ಮೈಸೂರು ಉರಿಲಿಂಗಪೆದ್ದಿ ಮಠದಲ್ಲಿ ಸಂಭ್ರಮದ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

12ನೇ ಶತಮಾನಕ್ಕೆ ಮೊದಲು ಮಹಿಳೆಯರನ್ನು ಅತ್ಯಂತ ಕನಿಷ್ಠವಾಗಿ ಕಾಣುತ್ತಿತ್ತು. ಮುಟ್ಟಾದ ಮಹಿಳೆಯರನ್ನು ಮನೆಯ ಒಳಗಡೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಬಸವಣ್ಣನವರು ಈ ಮೌಢ್ಯವನ್ನರಿತು ಅದನ್ನು ಧಿಕ್ಕರಿಸಿದರು. ಮಹಿಳೆಗೆ ದೈವತ್ವದ ಸ್ಥಾನವನ್ನು ತಂದುಕೊಟ್ಟು ಸತ್ಕರಿಸಿದರು.

ಮುಟ್ಟು ಬಂದು ನಿಂತ ಮೇಲೆಯೇ ನಾವೆಲ್ಲ ಜನಿಸಿದ್ದೇವೆ, ಎಲ್ಲರೂ ಮುಟ್ಟಿನ ಹೊಲೆಯೊಳಗೆ ಹುಟ್ಟಿದ್ದಾರೆ. ವೈದಿಕ ಸಂಸ್ಕೃತಿಯು ಮಹಿಳೆಯರನ್ನು ಕನಿಷ್ಠ ಸ್ಥಾನದಲ್ಲಿ ನೋಡುತ್ತಿತ್ತು, ಬಸವಣ್ಣನವರು ಅಂದೇ ಸಾವಿರಾರು ಜನ ಮಹಿಳೆಯರಿಗೆ ಲಿಂಗದೀಕ್ಷೆ ಕೊಟ್ಟು ಶರಣೆಯರನ್ನಾಗಿ ಮಾಡಿದರು ಎಂದು ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಅವರು ಗಾಂಧಿನಗರದಲ್ಲಿರುವ ಉರಿಲಿಂಗಪೆದ್ದಿ ಮಹಾಮಠದಲ್ಲಿ ರವಿವಾರ ನಡೆದ ಸಂಭ್ರಮದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂದಿನ ಕಲ್ಯಾಣ ನಾಡಿನಲ್ಲಿ ಶ್ರಮಜೀವಿ ಸಮುದಾಯದ ಎಲ್ಲಾ ಮಹಿಳೆಯರು ಜ್ಞಾನಿಗಳಾದರು. ಇಂದು ಸಹ ಕೆಲವು ಸಮಾಜಗಳಲ್ಲಿ ಮೌಢ್ಯಾಚರಣೆಗಳಿವೆ. ಮೌಢ್ಯದಿಂದ ಜನ ಹೊರಬರಬೇಕಾಗಿದೆ. ಬಸವಣ್ಣನವರು ಜಗತ್ತಿಗೆ ಬರದಿದ್ದರೆ ನಾವೆಲ್ಲ ಇಂದಿಗೂ ಸಹ ಜೀತದಾಳುಗಳಾಗಿ ಇರಬೇಕಾಗಿತ್ತು. ಅದರಿಂದ ಮುಕ್ತಿ ಕೊಡಿಸಿ, ಎಲ್ಲಾ ವರ್ಗದ ಜನರಿಗೂ ಕೂಡ ಸಂಸ್ಕಾರವನ್ನು ಕೊಟ್ಟು, ಶಿಕ್ಷಣವನ್ನು ಕೊಟ್ಟು ನಿಮ್ಮನ್ನೆಲ್ಲ ಮೇಲೆ ತಂದವರು ಬಸವಣ್ಣನವರು ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ಉಳವಿಯ ಚನ್ನಬಸವೇಶ್ವರ ಮಠದ ಬಸವಲಿಂಗ ಮೂರ್ತಿ ಶರಣರು, ಮುಡುಕುತೊರೆ ಉರಿಲಿಂಗಪೆದ್ದಿ ಶಾಖಾಮಠದ ಸಿದ್ದರಾಮಯ್ಯ ಭರತ ಸ್ವಾಮಿಗಳು, ಹಾಳನಹಳ್ಳಿಯ ಗುರುಮಲ್ಲೇಶ್ವರ ಭಿಕ್ಷೆದ ಮಠದ ಪೂಜ್ಯ ಜಯದೇವಿತಾಯಿಯವರು, ಮೈಸೂರಿನ ಖ್ಯಾತ ವಕೀಲರಾದ ಅಂಬಳೆ ಶಿವಾನಂದಸ್ವಾಮಿ ಅವರು ಪಾಲ್ಗೊಂಡಿದ್ದರು.

ಬಸವ ಜಯಂತಿ ವಿಶೇಷ ಉಪನ್ಯಾಸವನ್ನು ಡಾಕ್ಟರ್ ಮಹೇಶ್ ದಳಪತಿಯವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಾ. ಶಿವಾನಂದಸ್ವಾಮಿ, ದಿವಾಕರ, ಸುಬ್ರಹ್ಮಣ್ಯಸ್ವಾಮಿ, ಗೋಪಾಲ, ಲಿಂಗಾನಂದಸ್ವಾಮಿ ಮತ್ತಿತರ ಶರಣ-ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment
  • ಉರಿಲಿಂಗಪೆದ್ದಿ ಮಠದ ಶ್ರೀಗಳು ಬಸವಣ್ಣ, ಬುದ್ದ, ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸುತ್ತಾ ‌ ಎಲ್ಲ‌ಮೌಡ್ಯ ತಿರಸ್ಕರಿಸುತ್ತ ಹಿಂದುಳಿದವರ ಶೋಷಿತರ ಪರ ಧ್ವನಿ ಎತ್ತುತ್ತಿರುವ ನಿಜವಾದ ಬಸವ ತತ್ವ ಆಚರಿಸುತ್ತಿರುವ ಸ್ವಾಮೀಜಿ. ಇದೇ ನೈಜ ಬಸವ ತತ್ವ .

Leave a Reply

Your email address will not be published. Required fields are marked *