ ಮತ್ತು ಅರಿವು ದೊರೆತರೆ ಎಲ್ಲರೂ ಒಳ್ಳೆಯವರಾಗಿ ಅಸಾಧಾರಣವಾದ ಸಾಧನೆಯನ್ನು ಮಾಡಬಹುದು ಎಂಬ ಪ್ರಜ್ಞೆಯನ್ನು ನಾಟಕ ಬಲು ಸೂಕ್ಷ್ಮವಾಗಿ ತೆರೆದಿಡುತ್ತದೆ.
ಹನ್ನೆರಡನೇ ಶತಮಾನದಲ್ಲಿ ಮಹಾರಾಷ್ಟೃದ ನಾಂದೇಡಿ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಇದು. ಕಳ್ಳನೊಬ್ಬ ಕಾಯಕ ಶೀಲನಾಗಿ ಉರಿಲಿಂಗ ದೇವರ ಕೃಪೆಯಿಂದ 364 ವಚನಗಳನ್ನು ರಚಿಸಿ ಸಂಸ್ಕೃತವನ್ನು ಅಧ್ಯಯನ ಮಾಡಿ ವೇದ ಉಪನಿಷತ್ತುಗಳನ್ನು ವಿಮರ್ಶಿಸುತ್ತಾನೆ. ಕೆಳ ಜಾತಿಯಲ್ಲಿ ಜನಿಸಿದ ಈತ ಶರಣೆ ಕಾಳವ್ವೆಯ ಪತಿಯಾಗಿದ್ದು ಮುಂದೆ ಗುರುಗಳ ಸಾಮಿಪ್ಯ ಹೊಂದಿ ಅದೆ ಮಠದ ಉತ್ತರಾಧಿಕಾರಿಯಾಗುತ್ತಾನೆ.

ಕಳ್ಳತನವನ್ನೇ ತನ್ನ ಜೀವನಾಧಾರಿತ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಮಾದರ ಕುಲದ ಪೆದ್ದಿˌ ಬಡವ-ಶ್ರೀಮಂತ, ದೊರೆ-ಸಾಮಾನ್ಯ ಎಂದು ಭೇದ ತೋರದೆ ಸಿಕ್ಕ ಸಿಕ್ಕವರ ಮನೆಯ ವಸ್ತುಗಳನ್ನು ಕದ್ದು ಹೊಟ್ಟೆ ಹೊರೆಯುತ್ತಿರುತ್ತಾನೆ. ಇದು ತಪ್ಪು ಎಂದು ಹೆಂಡತಿ ಕಾಳವ್ವೆ ಎಷ್ಟು ಹೇಳಿದರೂ ಕಳ್ಳತನವನ್ನು ಬಿಡದ ಪೆದ್ದಿ ಒಂದು ದಿನ ಶರಣ ಸೂರದಾಸರ ಮನೆಯ ಕಳ್ಳತನಕ್ಕೆ ಹೋಗಿರುತ್ತಾನೆ.
ಅದೇ ದಿನ ಅಲ್ಲಿ ಉರಿಲಿಂಗ ಮಹಾಸ್ವಾಮಿಗಳಿಂದ ಸೂರದಾಸರ ಲಿಂಗದೀಕ್ಷೆಯೂ ಇರುತ್ತದೆ. ಕದ್ದ ವಸ್ತುಗಳನ್ನು ಹೊತ್ತು ಹೊರಬರುತ್ತಿದ್ದಾಗ ಉರಿಲಿಂಗ ಮಹಾಸ್ವಾಮಿಗಳ ಪ್ರವಚನವನ್ನು ಆಲಿಸಿ ಅವರ ವ್ಯಕ್ತಿತ್ವ ವಿಕಸನದ ಮಾತುಗಳನ್ನು (ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ. ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ. ಇದೆ ಅಂತರಂಗ ಶುದ್ಧಿ. ಇದೇ ಬಹಿರಂಗ ಶುದ್ಧಿ. ಇದೆ ನಮ್ಮ ಕೂಡಲಸಂಗಮದೇವನೊಲಿಸುವ ಪರಿ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ. ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ. ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ. ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ. ಕೂಡಲ ಸಂಗನ ಶರಣರ ಅನುಭವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.) ಎಂಬ ಜೀವನ ದರ್ಶನದ ಮಾತುಗಳಿಗೆ ಪ್ರಭಾವಿತನಾಗಿ ಮನ ಪರಿವರ್ತನೆಗೆ ಮುಂದಾಗುತ್ತಾನೆ.
ಕನ್ನಡಿಯ ನೋಡಿ ಮುಖವ ಅಲಂಕಾರಗೊಳಿಸಿಕೊಳ್ಳುಂತೆ ಪೂಜ್ಯರ ಮಾತು ಕೇಳಿ ಪೆದ್ದಿ ಬದಲಾಗುತ್ತಾನೆ. ಲಿಂಗದೀಕ್ಷೆ ಪಡೆಯುವ ಇಂಗಿತ ವ್ಯಕ್ತಪಡಿಸುತ್ತಾನೆ. ವಚನಗಳನ್ನು ರಚಿಸುತ್ತಾನೆ. ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿ ವಿಮರ್ಶೆ ಮಾಡುತ್ತಾನೆ. ಇಂತಹ ಬದಲಾವಣೆ ಮತ್ತು ಪಾಂಡಿತ್ಯವನ್ನು ಕಂಡ ಪುರೋಹಿತವರ್ಗ ಮತ್ಸರ ಪಟ್ಟುಕೊಂಡರೆ, ಸ್ವತ: ಉರಿಲಿಂಗ ಪರಮ ಪೂಜ್ಯರು ಬೆರಗಾಗುತ್ತಾರೆ. ಆತನ ಶರಣ ಚಿಂತನೆಯನ್ನು ಮೆಚ್ಚಿ ಹೊಗಳುತ್ತಾರೆ. ಲಿಂಗದೀಕ್ಷೆಯನ್ನು ನೀಡಿ ಆತನನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ.
ಮಾದಿಗ ಜನಾಂಗದವನಾದ ಈತನನ್ನು ಹೇಗೆ ಉತ್ತರಾಧಿಕಾರಿಯನ್ನಾಗಿ ಮಾಡುತ್ತೀರಿ ಎಂದು ಭಕ್ತರು ಅಭಿವ್ಯಕ್ತಿಸಿದಾಗ ಶರಣರಿಗೆ ಜಾತಿ ಇಲ್ಲ. ಧರ್ಮ ಇಲ್ಲ ಲಿಂಗ ಭೇದವಿಲ್ಲ. ಇಲ್ಲಿ ಎಲ್ಲರೂ ಸಮಾನರು ಎಂದು ಬಸವಣ್ಣನವರ ಆಶಯವನ್ನು ಸಾಕ್ಷೀಕರಿಸುತ್ತಾರೆ. ಮಠ ಮತ್ತು ಮಠದ ಸರ್ವ ಸಂಪತ್ತೆಲ್ಲವೂ ಎಲ್ಲರಿಗೂ ಸೇರಿದ್ದು ಎಂಬ ಸಮತೆಯ ಗುಣವನ್ನು ತಿಳಿ ಹೇಳುತ್ತಾರೆ. ಅಂತಿಮವಾಗಿ ಪೂಜ್ಯರ ದೂರದೃಷ್ಠಿ ಮತ್ತು ಮಾನವೀಯ ಮೌಲ್ಯವನ್ನು ಅರಿತ ಭಕ್ತಗಣ ಗುರುಗಳ ಆಶಯದಂತೆ ಪೆದ್ದಿಗೆ ದೀಕ್ಷೆ ಕೊಡಿಸಿ ತಮ್ಮ ಉತ್ತರಾಧಿಕಾರಿ ಎಂದು ಸ್ವೀಕರಿಸುತ್ತಾರೆ.

ಪೆದ್ದಿಯಾಗಿದ್ದವನು ಉರಿಲಿಂಗ ಮಹಾಸ್ವಾಮಿಗಳ ಮಾತಿನಿಂದ ಹಾಗೂ ನೀಡಿದ ದೀಕ್ಷೆಯಿಂದ ಗುರುಗಳ ಉತ್ತರಾಧಿಕಾರಿಯಾಗಿ ಉರಿಲಿಂಗ ಪೆದ್ದಿಯಾದ. ದುಷ್ಟ ಗುಣ ಉಳ್ಳವರೂ ಸಜ್ಜನರ ಸಂಗ ಮಾಡಿ ಒಳ್ಳೆಯವರಾಗಬಹುದು ಎಂಬುದನ್ನು ಸಾಬೀತುಪಡಿಸಿದ. ಶರಣ ಸಂಸ್ಕೃತಿಯ ಮೂಲ ಆಶಯವನ್ನು ಸಾಕ್ಷೀಕರಿಸಿದ. ಗುರುವಿಗೆ ತನು ಕೊಟ್ಟು, ಲಿಂಗಕ್ಕೆ ಮನಕೊಟ್ಟು
ಜಂಗಮಕ್ಕೆ ಧನ ಕೊಟ್ಟು ಮಹಾ ಜ್ಞಾನಿಯಾದ.
ತನ್ನ ಜ್ಞಾನದಿಂದ ಬರಗಾಲದಲ್ಲಿ ಬಳಲುತಿದ್ದ ಜೀವರಾಶಿಗೆ ಬಂಡೆಯ ಅಡಿಯಲ್ಲಿದ್ದ ಜಲವನ್ನು ಕಂಡು ಹಿಡಿದು ಜೀವ ರಕ್ಷಿಸಿದ. ಮಾದರಿಯಾದ. ಇದು ನಾಟಕದ ಕಥಾ ಹಂದರ.
ಅಷ್ಟೇ ಅಲ್ಲದೆ ನಾಟಕ ಪ್ರಚುರ ಮಡಿಸುವ ಮತ್ತೊಂದು ವಿಚಾರವೆಂದರೆ ವಚನಗಳು ಸಮಾಜಕ್ಕೆ ವೈಚಾರಿಕ ಪ್ರಜ್ಞೆಯನ್ನು ನೀಡುತ್ತವೆ. ಜಗತ್ತಿಗೆ ತೋರಿಸಲಾಗದ ಅಂಶಗಳಾದ ಸತ್ಯ, ನ್ಯಾಯ, ಧರ್ಮ ಹಾಗೂ ಭಕ್ತಿಯನ್ನು ಮನದಲ್ಲಿ ಬಿತ್ತುತ್ತವೆ. ಕಳ್ಳತನˌ ಮೋಸˌ ವಂಚನೆಯಂತಹ ಸಾಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ತಾರತಮ್ಯತೆಯನ್ನು ನಿವಾರಿಸಿ ಪಾರಮಾರ್ತಿಕ ಸತ್ಯವನ್ನು ತಿಳಿ ಹೇಳುತ್ತವೆ. ವ್ಯಕ್ತಿಯ ಅಧ:ಪತನಕ್ಕೆ ಕಾರಣವಾಗುವ ಆಸೆ, ಅಜ್ಞಾನ, ಕೋಪಗಳನ್ನು ಕಳೆದು ಭಕ್ತಿ, ಪ್ರೇಮ ಮತ್ತು ಕಾಯಕವನ್ನು ಕಲಿಸಿಕೊಡುತ್ತವೆ. ಅಜ್ಞಾನದಿಂದ ಬೆಳೆಕಿನೆಡೆಗೆ ಕೈ ಹಿಡಿದು ನಡೆಸುತ್ತವೆ. ಎಂಬುದನ್ನು ಎಳೆ ಎಳೆಯಾಗಿ ಮತ್ತು ಮಾರ್ಮಿಕವಾಗಿ ಮನನ ಮಾಡುತ್ತದೆ.
ಧ್ವೇಷಕ್ಕೆ ಧ್ವೇಷ ಎಂಬ ಹಗೆತನವನ್ನು ಬದಿಗಿರಿಸಿ ಕೆಟ್ಟವರನ್ನು ಒಳ್ಳೆಯವರನ್ನಾಗಿ ಬದಲಾಯಿಸುವ ಜವಾಬ್ದಾರಿ ಹೊತ್ತ ಮಠದ ಶ್ರೀಗಳ ಜವಾಬ್ದಾರಿಯನ್ನು ಈ ನಾಟಕ ಎತ್ತಿ ಹಿಡಿಯುತ್ತದೆ. ಮೌಢ್ಯ ಮತ್ತು ಅಂಧಾನುಕರುಣೆಗಳನ್ನು ತಿರಸ್ಕರಿಸುವುದರ ಜೊತೆಗೆ ವಚನಗಳ ಮಹತ್ವ ಹಾಗೂ ಶರಣ ಸಂಸ್ಕೃತಿಯ ಹಿರಿಮೆಯನ್ನು ಸಾದರಪಡಿಸುತ್ತದೆ.
ಪ್ರತಿಯೊಬ್ಬ ನಟರ ಅಭಿನಯವು ಅವರ ರಂಗಾನುಭವವನ್ನು ತೆರೆದಿಟ್ಟಿತ್ತು. ಮುವ್ವತ್ತು ನಲವತ್ತು ವರ್ಷಗಳ ರಂಗ ಸೇವೆಯ ಕನ್ನಡಿಯಂತಿತ್ತು. ಇಂತಹ ಅಭೂತಪೂರ್ವ ಅಭಿನಯವನ್ನೂ ಹೊರತೆಗೆದ ನಿರ್ದೇಶಕರಾದ ಹಿರಿಯ ರಂಗಕರ್ಮಿ ವೈ ಡಿ ಬದಾಮಿ ಅವರ ರಂಗ ಪರಿಣಿತಿ ರಂಗತಜ್ಞರ ಗಮನ ಸೆಳೆಯುವಂತಿತ್ತು.

ಸಿರಿ ಕಂಠದ ಗಾಯಕ ನಾಗರಾಜ ಅವರ ಗಾಯನ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿತು. ಇದಕ್ಕೆ ಪೂರಕವಾದ ತಬಲ ಸಾಥಿ ಮಿತ್ರ ಶರಣ ಕುಮಾರ ಅವರ ಕೈ ಚಳಕದ ಮಾಂತ್ರಿಕತೆಯೂ ಪ್ರದರ್ಶನವನ್ನು ರಂಗೇರಿಸಿತ್ತು. ಬೆಳಕಿನ ವಿನ್ಯಾಸ ರಸಾನುಭಾವವನ್ನು ಮತ್ತಷ್ಟೂ ಪರಿಣಾಮಕಾರಿಯಾಗುವಂತೆ ನೋಡಿಕೊಂಡಿತು. ಬೆಳಕಿನ ವಿನ್ಯಾಸವು ಪಾತ್ರಗಳ ರಸಾನುಭಾವವನ್ನು ಮತ್ತಷ್ಟೂ ಪರಿಣಾಮಕಾರಿ ಆಗುವಂತೆ ನೋಡಿಕೊಂಡಿತು. ಇರುವ ಏಳೆಂಟು ಪಾತ್ರಧಾರಿಗಳು ತಲಾ ಮೂರು ನಾಲ್ಕು ಪಾತ್ರಗಳನ್ನು ನಿರ್ವಹಿಸಿದ್ದು ನಟರ ಅಭಿನಯದ ಪ್ರಭುದ್ದತೆಯನ್ನು ಸಾದರಪಡಿಸುತ್ತಿತ್ತು.
ಗೌಡ ಮತ್ತು ಪೂಜಾರಿಯ ಪಾತ್ರದಲ್ಲಿ ನಿರ್ದೇಶಕ ವೈ ಡಿ ಬದಾಮಿಯವರು ಪ್ರಭುದ್ದ ಅಭಿನಯಕ್ಕೆ ಸಾಕ್ಷಿಯಾದರು. ರಾಜು ಲಕ್ಕ ಮತ್ತೇನಹಳ್ಳಿ ಹಾಗೂ ಮಧು ಅವರು ಪಂಡಿತ ಮತ್ತು ನಾಗರಿಕ ಪಾತ್ರವನ್ನು ಹಾಸ್ಯಭರಿತ ಅಭಿನಯ ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಹಿರಿಯ ನಟ ಎಚ್ ಕೆ ಪರಮೇಶಯ್ಯನವರು ಪೆದ್ದಿಯ ಪಾತ್ರದಲ್ಲಿ ಸಾತ್ವಿಕ ಭಾವಕ್ಕೆ ಜೀವ ತುಂಬಿದರು. ಉರಿಲಿಂಗ ದೇವರ ಪಾತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದ ಎಚ್ ಆರ್ ರಮೇಶ ಅವರು ಥೇಟ್ ಪಂಡಿತಾರಾಧ್ಯ ಗುರುಗಳನ್ನೇ ಹೋಲುವ ಅಭಿನಯ ಮಾಡಿದರು ಮತ್ತು ಮಠದ ಕೈಂಕರ್ಯವನ್ನು ಓರೆಗಲ್ಲಿಗೆ ಹಚ್ಚುವಂತೆ ಅಭಿನಯಿಸಿದರು. ಸೂರದಾಸನ ಪಾತ್ರದಲ್ಲಿ ಸಾ. ನಿ. ರವಿಕುಮಾರ, ನಂದ ಮಹಾರಾಜನ ಪಾತ್ರದಲ್ಲಿ ಮಲ್ಲಿಕಾರ್ಜುನ, ಹನುಮಂತನ ಪಾತ್ರದಲ್ಲಿ ಪ್ರದೀಪ ಎಂ ಹಾಗೂ ಶರಣೆ ಕೆಂಚಿಯ ಪಾತ್ರದಲ್ಲಿ ಚಂದ್ರಮ್ಮ ಅವರೂ ಉತ್ತಮವಾದ ಅಭಿನಯ ಮಾಡಿದರು. ಪೆದ್ದಿಯ ಹೆಂಡತಿ ಶರಣೆ ಕಾಳವ್ವೆಯ ಪಾತ್ರದಲ್ಲಿ ಮಂಜುಳಾ ಬದಾಮಿ ಅವರು ಅಭಿನಯಿಸಿ ಪ್ರದರ್ಶನದ ಯಶಸ್ವಿಗೆ ಕಾರಣರಾದರು. ಧ್ವನಿ ನಿರ್ವಹಣೆಯನ್ನು ಲವಕುಮಾರ, ನೆರಳು ಮತ್ತು ಬೆಳಕಿನ ವಿನ್ಯಾಸ ವೈ ಡಿ ಬದಾಮಿ ಹಾಗೂ ಮಾರ್ಗದರ್ಶನವನ್ನು ಪರಮಪೂಜ್ಯ ಪಂಡಿತಾರಾಧ್ಯ ಗುರುಗಳು ಮಾಡಿದರು.
ಶರಣು