ಗೂಗಲ್ ಮೀಟ್: ಕಲ್ಬುರ್ಗಿ ಶ್ರೀ ಶರಣಬಸವೇಶ್ವರರು (ವಿಡಿಯೋ)

ಸುಧಾ ಪಾಟೀಲ್
ಸುಧಾ ಪಾಟೀಲ್

ಶರಣೆ ಪ್ರೇಮಾ ಅಣ್ಣಿಗೇರಿ ಅವರು ದಾಸೋಹವೇ ಪ್ರತಿರೂಪವಾದ ಮಹಾ ದಾಸೋಹಿ, ಲಿಂಗ ಪ್ರಸಾದಿ -ಜಂಗಮ ಪ್ರಸಾದಿಯಾಗಿದ್ದ ಶ್ರೀ ಶರಣಬಸವೇಶ್ವರರ ಬಗೆಗೆ ಹೇಳುತ್ತಾ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಶ್ರೀಗಳ ಮೂರು ಮಜಲಿನ ಜೀವನದ ಪರಿಚಯವನ್ನು ಮಾಡಿಕೊಡುತ್ತಾ, ಸಾಧನಾ ಹಂತ, ಮಹಾದಾಸೋಹ ಯಾತ್ರೆ, ಜಗತ್ ಕಲ್ಯಾಣದ ವಿವರಗಳನ್ನು ಕೊಡುತ್ತಾ ಹೋದರು. ಅವರ ಬಾಲ್ಯ ಮತ್ತು ವಿವಾಹವನ್ನು ಹೇಳುತ್ತ,
ಶ್ರೀಗಳು ಕೃಷಿಕರಾಗಿದ್ದು, ತಮ್ಮ ಹೊಲದಲ್ಲಿ ಕಾಯಕನಿಷ್ಠೆಯಿಂದ ದುಡಿದು ಅಕ್ಷಯಫಲವನ್ನೇ ಕೊಟ್ಟರು, ಅಲ್ಲಿ ಹಾಯ್ದು ಹೋಗುವ ಪ್ರತಿಯೊಬ್ಬರಿಗೂ ಕರೆಸಿ ಶೀತನಿ ತಿನ್ನಲು ಕೊಟ್ಟು, ಕುಡಿಯಲು ನೀರು ಕೊಟ್ಟು, ಕಾಳು -ಕಡಿ ಹಂಚುತ್ತಿದ್ದುದು, ಪ್ರಾಣಿ-ಪಕ್ಷಿಗಳಿಗೂ ಅನುಕೂಲವಾಗಲಿ ಎಂದು ಹೊಲದ ನಾಲ್ಕು ದಿಕ್ಕಿಗೆ ಹೊಂಡ ಮಾಡಿಸಿ ನೀರು ಶೇಖರಣೆ ಮಾಡಿದ ಮಹಾನ್ ಕರುಣಾಸಾಗರರು ಎನ್ನುವುದನ್ನು ಸ್ಮರಿಸಿದರು.

ನಂತರ ಅವರ ಊರಿನಿಂದ ಕಲ್ಬುರ್ಗಿಯವರೆಗಿನ ಅವರ ಪಯಣದಲ್ಲಿ, ಪ್ರತಿ ಊರಿನಲ್ಲೂ ದಾಸೋಹದ ವ್ಯವಸ್ಥೆಯನ್ನು ಮಾಡುತ್ತ, ಔರಾದಿಯಲ್ಲಿ ಎರಡು ವರ್ಷ ಉಳಿದದ್ದು, ಆ ನಡುವೆ ಬಂದ ಬರಗಾಲದಲ್ಲಿ ಎಲ್ಲ ಕಡೆಯಿಂದ ಹರಿದುಬಂದ ಧನಸಹಾಯ, ಆಹಾರ ಧಾನ್ಯಗಳ ಸಂಗ್ರಹಣೆಯಿಂದ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಿ, ಶ್ರೇಷ್ಠರೆನಿಸಿದರು ಎನ್ನುವುದನ್ನು ತಿಳಿಸಿದರು.

ಅವರು ಜನರನ್ನು ತಿದ್ದುವ ವಿಶಿಷ್ಟತೆಯನ್ನು ಹೇಳುತ್ತಾ, ಒಬ್ಬರಿಗೆ ಕಿವಿನೋವು ಆದಾಗ, ಚಾಡಿ ಹೇಳುವುದು ಬಿಡು ಮತ್ತು
ಚಾಡಿ ಕೇಳುವುದು ಬಿಡು ಎನ್ನುವ ಉಪದೇಶ ಮತ್ತು ಕಳ್ಳರಿಗೆ ಸೋಮಾರಿಗಳಾಗಿ ಇಂಥ ಕೆಲಸ ಮಾಡಬೇಡಿ, ಕಾಯಕ ಮಾಡಿದರೆ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ ಎನ್ನುವ ಬುದ್ಧಿಮಾತಿನಿಂದ ಜನರು ತಕ್ಷಣವೇ ಪರಿವರ್ತನೆಯಾಗುತ್ತಿದ್ದರು ಎನ್ನುವುದನ್ನು ಹಂಚಿಕೊಂಡರು. ಅವರು ಏನು ಮನಸ್ಸಲ್ಲಿ ಅಂದುಕೊಳ್ಳುತ್ತಿದ್ದರೋ, ಏನು ನುಡಿಯುತ್ತಿದ್ದರೋ ಅದೇ ಆಗುತ್ತಿತ್ತು.

ಕಲ್ಬುರ್ಗಿಗೆ ಬಂದು ಎಂಟನೆಯ ಪೀಠಾದಿಪತಿಯಾದ ಶರಣಬಸವೇಶ್ವರರು ಆದಿ -ಅನಂತ-ಅಂತ್ಯ ಎಲ್ಲವೂ ಸೇರಿ ಮಹಾದಾಸೋಹಿಯಾದರು. ಕಲ್ಬುರ್ಗಿಯ ಜನರಿಗೆ ಇದು ಅಪ್ಪನ ಗುಡಿ ಎಂದೇ ಪ್ರಸಿದ್ಧಿ ಪಡೆದಿದೆ. ಅವರೇ ಆರಾಧ್ಯ ದೈವ, ಶ್ರದ್ಧಾ ಭಕ್ತಿಯ ಕೇಂದ್ರ ಎಲ್ಲವೂ ಆಗಿದ್ದಾರೆ.ಎಂದು ಹೇಳುತ್ತಾ ಶರಣಬಸವೇಶ್ವರರ ಬಗೆಗೆ ಹನ್ನೊಂದು ಪುರಾಣಗಳು, ಹದಿನೈದು ಜೀವನ ಚರಿತ್ರೆಗಳು, ಒಂಬತ್ತು ನಾಮಾವಳಿಗಳು, ನಾಲ್ಕು ಸುಪ್ರಭಾತಗಳು, ನಾಲ್ಕು ನಾಟಕಗಳು ಪ್ರಕಟಣೆಗೊಂಡಿವೆ, ಅವರ ವಿಷಯದ ಮೇಲೆ ಆರು ಜನರು ಪಿಎಚ್ಡಿ ಪದವಿ ಪಡೆದಿದ್ದಾರೆ, ಎನ್ನುವುದನ್ನು ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.

ಪ್ರೊ.ಶಕುಂತಲಾ ಸಿಂಧೂರ ಅವರು ಜಾನಪದ ಕವಿಗಳ ದೃಷ್ಟಿಯಲ್ಲಿ ಅಜಗಣ್ಣ -ಮುಕ್ತಾಯಕ್ಕ ವಿಷಯವಾಗಿ ಮಾತಾಡುತ್ತಾ, ಅಣ್ಣ -ತಂಗಿಯ ಅವಿನಾಭಾವ ಸಂಬಂಧ ಹೇಗಿತ್ತು ಎನ್ನುವ ಜಾನಪದದ ಮೂವತ್ತು ತ್ರಿಪದಿಗಳು ತಮಗೆ ಸಿಕ್ಕಿವೆ ಎಂದು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

ಇಬ್ಬರಲ್ಲೂ ಕರ್ತವ್ಯ ನಿಷ್ಠೆ, ಆಧ್ಯಾತ್ಮಿಕ ನಿಲುವು,ಧ್ಯಾನಸ್ಥ ಸ್ಥಿತಿ ತುಂಬಿ ತುಳುಕುತ್ತಿತ್ತು, ಎನ್ನುವುದನ್ನು ಹೇಳುತ್ತಾ, ಬಸವಣ್ಣನವರ ಮನೆ ನೋಡಲು ಹೋದಾಗಿನ ಪ್ರಸಂಗ,ಮುಕ್ತಾಯಕ್ಕನ ಕಾಯಕದ ಬಗೆಗೆ, ಮುಕ್ತಾಯಕ್ಕ ಗಂಡನ ಮನೆಗೆ ಹೋಗುವಾಗ ಹೇಳಿದ ಬುದ್ಧಿಮಾತು, ತವರಿಗೆ ಬಂದಾಗ ತಿಳಿಹೇಳಿ ಮತ್ತೆ ವಾಪಸ್ ಕಳಿಸುವುದು.. ಹೀಗೆ ಎಲ್ಲವನ್ನೂ ಎಷ್ಟು ಅದ್ಭುತವಾಗಿ ಜನಪದರು ಕಟ್ಟಿಕೊಟ್ಟಿದ್ದಾರೆ ಎನ್ನುವುದನ್ನು ಸೊಗಸಾದ ತ್ರಿಪದಿಗಳನ್ನು ಹಾಡುವುದರ ಮೂಲಕ ಕಟ್ಟಿಕೊಟ್ಟರು.ಕಡೆಯಲ್ಲಿ ಅಜಗಣ್ಣನವರು ಲಿಂಗೈಕ್ಯರಾದಾಗ ಮುಕ್ತಾಯಕ್ಕ ಮತ್ತು ಅಲ್ಲಮಪ್ರಭುದೇವರ ನಡುವೆ ನಡೆದ ಸಂವಾದವನ್ನು ಜಾನಪದದಲ್ಲಿ ಎಷ್ಟು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದನ್ನು ಸ್ಮರಿಸುತ್ತಾ ತಮ್ಮ ಉಪನ್ಯಾಸ ಮುಗಿಸಿದರು.

ಡಾ. ಎಂ. ಎಂ. ಪಡಶೆಟ್ಟಿ ಅವರು ದಾಸೋಹದ ವ್ಯಾಖ್ಯಾನವನ್ನು ತಿಳಿಸುತ್ತಾ, ಜನಮಾನಸದಲ್ಲಿ ಆರಾಧನಾಮೂರ್ತಿಯಾದ ಶರಣಬಸವೇಶ್ವರರು ವಾಣಿ -ನೋಟ -ಸ್ಪರ್ಶ ಎಲ್ಲವೂ ದಾಸೋಹಮಯವಾಗಿದ್ದರು, ಅವರ ಭಕ್ತಿ -ಧ್ಯಾನ ಆಚರಣೆ, ಅವರ ಮನೆ -ಬಾಲ್ಯ-ಬೆಳವಣಿಗೆ -ಬದಲಾವಣೆಯನ್ನು ಹೇಳುತ್ತಾ, ಮದುವೆ ಮನೆಯಲ್ಲಿ, ಜೋಗುಳ ಪದದಲ್ಲಿ, ಹಂತಿ ಹೊಡೆಯುವಾಗ, ಡೊಳ್ಳು ಬಾರಿಸುವಾಗ, ಭಜನೆ ಮಾಡುವಾಗ, ಬೀಸುವಾಗ, ಕುಟ್ಟುವಾಗ, ಮೊಹರಂ ಕುಣಿತದಲ್ಲಿ, ಕರ್ಬಲ್ ನಲ್ಲಿ ಸಹ ಹೇಗೆ ಶರಣಬಸವೇಶ್ವರರ ಹಾಡುಗಳು ಹಾಸುಹೊಕ್ಕಾಗಿವೆ ಎನ್ನುವುದನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ವ್ಯಕ್ತಪಡಿಸಿದರು.ಮಧ್ಯ ಮಧ್ಯ ತ್ರಿಪದಿಗಳನ್ನು ಉಲ್ಲೇಖಿಸುತ್ತಾ
ಅಜಗಣ್ಣ, ಮುಕ್ತಾಯಕ್ಕ ಅವರ ಬಗೆಗೆ ಹೇಳುತ್ತಾ, ಅಜಗ ಎಂದರೆ ಶಿವನ ಧನಸ್ಸು, ಅದನ್ನು ಯಾರು ಹೊಂದಿರುವನೋ, ಅವರೇ ಅಜಗಣ್ಣ ಎನ್ನುವ ಅರ್ಥ ತಿಳಿಸಿಕೊಡುತ್ತ, ಡಾ. ಬಿ. ಎಸ್. ಗದ್ದಗಿಮಠ ಅವರು ಜಾನಪದ ಲೋಕಕ್ಕೆ 400ಕ್ಕಿಂತ ಹೆಚ್ಚು ತ್ರಿಪದಿಗಳು,ಲೋಕಗೀತೆಗಳು, ಮುಕ್ತಕಗಳು,ನಾಡಗೀತೆಗಳು, ಕಂಬಿಪದ, ಹೀಗೆ ಎಲ್ಲ ಪ್ರಕಾರದ ಹಾಡುಗಳನ್ನು ಸಂಗ್ರಹಣೆ ಮಾಡಿ ಜಾನಪದ ಲೋಕದಲ್ಲಿ ” ಮಹಾಮತ್ಸ್ಯ ” ಎಂದು ಪ್ರಸಿದ್ದರಾಗಿದ್ದರು ಎನ್ನುವುದನ್ನು ನೆನೆಸಿಕೊಂಡರು.ಡಾ. ಶಶಿಕಾಂತ ಪಟ್ಟಣ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು

ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ,ಶರಣೆ ಅನ್ನಪೂರ್ಣ ಅಗಡಿ ಅವರ ಸ್ವಾಗತ, ಪ್ರೊ.ಶಕುಂತಲಾ ಸಿಂಧೂರ ಅವರ ಶರಣು ಸಮರ್ಪಣೆ, ಶರಣೆ ಗೀತಾ ಬಣಕಾರ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶರಣೆ ಜಯಶ್ರೀ ಆಲೂರ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

(ವಚನ ಅಧ್ಯಯನ ವೇದಿಕೆ,ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ 18 ನೆಯ ದಿವಸದ ವರದಿ. ಆಗಸ್ಟ್ 21)

Share This Article
Leave a comment

Leave a Reply

Your email address will not be published. Required fields are marked *