ಮತಾಂಧ ವೈದಿಕ ಧರ್ಮೀಯರು ಇತರೆ ಧರ್ಮಗಳನ್ನು “ಇರಿದು ಕೊಲ್ಲುತ್ತಾರೆ, ಆಗದಿದ್ದರೆ ಅಪ್ಪಿ ಸಾಯಿಸುತ್ತಾರೆ.”
೧೨ನೇ ಶತಮಾನದಿಂದಲೇ ಶರಣ ಧರ್ಮವನ್ನು ಇರಿದು ಕೊಲ್ಲಲು ಯತ್ನಿಸಿದರು.ಬಸವಾದಿಶರಣರು ಹಾಕಿದ ತಳಪಾಯ ಮಜಬೂತಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಈಗ ಅದನ್ನು ಅಪ್ಪಿ ಸಾಯಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಅದರ ಪ್ರಯತ್ನದ ಭಾಗವೇ ಈ “ವಚನ ದರ್ಶನ”ವೆಂಬ, ಬಸವಣ್ಣನವರ ಮತ್ತು ಹಲವಾರು ಶರಣರ ವಚನಗಳನ್ನು ತಿರುಚಿ ವಿಶ್ಲೇಷಿಸುವ ಕೃತಿಯ ಪ್ರಕಟನೆ.
“ವಚನ ದರ್ಶನ” ಎಂಬ ಕೃತಿಯನ್ನು ಪ್ರಕಟಿಸಿದ್ದು “ಅಯೋಧ್ಯಾ ಪ್ರಕಾಶನ”, ಬಿಲ್ಲು ಮತ್ತು ಬಾಣ ಈ ಪ್ರಕಾಶನದ ಲಾಂಛನ,ಇದನ್ನು ಮುದ್ರಿಸಿದ್ದು ಆರೆಸ್ಸೆಸ್ ನ “ರಾಷ್ಟ್ರೋತ್ಥಾನ ಮುದ್ರಣಾಲಯ”, ಇದರಲ್ಲಿನ ಲೇಖಕರೆಲ್ಲ “ಕಲ್ಯಾಣ ಕ್ರಾಂತಿಯೇ ನಡೆದಿಲ್ಲ ” ಎಂದು ವಾದಿಸುತ್ತಿದ್ದ ಇರಿದು ಕೊಲ್ಲುವ ತಂತ್ರಗಾರಿಕೆಯ ಕುತಂತ್ರದ ತಂಡದವರು.
ರಾಜ್ಯದಾದ್ಯಂತ ಈ ಪುಸ್ತಕದ ಬಿಡುಗಡೆಗೆ ಟೊಂಕ ಕಟ್ಟಿ ನಿಂತವರು ಆರೆಸ್ಸೆಸ್/ಬಿಜೆಪಿಯ ನಾಯಕರಾದ ಬಿ.ಎಲ್.ಸಂತೋಷ ಮತ್ತು ಅವರ ತಂಡ. ಇವರು ಬಳಸುತ್ತಿರುವುದು ಶರಣರ ವಚನಗಳನ್ನು ಮತ್ತು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಮಾತುಗಳನ್ನು.
ಇಂಥವರ ಕುತಂತ್ರಗಳನ್ನು ಅಂದೇ ತಿಳಿದಿದ್ದ ಬಸವಣ್ಣ ಅವತ್ತೇ “ವೇದಕ್ಕೆ ಒರೆಯ ಕಟ್ಟುವೆ…” ಎಂದು ಬರೆದಿದ್ದರು.ಅಂದಹಾಗೆ ವೇದ, ಆಗಮ,ಸ್ಮೃತಿ,ಪುರಾಣ , ಚಾತುರ್ವರ್ಣ ಮುಂತಾದ ವೈದಿಕ ಪರಂಪರೆಯ ಸಾಹಿತ್ಯ, ಆಚರಣೆಗಳನ್ನು ಸಾವಿರಾರು ವಚನಗಳಲ್ಲಿ ವಿರೋಧಿಸಿದ ಶರಣರ ಒಂದೇ ಒಂದು ವಚನ ಈ ” ವಚನ ದರ್ಶನ”ದ ಲೇಖಕರ ಬಳಗದ ಕಣ್ಣಿಗೆ ಬಿದ್ದಿಲ್ಲ,ಅಥವಾ ಈ ಕೃತಿಯಲ್ಲಿ ಪ್ರಸ್ತಾಪಿಸಿಲ್ಲ. ಬದಲಾಗಿ ಶರಣರ ವಚನಗಳು ಸನಾತನ(ವೈದಿಕ) ಪರಂಪರೆಯ ಮುಂದುವರಿದ ಭಾಗ ಎಂದು ಬರೆಯುತ್ತಾರೆ. ಇದಕ್ಕಿಂತ ಹಿಪೋಕ್ರಸಿ ಬೇಕೆ?
ಅವರು ೧೨ನೇ ಶತಮಾನದಲ್ಲಿ ವಚನಕಾರರ ಮೇಲೆ ದೈಹಿಕವಾಗಿ ದಾಳಿ ಮಾಡಿದಂತೆ ಇಂದು ವೈದಿಕ ತತ್ವಗಳಿಗೆ, ಆರೆಸ್ಸೆಸ್ ನ ಮತಾಂಧ ನೀತಿಗಳಿಗೆ ವಿರುದ್ಧವಾಗಿರುವ ವಚನಕಾರರ ವಚನಗಳ ಮೇಲೆ ಅಂದರೆ ಶರಣರ ಚಿಂತನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬಹುತೇಕ ಲಿಂಗಾಯತರು ಮೌನವಾಗಿದ್ದಾರೆ.ಕೆಲವೇ ಮಠಾಧಿಪತಿಗಳು,ಪ್ರಗತಿಪರರು ಈ ಹುನ್ನಾರವನ್ನು ವಿರೋಧಿಸಿದ್ದಾರೆ.
ಈ ಕೃತಿಯ ಲೇಖಕರು,ಪ್ರಕಾಶಕರು,ಬೆಂಬಲಿಗರು ಬಹಿರಂಗ ಚರ್ಚೆಗೆ ಬರಲಿ ಎಂದು ಪ್ರಗತಿಪರ ಚಿಂತಕರು ಆಹ್ವಾನಿಸಿದ್ದಾರೆ. ವೈದಿಕ ತೀರ್ಥ, ಪ್ರಸಾದಿಗಳಿಂದ ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಚರ್ಚೆ ಆದರೆ ಒಳ್ಳೆಯದು.