ಕೊಪ್ಪಳ
ಇತ್ತೀಚಿಗೆ ರಾಣೇಬೆನ್ನೂರಿನಲ್ಲಿ ನಡೆದ ವಚನ ದರ್ಶನ ಪುಸ್ತಕದ ಬಿಡುಗಡೆಯ ಪೋಸ್ಟರೇ ವಿಚಿತ್ರವಾಗಿದೆ,
ಅದರಲ್ಲೂ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿ ಸಿ.ಟಿ. ರವಿ ಇದ್ದಿದ್ದು ಬಸವ ಭಕ್ತರ ಮನಸ್ಸು ಕಸಿವಿಸಿಗೊಳಿಸಿದೆ.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ವಿರೋಧಿಸಿದ, ಹೋರಾಟಗಾರರನ್ನ ವ್ಯಂಗ್ಯವಾಗಿ ಮಾತನಾಡಿದ, ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನ ಧರ್ಮ ಒಡೆದ ಎಂದು ಬೊಬ್ಬೆ ಹಾಕಿ ಕೂಗಾಡಿದ ಬಿಜೆಪಿಯ ಸಿ.ಟಿ ರವಿಯೊಂದಿಗೆ ನಮ್ಮ ಪಂಚಮಸಾಲಿ ಜನಾಂಗದ ಪೀಠಾಧಿಕಾರಿ ವಚನಾನಂದ ಶ್ರೀ ವೇದಿಕೆ ಹಂಚಿಕೊಂಡಿದ್ದು ಬಸವ ಭಕ್ತರಿಗೆ ನುಂಗಲಾರದ ತುತ್ತಾಗಿದೆ.
ಅಲ್ಲಿನ ವಚನಾನಂದ ಶ್ರೀಗಳ ಮಾತಂತೂ ಲಿಂಗಾಯತ ಧರ್ಮದ ವಿರುದ್ಧವಾಗಿದೆ.
ಏನೋ ಹುನ್ನಾರಾಗುತ್ತಿದೆ ವಚನ ಸಾಹಿತ್ಯದ ಮೇಲೆ, ಬಸವಾದಿ ಶರಣರ ಮೇಲೆ ಎಂಬ ಅನುಮಾನ ಮೂಡಿ, ಹೃದಯ ಹಿಂಡುತಿದೆ ಮನಸ್ಸು ಕಳವಳಿಸುತ್ತಿದೆ.
ಈ ಪುಸ್ತಕವು ರಾಜ್ಯಾದ್ಯಂತ ಸಂಘ ಪರಿವಾರದ ಸಿದ್ದಾಂತಗಳಿಗೆ ಪ್ರಭಾವಿತವಾದ ಲಿಂಗಾಯತ ಮಠಗಳು, ಲಿಂಗಾಯತ ಸಂಘ ಸಂಸ್ಥೆಗಳಲ್ಲಿ ಬಿಡುಗಡೆಗೊಳ್ಳುತ್ತಿವೆ.
ವಚನ ಸಾಹಿತ್ಯದ ಪರಿಮಳದ ವಾಸನೆಯನ್ನು ಎಂದೂ ಮೂಸದ ಆರ್.ಎಸ್.ಎಸ್. ನಾಯಕ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ. ಎಲ್.ಸಂತೋಷ ಕಲ್ಬುರ್ಗಿ ನಗರದಲ್ಲಿ ಆಗಸ್ಟ್ ೩ರಂದು ಆಶಯ ಭಾಷಣ ಮಾಡಲಿದ್ದಾರೆ. ಇವರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ವಿರೋಧಿ, ಲಿಂಗಾಯತ ಧರ್ಮದ ಅಷ್ಟಾವರಣಗಳನ್ನ ಒಂದೂ ಮೈಗೂಡಿಸಿಕೊಳ್ಳದ ವ್ಯಕ್ತಿ.
ಏನೋ ಒಳಗೊಳಗೆ ನಡೆಯುತ್ತಿದೆ, ಗುರು ಬಸವಣ್ಣನವರ ವಿಚಾರ ತಿಳಿದ ಲಿಂಗಾಯತರೆ ಎಚ್ಚೆತ್ತುಕೊಳ್ಳಬೇಕಾಗಿದೆ, ಇದರ ರಹಸ್ಯ ಭೇದಿಸಬೇಕಾಗಿದೆ.
ಬಸವಾದಿ ಶಿವಶರಣರ ವಚನ ಸಾಹಿತ್ಯ ತಿಳಿಯದ ನಮ್ಮ ಮಂದಮತಿ ಲಿಂಗಾಯತರಿಗೆ ಇದು ಅರ್ಥವಾಗುವುದಿಲ್ಲ , ಅವರನ್ನೇ ಬೆಂಬಲಿಸಬಹುದು. ನಾವೆಲ್ಲ ಎಚ್ಚೆತ್ತುಕೊಂಡು ಆಗುವ ಅವಘಡವನ್ನ ತಪ್ಪಿಸಬೇಕು.