ಮೊಬೈಲ್ ಮತ್ತು ರೀಲ್ಸ್ ಗೀಳು ಬಿಟ್ಟು ವಚನಗಳತ್ತ ತಿರುಗಿದ ಲಾವಣ್ಯ ಅಂಗಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಮೊಬೈಲ್ ಯುಗದಲ್ಲಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ ಎನ್ನುತ್ತಾರೆ ಲಾವಣ್ಯಳ ಚಿಕ್ಕಮ್ಮ ಮಹಾದೇವಿ

ಬೆಂಗಳೂರು

ಈ ತಿಂಗಳು ನೆಲಮಂಗಲದ ಪವಾಡ ಬಸವಣ್ಣ ಮಠ ಏರ್ಪಡಿಸಿದ್ದ ವಚನ ಸ್ಪರ್ಧೆಯಲ್ಲಿ 1051 ವಚನ ಹೇಳಿ ಒಂದು ಲಕ್ಷ ರೂಪಾಯಿ ಬಹುಮಾನ ಗೆದ್ದ ಲಾವಣ್ಯ ಅಂಗಡಿ ಶರಣ ಸಮಾಜದಲ್ಲಿ ದೊಡ್ಡ ಸಂಚಲನ ಮೂಡಿಸಿದಳು.

15ನೇ ವರ್ಷಕ್ಕೆ ಈ ಮಹತ್ ಸಾಧನೆ ಮಾಡಿರುವ ಲಾವಣ್ಯ ಅಂಗಡಿ ಇರುವುದು ಬೆಳಗಾವಿ ಜಿಲ್ಲೆಯ ಸಾಣಿಕೊಪ್ಪದ ಅಜ್ಜಿ ಮನೆಯಲ್ಲಿ. ಓದುತ್ತಿರುವುದು ಹಿರೇಬಾಗೇವಾಡಿಯ ಲಿಟಲ್ ಸ್ಟಾರ್ ಸ್ಕೂಲಿನ ಒಂಬತ್ತನೇ ತರಗತಿಯಲ್ಲಿ. ಲಾವಣ್ಯಳನ್ನು ರೂಪಿಸುತ್ತಿರುವ ಅವಳ ಚಿಕ್ಕಮ್ಮ ಮಹಾದೇವಿ. ಎಸ್ ಎಂ.ಎ ಬಿ.ಎಡ್ ಮಾಡಿ ಶಿಕ್ಷಕರಾಗಿ ಕಾಯಕ ಮಾಡುತ್ತಿದ್ದಾರೆ.

ಲಾವಣ್ಯ ವಚನಗಳನ್ನು ಗಂಭೀರವಾಗಿ ಕಲಿಯಲು ಶುರುಮಾಡಿದ್ದು ಆರನೇ ತರಗತಿಯಲ್ಲಿದ್ದಾಗ. ಒಂದು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಮೊದಲ ಭಾರಿಗೆ ಭಾಗವಹಿಸಿ 81 ವಚನ ಹೇಳಿ ನಾಲ್ಕನೇ ಸ್ಥಾನ ಪಡೆದಳು. ನಂತರ ಬೆಳಗಾವಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 320 ವಚನಗಳನ್ನು ಒಂದು ಗಂಟೆಯಲ್ಲಿ ಹೇಳಿ ಮೊದಲನೇ ಬಹುಮಾನ ಪಡೆದಳು.

ಲಾವಣ್ಯ ಮೊದಲು ಬೆಳಕಿಗೆ ಬಂದಿದ್ದು 2023ರಲ್ಲಿ ಬೀದರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ. 750 ವಚನ ಹೇಳಿ ಮೊದಲ ಬಹುಮಾನ ಪಡೆದು ಭಾಲ್ಕಿ ಶ್ರೀಗಳಿಂದ ಮೆಚ್ಚುಗೆ ಪಡೆದಳು.

ಈಗ ಲಾವಣ್ಯ ವಚನ ಸ್ಪರ್ಧೆಗಳಲ್ಲಿ ನಿರಂತರವಾಗಿ ಸ್ಪರ್ಧಿಸುತ್ತಿದ್ದಾಳೆ. ಅವಳ ಗೆಲುವೂ ಅಷ್ಟೇ ನಿರಂತರವಾಗಿದೆ.

ಲಾವಣ್ಯ ಪ್ರತಿ ದಿನ 10 ವಚನಗಳನ್ನು ಬರೆದುಕೊಂಡು ಕಲಿಯುತ್ತಾಳೆ. ಈಗಾಗಲೇ ಕಲಿತಿರುವ ವಚನಗಳ ಅಭ್ಯಾಸವನ್ನೂ ಮಾಡುತ್ತಾಳೆ. ನಿತ್ಯದ ಶಿಸ್ತು ಕಾಯ್ದುಕೊಳ್ಳುವುದು ಲಾವಣ್ಯಳಂತಹ ಮಕ್ಕಳಿಗೂ ಸುಲುಭದ ಕೆಲಸವಲ್ಲ ಎನ್ನುತ್ತಾರೆ ಮಹಾದೇವಿ ಅವರು. ಆದರೂ ಹಠ ಬಿಡದೆ ಲಾವಣ್ಯ ದಿನದ ಅಭ್ಯಾಸ ಮುಗಿಸಲು ಪ್ರಯತ್ನಿಸುತಾಳೆ.

ಲಾವಣ್ಯಳ ಸಾಧನೆಯ ದಾರಿಯಲ್ಲಿ ಎರಡು ಮೈಲಿಗಲ್ಲುಗಳು ಮುಖ್ಯವಾದವು ಎಂದು ಮಹಾದೇವಿ ಹೇಳುತ್ತಾರೆ

ಎಲ್ಲಾ ಮಕ್ಕಳಂತೆ ಅವಳಿಗೆ ಮೊಬೈಲ್ ಚಟ ಬಹಳವಾಗಿತ್ತು. ರೀಲ್ಸ್ ಮಾಡುವುದರಲ್ಲಿ ಸಮಯ ಕಳೆಯುತ್ತಿತ್ತು. ಮೊಬೈಲ್ ಚಟ ಬಿಡಿಸಲು ವಚನಗಳನ್ನು ಕಲಿತು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಹಾದೇವಿ ಪ್ರೋತ್ಸಾಹಿಸಿದರು. ಅವಳ ಗಮನ ಕ್ರಮೇಣ ಮೊಬೈಲ್ ಮತ್ತು ರೀಲ್ಸ್ ಗಳಿಂದ ವಚನಗಳತ್ತ ತಿರುಗಿತು.

2023ರಲ್ಲಿ ನಾಗನೂರು ರುದ್ರಾಕ್ಷಿ ಮಠ ಏರ್ಪಡಿಸುವ ಮಕ್ಕಳ ಶರಣ ಸಂಸ್ಕೃತಿ ಶಿಬಿರದಲ್ಲಿ ಲಾವಣ್ಯ ಭಾಗವಹಿಸಿದಳು. ಅಲ್ಲಿ ಅವಳಿಗೆ ಲಿಂಗ ಪೂಜೆ ಮಾಡಿಕೊಳ್ಳುವುದನ್ನು ಕಲಿಸಲಾಯಿತು. “ನಾವೆಲ್ಲ ಹಾಸ್ಟೇಲಿನಲ್ಲಿ ಬೆಳೆದಿದ್ದರಿಂದ ನಮಗೆ ಅಷ್ಟು ಶರಣ ಪದ್ದತಿಗಳ ಪರಿಚಯವಿರಲಿಲ್ಲ. ಶಿಬಿರದಲ್ಲಿ ಅದನ್ನು ಅವಳಿಗೆ ಕಲಿಸಿದ್ದು ಬಹಳ ಪ್ರಯೋಜನವಾಯಿತು,” ಎನ್ನುತ್ತಾರೆ ಮಹಾದೇವಿ.

ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಲಾವಣ್ಯ ತಪ್ಪದೆ ಲಿಂಗ ಪೂಜೆ ಮಾಡಿಕೊಳ್ಳುತ್ತಾಳೆ. ಅದರಿಂದ ಮನಸ್ಸು ಪ್ರಶಾಂತವಾಗುತ್ತದೆ, ದಿನ ಪೂರ್ತಿ ಏನೇನು ಕೆಲಸ ಮಾಡಬೇಕೆಂದು ಸ್ಪಷ್ಟತೆ, ಶಿಸ್ತು ದೊರೆಯುತ್ತದೆ, ಎನ್ನುತ್ತಾಳೆ ಲಾವಣ್ಯ.

ಲಾವಣ್ಯ ಓದಿನಲ್ಲಿ ಚುರುಕು. ಆಟದಲ್ಲಿಯೂ ಚುರುಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಚುರುಕು. ಪ್ರಬಂಧ, ಭಾಷಣ, ಡಾನ್ಸ್, ಸಂಗೀತ ಎಲ್ಲದರಲ್ಲೂ ಮುಂದೆ.

ಎಂಟನೇ ತರಗತಿಯಲ್ಲಿ 99% ಪಡೆದಿರುವ ಲಾವಣ್ಯ ಮುಂದೆ ಚೆನ್ನಾಗಿ ಓದಿ ಒಳ್ಳೆ ಉದ್ಯೋಗ ಹಿಡಿಯಬೇಕು ಎನ್ನುತ್ತಾಳೆ. ಬಂದಿರುವ ಒಂದು ಲಕ್ಷ ಬಹುಮಾನ ಮುಂದಿನ ಶಿಕ್ಷಣಕ್ಕೆ ಎತ್ತಿ ಇಟ್ಟಿದ್ದಾಳೆ.

ಲಾವಣ್ಯಳಿಗೆ ಒಬ್ಬ ತಮ್ಮನಿದ್ದಾನೆ. ಶ್ರೀಧರನೂ ಈಗ ಚುರುಕಾಗಿ ವಚನಗಳನ್ನು ಕಲಿಯಲು ಶುರು ಮಾಡಿದ್ದಾನೆ. ಲಾವಣ್ಯಳ ತಂದೆ ಮಂಜುನಾಥ ಅಂಗಡಿ ಮತ್ತು ತಾಯಿ ಗಿರಿಜ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
4 Comments
  • ಹೆಮ್ಮೆಯ ವಿಷಯ, ಲಾವಣ್ಯ. ಮಕ್ಕಳನ್ನು ಶರಣ ಸಾಹಿತ್ಯ ದತ್ತ ಬೆಳೆಸೋಣ.

  • ಪೂಜ್ಯ ಶ್ರೀ ಬಸವಗೀತಾ ಮಾತಾಜಿ ಗುರುಬಸವ ಮಠ ನಾಗನೂರ says:

    ಲಾವಣ್ಯ ಇನ್ನೂ ಲಕ್ಷಾಂತರ ವಚನ ಹೇಳುವಂತಾಗಲಿ
    ಗುರು ಬಸವಣ್ಣನವರು ಅವಳಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಆತ್ಮೀಯವಾಗಿ ಹಾರೈಸುತ್ತೇವೆ

  • ತುಂಬಾ ಉತ್ತಮ ಸಂಸ್ಕಾರ ಈ ರೀತಿ ಬೆಳೆದ ಮಗುವಿಗೆ ಉತ್ತಮ ಭವಿಷ್ಯವಿದೆ ವಚನ ಸಾಹಿತ್ಯ ಅವಳನ್ನು ಕಾಪಾಡಲಿ ಬಸವಾದಿ ಶರಣರ ಕೃಪೆ ಯಾವತ್ತೂ ಆ ಮಗುವಿನ ಮೇಲಿರಲಿ.

  • ಇವತ್ತಿನ ಮಕ್ಕಳಿಗೆ ಕಲಿಯುವ ಹವ್ಯಾಸವೇ ಕಡಿಮೆಯಾಗುತ್ತಿದೆ ಇದರ ನಡುವೆ ಶ್ರೀಮಠ ಇಂಥದೊಂದು ಚಿಂತನೆ ಮಾಡಿ ಯುವ ಪೀಳಿಗೆಗೆ ವಚನಗಳ ಓದಿನ ಆಸಕ್ತಿ ಮೂಡಿಸಿದ್ದು ನಿಜಕ್ಕೂ ಶ್ಲಾಘನೀಯ. ‌ಅಭಿನಂದನೆಗಳು ಲಾವಣ್ಯ ಈ ಮಗುವಿಗೆ.

Leave a Reply

Your email address will not be published. Required fields are marked *