‘ಡಿಸೆಂಬರ್ 7 ಉಸ್ಮಾನಾಬಾದನಲ್ಲಿ ಲಿಂಗಾಯತ ಮಹಾರ‍್ಯಾಲಿ’

ಬೀದರ

ಡಿಸೆಂಬರ್ 7 ಮಹಾರಾಷ್ಟ್ರದ ಉಸ್ಮಾನಾಬಾದನಲ್ಲಿ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಲಿಂಗಾಯತ ಮಹಾರ‍್ಯಾಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಸಸ್ತಾಪುರ ಬಂಗ್ಲಾ ಸಮೀಪದ ಎಂ.ಎಂ. ಬೇಗ್ ಸಭಾಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 4ನೇ ಸ್ವಾಭಿಮಾನಿ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ ಬಸವ ಮಂಟಪ ಬೀದರ ಅವರು ಮಾತನಾಡಿ, ಗುರು ಭಕ್ತಿಯನ್ನು ಮೈಗೂಡಿಸಿಕೊಂಡು ಶರಣರಿಗೆ ಶರಣಾರ್ಥಿ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘಟನೆ ಒಡೆಯದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ರಾಷ್ಟ್ರೀಯಬಸವ ದಳ ಇಂದಿಗೂ ಗಟ್ಟಿಯಾಗಿರಲು ಧರ್ಮಶೃದ್ಧೆ, ತತ್ವನಿಷ್ಠೆ ಹಾಗೂ ಲಿಂಗಾನಂದ ಸ್ವಾಮೀಜಿ ಮತ್ತು ಮಾತೆ ಮಹಾದೇವಿ ತಾಯಿ ಪರಿಶ್ರಮ ಕಾರಣವಾಗಿದೆ. ಸಂಘಟನೆಗೆ ಇನ್ನೂ ಹೆಚ್ಚಿನ ಒತ್ತುಕೊಡಿ ಎಂದರು.

ಚಿಕ್ಕಮುನವಳ್ಳಿಯ ಪೂಜ್ಯ ಶಿವಪುತ್ರ ಸ್ವಾಮೀಜಿ ಮಾತನಾಡಿ, ದೇವನೊಬ್ಬನೇ ತಂದೆ, ಮನುಜರೆಲ್ಲರೂ ಒಂದೇ ಎನ್ನುವ ಶರಣರ ಸಂದೇಶ ಎಲ್ಲಾ ಧರ್ಮಿಯರಿಗೂ ಅನ್ವಯಿಸುತ್ತದೆ. ಏಕದೇವೋಪಾಸಕರಾಗಿ ಬದುಕಬೇಕೆಂದು ಕರೆ ನೀಡಿದರು.

ಬಸವ ಕಲ್ಯಾಣದ ಮಣ್ಣು ಹಣೆಗೆ ಹಚ್ಚಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಅವಿಮುಕ್ತ ಕ್ಷೇತ್ರ ಬಸವಕಲ್ಯಾಣವನ್ನು ಅಂತರಾಷ್ಟ್ರೀಯ ತಾಣವಾಗಿ ಮಾಡಲು ಎಲ್ಲರೂ ಪ್ರಯತ್ನಿಸಬೇಕೆಂದರು.

ಖಾದ್ರಿ ವೆಲ್ಫೇರ್ ಸೊಸೈಟಿ ಧಾರವಾಡದ ಉಪಾಧ್ಯಕ್ಷರಾದ ಪೂಜ್ಯ ಸೂಫಿ ಸಂತ ಪಿರೆ ತರಿಕತ್ ಅಬ್ದುಲ್ ರಜಾಕ್ ಮಾತನಾಡಿ, ಚನ್ನಬಸವಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯವಾಗಿದೆ. ಅವರ ಹೋರಾಟಕ್ಕೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

ನಿವೃತ್ತ ಕೃಷಿ ವಿವಿ ಡೀನ್ ಡಾ. ಸುರೇಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಅಕ್ಕನಾಗಲಾಂಬಿಕಾ ಮಹಿಳಾ ಗಣದ ಶರಣೆಯರಿಂದ ಬಸವ ಪೂಜೆ ನೆರವೇರಿತು. ಕು. ವಚನ ಸಾಹಿತ್ಯ ಅವರಿಂದ ವಚನ ನೃತ್ಯ ಜರುಗಿತು. ಶಿವಕುಮಾರ ಪಾರಾ ನಿರೂಪಿಸಿದರು. ಜ್ಯೊತಿ ಕಟಾಳೆ ಸ್ವಾಗತಿಸಿದರು. ದಿಪಾಲಿ ಬಿರಾದಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಪೂಜ್ಯ ಬಸವಪ್ರಭು ಸ್ವಾಮೀಜಿ ಕಲ್ಯಾಣಮಹಾಮನೆ ಗುಣತೀರ್ಥವಾಡಿ, ಪೂಜ್ಯ ಮಾತೆ ಶಾಂತಾದೇವಿ, ಭಾಗ್ಯವಂತಿ ಮಾತಾಜಿ ಬೀದರ, ಪ್ರಮುಖರಾದ ಎಸ್. ದಿವಾಕರ್, ಬಸವರಾಜ ಪಾಟೀಲ ಶಿವಪುರ, ಶಶಿಕುಮಾರ ಪಾಟೀಲ, ಬಸವರಾಜ ಪಾಟೀಲ ಚಿಕ್ಕಪೇಟ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಕೆ. ಶರಣಪ್ರಸಾದ ಬೆಳಗಾವಿ, ಜೈರಾಜ ಹತ್ತಿ ಸೇರಿದಂತೆ ಹಲವರಿದ್ದರು.

ಕಲ್ಯಾಣ ಪರ್ವದಲ್ಲಿ ಕೈಗೊಂಡ ಆರು ನಿರ್ಣಯಗಳು

ಡಿ. 7ರಂದು ಮಹಾರಾಷ್ಟ್ರದ ಉಸ್ಮಾನಾಬಾದನಲ್ಲಿ ಲಿಂಗಾಯತ ಮಹರ‍್ಯಾಲಿ ಆಯೋಜನೆ.

2026ರ ಜನವರಿ ತಿಂಗಳಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆಗಾಗಿ ದಿಲ್ಲಿ ಚಲೋ ಆಯೋಜನೆ.

ನ್ಯಾ. ಗವಾಯಿ ಮೇಲೆ ಶೂ ಎಸೆದ ವಕೀಲ ಕಿಶೋರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಹೋರಾಟ.

ಕನ್ಹೇರಿ ಮಠದ ಸ್ವಾಮಿಗಳು ಬಸವ ತತ್ವದ ಸ್ವಾಮಿಗಳಿಗೆ ಅವಹೇಳನ ಮಾಡಿದ್ದು ಖಂಡಿಸುತ್ತೇವೆ.

ನವೆಂಬರ್ ನಿಂದ ಕರ್ನಾಟಕ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಆರು ರಾಜ್ಯಗಳಲ್ಲಿ ಲಿಂಗಾಯತ ಧರ್ಮ ಜಾಗೃತಿ ಅಭಿಯಾನ ಆರಂಭಿಸುವುದು.

ನವೆಂಬರ್ 14ಕ್ಕೆ ದುಬೈನಲ್ಲಿ ಚನ್ನಬಸವೇಶ್ವರ ಜಯಂತಿ ಆಚರಣೆ ಮಾಡುವುದು.

ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ನಿರ್ಣಯಗಳನ್ನು ಮಂಡಿಸಿದರು. ಸಭಿಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಚಿಂತಕರು, ಬೀದರ