ಮಂಡ್ಯ
ಬಸವಾದಿ ಶರಣರ ವಚನಗಳಿಗೆ ಅಪಮಾನ ಮಾಡಿರುವ ವಚನ ದರ್ಶನ ಪುಸ್ತಕದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಬಸವ ಪರ ಸಂಘಟನೆಗಳು ಕರೆ ಕೊಟ್ಟಿವೆ.
ಆಗಸ್ಟ್ 20ರಂದು ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿಯ ಮುಂದೆ ಬೆಳಿಗ್ಗೆ ೧೦ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯದಲ್ಲಿ ಶುಕ್ರವಾರ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿವಿಧ ಬಸವ ಪರ ಸಂಘಟನೆಗಳ ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ನಾಡಿನ ಮಠಾಧೀಶರು, ಬಸವಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಮ ಸಮಾಜವನ್ನು ಕಟ್ಟಿದ ಬಸವಣ್ಣನವರ ವಚನಗಳನ್ನು ಶಾಸ್ತ್ರವೆಂದು ವಚನದರ್ಶನ ಪುಸ್ತಕ ತಿರುಚಿದೆ ಎಂದು ಹೇಳಿದರು. “ವಚನದರ್ಶನ ಎಂಬ ಕಳಪೆ ಪುಸ್ತಕವೊಂದನ್ನು ಪ್ರಕಟಿಸಿ ಕೆಲವೆಡೆ ಬಿಡುಗಡೆ ಮಾಡುವ ಮೂಲಕ ಬಸವಾದಿ ಶರಣರ ಅಭಿಮಾನಿಗಳಿಗೆ ಅತೀವ ನೋವನ್ನು ಉಂಟು ಮಾಡುತ್ತಿದ್ದಾರೆ. ಮುಖಪುಟದಲ್ಲಿ ವಿಶ್ವಗುರು ಬಸವಣ್ಣನವರ ಚಿತ್ರವನ್ನು ಕಳಪೆ ಮನಸ್ಥಿತಿಯಲ್ಲಿ ಮುದ್ರಿಸಿದ್ದಾರೆ, ಎಂದು ಆಪಾದಿಸಿದರು.
ಪುಸ್ತಕ ಬಿಡುಗಡೆ ಮಾಡಿ, ಲಿಂಗಾಯತರು ಹಿಂದೂಗಳೆಂದು ಹೇಳಿಕೆ ನೀಡುವ ಮೂಲಕ ಬಸವತತ್ವಕ್ಕೆ ಅಪಮಾನ ಮಾಡಿರುವ ಪೂಜ್ಯ ವಚನಾನಂದ ಸ್ವಾಮೀಜಿಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಮಾನತೆಯನ್ನು ಎಂದಿಗೂ ಸಹಿಸದವರು ಜಾತಿ, ಧರ್ಮದ ಹೆಸರಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದಿದ್ದಾರೆ. ಇದರ ವಿರುದ್ಧ ಜಾಗೃತರಾದ ಕನ್ನಡನಾಡಿನ ಜನತೆ ಲೋಕಸಭೆ ಚುನಾವಣೆಯಲ್ಲಿ ನೀಡಿದ ಫಲಿತಾಂಶದಿಂದ ಕೆಂಗೆಟ್ಟು ಈ ಶಕ್ತಿಗಳು `ವಚನದರ್ಶನ’ ಮೂಲಕ ಲಿಂಗಾಯತರ ಓಟ್ ಬ್ಯಾಂಕ್‌ನತ್ತ ಚಿತ್ತ ಹರಿಸಿವೆ, ಎಂದು ಹೇಳಿದರು.
ವಚನ ದರ್ಶನ ಪುಸ್ತಕದ ಮುಖಪುಟದ ಚಿತ್ರದಲ್ಲಿ ಕೊರಳಲ್ಲಿ ರುದ್ರಾಕ್ಷಿಯ ಮಾಲೆಯ ಬದಲಾಗಿ ತುಳಸಿ ಮಾಲೆಯನ್ನು ಹಾಕಿದ್ದಾರೆ, ಎದೆಯ ಮೇಲಿನ ಇಷ್ಟಲಿಂಗವನ್ನು ಬೆಂಕಿಯಲ್ಲಿ ತೋರಿಸಿದ್ದಾರೆ, ತಲೆಯ ಮೇಲೆ ತುರುಬನ್ನು ಕಟ್ಟಿದ್ದಾರೆ, ಕಾವಿ ಬಟ್ಟೆಯನ್ನು ಹಾಕಿದ್ದಾರೆ, ಬಿಲ್ಲು ಬಾಣವನ್ನು ತೋರಿಸಿದ್ದಾರೆ. ಇವೆಲ್ಲವೂ ಕೂಡ ಮನುವಾದದ ಮನಸ್ಥಿತಿಯೇ ಆಗಿರುವುದಲ್ಲಿ ಅನುಮಾನವಿಲ್ಲ.
ಕನ್ನಡದ ಮೊದಲ ಧರ್ಮ ಅಪ್ಪಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಅಪಮಾನ ಮಾಡುವ ಇವರ ಕೆಟ್ಟ ಹುನ್ನಾರದ ವಿರದ್ಧ ನಾಡಿನ ಮಠಾಧಿಪತಿಗಳು, ಪ್ರಗತಿಪರ ಚಿಂತಕರು, ಬಸವಾಭಿಮಾನಿಗಳು ಹೋರಾಟ ನಡೆಸಬೇಕೆಂದು ಕೋರುತ್ತೇವೆ, ಎಂದು ಹೇಳಿದರು.
ಪತ್ರಿಕಾ ಘೋಷ್ಠಿಯಲ್ಲಿ ಶರಣ ಶ್ರೀ ಓಂಕಾರ ಚೊಂಡಿ, ಅಧ್ಯಕ್ಷರು, ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ, ಶರಣ ಶ್ರೀ ಶ್ರೀನಿವಾಸ್ ಭದ್ರಣ್ಣವರ, ರಾಜ್ಯಾಧ್ಯಕ್ಷರು, ಕೆಚ್ಚೆದೆಯ ಕನ್ನಡಿಗರ ವೇದಿಕೆ, ಶರಣ ಶ್ರೀ ಪ್ರಕಾಶ್ ಹೆಬ್ಬಳ್ಳಿ, ಸಾಫ್ಟ್‌ವೇರ್ ಇಂಜಿನಿಯರ್, ಶರಣ ಶ್ರೀ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ, ಅಧ್ಯಕ್ಷರು, ಲಿಂಗಾಯತ ಮಹಾಸಭಾ ಟ್ರಸ್ಟ್ ಭಾಗವಹಿಸಿದ್ದರು.