ಕಲಬುರ್ಗಿ ವಿವಿಯಲ್ಲಿ ಶರಣ ಉರಿಲಿಂಗಪೆದ್ದಿ ಅವರಿಗೆ ಅವಮಾನ: ಪಂಚಾಕ್ಷರಿ ಸ್ವಾಮೀಜಿ ಕಿಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಉರಿಲಿಂಗಪೆದ್ದಿ ಶರಣರ ಕಳ್ಳತನ ಮಾಡುವ ಮೂಟೆ ಹೊತ್ತ ಚಿತ್ರ ಹಾಕಿದ್ದು ಖಂಡನೀಯ ಎಂದು ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಉಗ್ರವಾಗಿ ಪ್ರತಿಭಟಿಸಿದ್ದಾರೆ.

ಶರಣ ಉರಿಲಿಂಗಪೆದ್ದಿ ಕಳ್ಳರಾಗಿರಲಿಲ್ಲ. ಅವರು ಕಟ್ಟಿಗೆ ಕಾಯಕ ಮಾಡುವವರಾಗಿದ್ದರು. ಆದರೆ ವಿಶ್ವ ವಿದ್ಯಾಲಯದವರು ಅವರನ್ನು ಕಳ್ಳನಂತೆ ಚಿತ್ರಿಸಿದ ಪೋಟೋ ಬಳಸಿದ್ದು ಅಮಾನವೀಯತೆ. ಕಾರ್ಯಕ್ರಮದ ಸಂಚಾಲಕರು ತಮ್ಮ ನಿರ್ಲಕ್ಷ್ಯತನ ಇಲ್ಲಿ ಪ್ರದರ್ಶಿಸುವ ಕೆಲಸ ಮಾಡಿದ್ದಾರೆ. ಕೂಡಲೇ ಅವರು ತಪ್ಪೊಪ್ಪಿಗೆ ನೀಡಬೇಕು, ರಿಜಿಸ್ಟ್ರಾರ್ ಮತ್ತು ವೈಸ್ ಚಾನ್ಸಲರ್ ಇವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಐದು ದಿನಗಳಲ್ಲಿ ಕ್ರಮ ಕೈಕೊಳ್ಳದಿದ್ದರೆ, ಅವರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು, ಮಾಧ್ಯಮಗಳಿಗೆ ನೀಡಿರುವ ಪ್ರಕಟಣೆಯಲ್ಲಿ ಸ್ವಾಮೀಜಿ ಎಚ್ಚರಿಸಿದ್ದಾರೆ.

‘ಎಪ್ರೀಲ್ 11ರಂದು ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ನಡೆದ ದೇವರ ದಾಸಿಮಯ್ಯ ಮತ್ತು ಕಾಯಕ ಶರಣರ ಜಯಂತ್ಯುತ್ಸವದಲ್ಲಿ ಈ ಪ್ರಮಾದ ನಡೆದಿದೆ. ಕಾಯಕ ಶರಣರ ಜಯಂತ್ಯೋತ್ಸವ ಸಮಿತಿ ಸಂಚಾಲಕರಾದ ಪ್ರೊ. ಎಚ್.ಟಿ‌. ಪೋತೆಯವರಿಗೆ ಇದರ ಸೂಕ್ಷ್ಮತೆ ಅರ್ಥವಾಗಿಲ್ಲವೇ? ವಿಶ್ವವಿದ್ಯಾಲಯದ ನೇತಾರ, ವಿದ್ವಾಂಸ, ಡೀನ್, ಕನ್ನಡ ವಿಭಾಗ ನಿರ್ದೇಶಕ, ಪ್ರಸಾರಾಂಗ ನಿರ್ದೇಶಕ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ, ಹಲವು ಪೀಠಗಳ ಸಂಚಾಲಕರಾದ ಇವರು ಏತಕ್ಕಾಗಿ ಇದ್ದಾರೆ?


ವಿವಾದಿತ ಚಿತ್ರ

ಶರಣರು ಕಾಯಕ ಜೀವಿಗಳು. ಅವರಿಗೆ ವೈದಿಕರು ಕಲ್ಪೋತಿತವಾಗಿ ಚಿತ್ರಿಸಿರುವುದನ್ನು ಬರೆದಿರುವುದೇ ಸತ್ಯವಲ್ಲ. ಶರಣ ಉರಿಲಿಂಗಪೆದ್ದಿಗೆ ಮೇಲಿಂದ ಮೇಲೆ ಅವಮಾನ ಮಾಡಲಾಗುತ್ತಿದೆ. ಇದನ್ನು ಖಂಡಿಸುವರು ಯಾರು ಇಲ್ಲ ಎಂದು ತಿಳಿದೇ ತಪ್ಪಿನ ಮೇಲೆ ತಪ್ಪು ಮಾಡಲಾಗುತ್ತಿದೆ.

ಉರಿಲಿಂಗಪೆದ್ದಿ ಚಳವಳಿಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನ ಸಾಹಿತ್ಯ ರಚಿಸಿದ ಶರಣರು, ಉನ್ನತಮಟ್ಟದ ವಿದ್ವಾಂಸರು ಆಗಿದ್ದರು. ಪತ್ನಿ ಕಾಳವ್ವೆ ಕೂಡ ವಚನಕಾರ್ತಿ. “ಸತಿಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂದು ಬಾಳಿದವರು ಶರಣರು. ಇಂದಿನವರು ಆ ರೀತಿ ಬಾಳದೇ ಅಮೃತದೊಳಗೆ ವಿಷಬೆರೆಸಿದಂತೆ ಬಾಳುವ ಜನರಿಗೆ ಏನನ್ನಬೇಕು,’ ಎಂದು ಪ್ರಕಟಣೆಯಲ್ಲಿ ಸ್ವಾಮೀಜಿ ಕೇಳಿದ್ದಾರೆ.

ವಿಶ್ವವಿದ್ಯಾಲಯದ ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸಮಾಜ ಕಲ್ಯಾಣ ಇಲಾಖೆ ಸಚಿವರು, ಮಾನವ ಹಕ್ಕುಗಳ ಆಯೋಗ, ಎಸ್.ಸಿ., ಎಸ್.ಟಿ. ಸೆಲ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ರಾಜ್ಯಪಾಲರು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *