ವಚನ ದರ್ಶನ ಬಿಡುಗಡೆಗೆ ಬೊಮ್ಮಾಯಿ ಹಾಜರಿ, ಪ್ರಹ್ಲಾದ್ ಜೋಶಿ ಮಾತ್ರ ನಾಪತ್ತೆ

ಎಂ. ಎ. ಅರುಣ್
ಎಂ. ಎ. ಅರುಣ್

ಮೊನ್ನೆ ಬೆಂಗಳೂರಿನಲ್ಲಿ ನಡೆದ ವಚನ ದರ್ಶನ ಪುಸ್ತಕ ಬಿಡುಗಡೆಗೆ ಬಸವರಾಜ ಬೊಮ್ಮಾಯಿ ಹೋಗಿದ್ದರು ಅಂತ ಯಾರೋ ಹೇಳಿದ್ರು. ನನ್ನ ಸ್ನೇಹಿತರೊಬ್ಬರು ಕಾರ್ಯಕ್ರಮದಲ್ಲಿ ಬೊಮ್ಮಾಯಿ ಕಾಣಿಸುವ ಒಂದು ಫೋಟೋವನ್ನೂ ಹುಡುಕಾಡಿ ತೋರಿಸಿದರು.

ಏನೇ ನಡೆದರೂ ಬಾಯಿ ಬಿಡದೆ ನಿಯತ್ತಾಗಿ ದುಡಿದ ಮಾಜಿ ಮುಖ್ಯಮಂತ್ರಿಗಳನ್ನು ವೇದಿಕೆ ಮೇಲೆ ಏರಿಸುವುದು ಬಿಡಿ, ಎಲ್ಲೋ ಮೂಲೆಯಲ್ಲಿ ಕೂರಿಸಿದ್ದ ಹಾಗೆ ಫೋಟೋನಲ್ಲಿ ಕಾಣಿಸಿತು. ಮೊದಲ ಸಾಲಿನಲ್ಲಿ ಅವರಿಗೆ ಜಾಗ ಸಿಕ್ಕಿದ್ದು ಯಾವ ಜನ್ಮದಲ್ಲಿ ಮಾಡಿದ ಯಜ್ಞದಿಂದಲೋ.

ಆ ಫೋಟೋ ನೋಡುತ್ತಿದ್ದ ಹಾಗೆ ಅನಿಸಿದ್ದು, ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮಗಳಲ್ಲಿ ಪ್ರಹ್ಲಾದ ಜೋಶಿಯವರು ಯಾಕೆ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು.

ಅವರ ಕ್ಷೇತ್ರ ಧಾರವಾಡ, ಪಕ್ಕದ ಹುಬ್ಬಳ್ಳಿಯಲ್ಲಿ ಸ್ವಲ್ಪ ಕೋಲಾಹಲದ ನಡುವೆಯೇ ಕಾರ್ಯಕ್ರಮ ನಡೆಯಿತು. ಮೂರುಸಾವಿರ ಮಠದ ಶ್ರೀಗಳು ಮತ್ತು ಅನೇಕರು ಲಿಂಗಾಯತ ಸಂಘಟನೆಗಳ ಒತ್ತಡಕ್ಕೆ ಮಣಿದು ಕಾರ್ಯಕ್ರಮಕ್ಕೆ ಹೋಗಲು ನಿರಾಕರಿಸಿದರು. ಸಾಕಷ್ಟು ಕಡೆ ವಚನ ದರ್ಶನದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.

ಇದು ಸಂಘ ಪರಿವಾರದ ನೆಚ್ಚಿನ ಕಾರ್ಯಕ್ರಮವಾಗಿದ್ದರೂ, ಜೋಶಿಯವರು ಎಲ್ಲಿಯೂ ಮುಖ ತೋರಿಸಲಿಲ್ಲ. ಬೇರೆ ಬೇರೆ ಊರುಗಳಲ್ಲಿ ಹಾಜರಿ ಹಾಕಿದವರೂ ಸಿ ಟಿ ರವಿ, ಗೋವಿಂದ ಕಾರಜೋಳ, ಬೊಮ್ಮಾಯಿರಂತಹ ಶೂದ್ರ, ದಲಿತ ರಾಜಕಾರಣಿಗಳೇ.

ಶಿರಸಿಯಿಂದ ಹುಬ್ಬಳ್ಳಿಗೆ ನೂರು ಕಿಲೋಮೀಟರು ಮಾತ್ರ. ಆದರೂ ಅಲ್ಲಿಯ ಶಾಸಕ, ಬ್ರಾಹ್ಮಣ ಸಮುದಾಯದ ಮತ್ತೊಬ್ಬ ಪ್ರಭಾವಿ ರಾಜಕಾರಣಿ ವಿಶ್ವೇಶ್ವರ ಕಾಗೇರಿಯವರೂ ಈ ಕಾರ್ಯಕ್ರಮಗಳ ಬಳಿ ಸುಳಿಯಲಿಲ್ಲ.

ವಚನ ದರ್ಶನ ಪುಸ್ತಕ ಬಿಡುಗಡೆಗೆ ಬಂದ ಸಂಘ ಪರಿವಾರದ ಮಹನೀಯರೆಂದರೆ ಬಿ.ಎಲ್. ಸಂತೋಷ್, ಮುಕುಂದ ಅಂತಹವರು. ಇವರಿಗೆಲ್ಲ ಲಿಂಗಾಯತರ ವೋಟು ಅವಶ್ಯಕತೆಯಿಲ್ಲ, ಯಾವ ಮರ ಹತ್ತಿದರೂ ಬೀಳುವುದೂ ಇಲ್ಲ. .

ಲಿಂಗಾಯತರ ವೋಟು ಬೇಕಾಗಿರುವ ಬ್ರಾಹ್ಮಣ ರಾಜಕಾರಣಿಗಳು ತಮಗೂ ವಚನ ದರ್ಶನ ವಿವಾದಕ್ಕೂ ಏನೂ ಸಂಬಂಧವೇ ಇಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಹೊರಗೆ ಬಾರದೆ ಒಳಗೊಳಗೇ ತಂತ್ರ ಹೆಣೆಯುವ ಮತ್ತೊಂದು ಉತ್ತಮ ನಿದರ್ಶನ ಇದು.

ಇದನ್ನು ಅರ್ಥ ಮಾಡಿಕೊಳ್ಳಬೇಕು: ಈ ಕೆಟ್ಟ ಪುಸ್ತಕವನ್ನು ಜನರಿಗೆ ಓದಿಸಲೇಬೇಕೆಂದು ಹಠ ಹಿಡಿದು ಓಡಾಡುತ್ತಿರುವ ಸಂಘ ಪರಿವಾರದವರಿಗೆ ಇದರಿಂದ ಲಿಂಗಾಯತರು ಸಿಟ್ಟಾಗುತ್ತಾರೆ ಎಂದು ಮೊದಲೇ ಗೊತ್ತಿದ್ದ ಹಾಗೆ ಕಾಣುತ್ತದೆ. ಅದಕ್ಕೆ ಸಕ್ರಿಯವಾಗಿರುವ ತಮ್ಮ ರಾಜಕಾರಣಿಗಳನ್ನು ಆ ಸಿಟ್ಟು ಸುಡದಂತೆ ಎಚ್ಚರವಹಿಸಿದ್ದಾರೆ.

ಅದೇ ಕಾಳಜಿಯನ್ನು ನಿಯತ್ತಿಗೆ ಇನ್ನೊಂದು ಹೆಸರಾಗಿರುವ ಬೊಮ್ಮಾಯಿ ಅಂತಹವರ ಮೇಲೆ ತೋರಿಸುತಿಲ್ಲ.

ಸತತವಾಗಿ ಧಾರವಾಡದಲ್ಲಿ ಗೆಲ್ಲುತ್ತಿರುವ ಜೋಶಿಯವರ ಮತಗಳು ಕ್ಷೀಣಿಸುತ್ತಿವೆ. 2019ರಲ್ಲಿ 2 ಲಕ್ಷದಿಂದ ಗೆದ್ದಿದ್ದ ಅವರ ವಿಜಯದ ಅಂತರ 2024ರಲ್ಲಿ 97,000ಕ್ಕೆ ಕುಸಿಯಿತು. ವಚನ ದರ್ಶನ ಸಾಹಸಕ್ಕೆ ಜೋಶಿಯವರೂ ಕೈ ಹಾಕಿದರೆ ಇನ್ನೂ ಏಟು ಬೀಳಬಹುದು ಅನ್ನೋ ಹೆದರಿಕೆ ಇರಬೇಕು.

ವಚನ ದರ್ಶನದಿಂದ ಲಿಂಗಾಯತರಿಗೆ ಸಿಟ್ಟು ಬಂದರೂ ಪರವಾಗಿಲ್ಲ ಆದರೆ ಅವರ ವೋಟುಗಳು ಕಡಿಮೆಯಾಗಬಾರದು. ಇದು ಸಂಘ ಪರಿವಾರದ ಲೆಕ್ಕಾಚಾರ. ಇದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರೇ ಲಿಂಗಾಯತರು? ಈ ಪ್ರಶ್ನೆಗೆ ಉತ್ತರ ಕಷ್ಟ.

ಬಸವ ಮೀಡಿಯಾದಲ್ಲಿ ನಾವು ಯಾವ ಜಾತಿಯನ್ನೂ ಹೆಸರಿಸಲು ಇಷ್ಟಪಡುವುದಿಲ್ಲ. ಆದರೆ ಕೆಲವು ಬಾರಿ ಸಂಘ ಪರಿವಾರದ ಮಂಗಾಟಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಜಾತಿ ಹಿನ್ನೆಲೆ ಕೆದಕುವುದು ಅನಿವಾರ್ಯವೆನಿಸುತ್ತದೆ.

Share This Article
Leave a comment

Leave a Reply

Your email address will not be published. Required fields are marked *