ವಚನ ದರ್ಶನದ ಹಿಂದಿರುವ ಸಂಘ ಪರಿವಾರದ ಸಾಂಸ್ಕೃತಿಕ ರಾಜಕಾರಣ

ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಮತ್ತೊಂದು ಹೊಸ ಧರ್ಮದ ಉದಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂಬ ಪ್ರಯತ್ನದ ಭಾಗವೇ ಈ ಪುಸ್ತಕದ ಪ್ರಕಟಣೆ

ಬೆಂಗಳೂರು

ಸಂಘ ಪರಿವಾರದ ಸಹವರ್ತಿಗಳಾದ ಪ್ರಜ್ಞಾ ಪ್ರವಾಹ, ಅಯೋಧ್ಯಾ ಪ್ರಕಟಣಾ ಸಂಸ್ಥೆ, ರಾಷ್ಟ್ರೋತ್ಥಾನ ಮುದ್ರಣಾಲಯ ಇವರುಗಳು ಸಂಪಾದಿಸಿ, ಪ್ರಕಟಿಸಿರುವ “ವಚನ ದರ್ಶನ” ಎಂಬ ಪುಸ್ತಕವನ್ನು ಕರ್ನಾಟಕದಾದ್ಯಂತ ಆಯ್ದ ಲಿಂಗಾಯತ ಮಠಾಧೀಶರುಗಳಿಂದ ಸರಣಿಯೋಪಾದಿಯಲ್ಲಿ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಿಸಲಾಗುತ್ತಿದೆ.

ಸಂಪಾದಕರ ಅರ್ಹತೆಯೇನು?

ಈ ಪುಸ್ತಕಕ್ಕೆ ಗದುಗಿನ ಶಿವಾನಂದ ಬೃಹನ್ಮಠದ ಮಠಾಧೀಶರಾದ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಗೌರವ ಸಂಪಾದಕರಾಗಿದ್ದು, ವೃತ್ತಿಯಿಂದ ಸಾಪ್ಟವೇರ್ ಇಂಜಿನಿಯರ್ ಮತ್ತು ಗಣಕ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿರುವ ಅನುಭವಿ ಶ್ರೀ ಜನಮೇಜಯ ಉಮರ್ಜಿ; ನಿರ್ವಹಣಾ ಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡಿದ್ದು, ಕೃಷಿ ವ್ಯವಹಾರ ವಿಷಯ ಪ್ರಾಧ್ಯಾಪರಾಗಿ ಕೆಲಸ ಮಾಡುತ್ತಿದ್ದು, ತಮ್ಮ ಕ್ಷೇತ್ರದಲ್ಲಿ ಹಲವಾರು ಸಂಶೋಧನಾ ಪ್ರಕಟಣೆಗಳನ್ನು ಪ್ರಕಟಿಸಿರುವ ಡಾ. ನಿರಂಜನ ಪೂಜಾರ; ಸಾರ್ವಜನಿಕ ಆಡಳಿತ ಪ್ರಾಧ್ಯಾಪಕರೂ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆದು ತಮ್ಮ ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಸಂಶೋಧನಾ ಪ್ರಕಟಣೆಗಳು ಮತ್ತು ಪುಸ್ತಕಗಳನ್ನು ಬರೆದಿರುವ ಡಾ. ಸಂತೋಷ್ ಕುಮಾರ್; ಹಾಗೂ ಕನ್ನಡ ವಿಷಯ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಮಾಡಿರುವ ಹಾಗೂ ಹಲವು ಕ್ಕೃತಿಗಳನ್ನು ರಚಿಸಿರುವ, ಜೊತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತಮ್ಮ ಡಾಕ್ಟರೇಟ್ ಪದವಿಗಾಗಿ ಕೆಲಸ ಮಾಡುತ್ತಿರುವ ಶ್ರೀ ಚಂದ್ರಪ್ಪ ಬಾರಂಗಿ ಎನ್ನುವವರುಗಳು ಸಂಪಾದಕರುಗಳಾಗಿದ್ದಾರೆ.

ಗೌರವ ಸಂಪಾದಕರನ್ನೊಬ್ಬರನ್ನು ಹೊರತುಪಡಿಸಿ ಸಂಪಾದಕರಾರಿಗೂ ವಚನ ಸಾಹಿತ್ಯ, ವೇದ, ಉಪನಿಷತ್ತುಗಳ ಹಿನ್ನೆಲೆ ಇದ್ದಂತೆ ತೋರುವುದಿಲ್ಲ.

ಪುಸ್ತಕದ ಪರಿಕಲ್ಪನೆ, ಪುಸ್ತಕದ ವಿಷಯ, ವಿಷಯ ಮಂಡನೆಯ ಶೈಲಿ, ವಿಷಯಗಳ ತಾರ್ಕಿಕ ಪ್ರಸ್ತುತಿ ಮತ್ತು ನಿಖರತೆ, ಹಾಗೂ ಪುಸ್ತಕದ ಒಟ್ಟಾರೆ ರಚನೆಯನ್ನು ಮಾಡುವ ಪ್ರಮುಖ ಕೆಲಸ ಸಂಪಾದಕರದ್ದಾಗಿರುತ್ತದೆ. ಜೊತೆಗೆ, ಲೇಖಕರ ಜೊತೆ ಸಮಾಲೋಚನೆ ಮೂಲಕ ಪರಿಷ್ಕರಣೆ ಮಾಡುವ ಜವಾಬ್ದಾರಿಯೂ ಅವರದ್ದಾಗಿರುತ್ತದೆ. ಈ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಸಂಪಾದನೆ ಮಾಡಬೇಕಿರುವ ವಿಷಯದಲ್ಲಿ ಆಳವಾದ ಅಧ್ಯಯನ ಮತ್ತು ತಜ್ಞತೆಯೂ ಬೇಕಿರುತ್ತದೆ. ಆದರೆ, ಮೇಲೆ ಪಟ್ಟಿ ಮಾಡಿರುವ ಸಂಪಾದಕರುಗಳ ಹಿನ್ನೆಲೆ ನೋಡಿದರೆ ಅವರುಗಳಿಗೆ ಮೇಲೆ ಚರ್ಚಿಸಿರುವ ಸಂಪಾದಕರುಗಳಿಗೆ ಇರಬೇಕಾದ ಯಾವುದೇ ಅರ್ಹತೆಗಳು ಕಂಡು ಬರುವುದಿಲ್ಲ.

ಇನ್ನು ಈ ಪುಸ್ತಕಕ್ಕೆ ಶರಣ ಪರಂಪರೆಯ ಮಠದ ಸ್ವಾಮೀಜಿಯೊಬ್ಬರನ್ನೇ ಗೌರವ ಸಂಪಾದಕರನ್ನಾಗಿ ಮಾಡಿದ್ದಾರೆ. ಇವರ ಹಿನ್ನೆಲೆ ನೋಡಿದರೆ, ಇವರಿಗೆ, ಅಲ್ಪ ಸ್ವಲ್ಪ ವೇದ, ಉಪನಿಷತ್ತು ಹಾಗೂ ವಚನ ಸಾಹಿತ್ಯದ (ವಚನ ಚಳುವಳಿಯಲ್ಲ) ಪರಿಚಯವಿದ್ದಂತೆ ತೋರುತ್ತದೆ. ಆ ಹಿನ್ನೆಲೆಯಲ್ಲಿ ಇವರಿಗೆ ಸುಲಲಿತವಾಗಿ ವೇದ ಮತ್ತು ಉಪನಿಷತ್ತನ್ನು ವಚನಗಳೆಂದೂ, ವಚನಗಳನ್ನು ವೇದ ಮತ್ತು ಉಪನಿಷತ್ತೆಂದೂ ಹೇಳುವಷ್ಟು ಚಮತ್ಕಾರ ಸಿದ್ದಿಸಿದೆ.

ಹೊಸ ಪ್ರಯತ್ನವಲ್ಲ

ವಚನ ದರ್ಶನ ಪುಸ್ತಕದ ಮೊದಲ ಅಧ್ಯಾಯ “ಭಾರತೀಯ ಅಧ್ಯಾತ್ಮಿಕ ಪರಂಪರೆಯಲ್ಲಿ ಮಾನವ ಸಮುದಾಯದ ಸುಖ ಮತ್ತು ಸಾರ್ಥಕತೆ ವಚನ ದರ್ಶನಕ್ಕೊಂದು ಪೂರ್ವಪೀಠಿಕೆ” ಯು ಪ್ರಾರಂಭವಾಗುವುದೇ “ಮಾನವನ ಜೀವನದ ಒಳಿತಿನ ಹಾಗೂ ಸಾರ್ಥಕತೆಯ ಕುರಿತು ವಚನಗಳು ಏನನ್ನು ತಿಳಿಸುತ್ತವೆ ಎಂಬ ಚರ್ಚೆಯು ಇಂದು ದಿಕ್ಕು ತಪ್ಪಿದಂತೆ ತೋರುತ್ತದೆ” ಎಂಬ ವಾಕ್ಯದಿಂದ. ಹೀಗೆ ಹೇಳುವುದರ ಮೂಲಕ ಡಾ. ರಾಜರಾಂ ಹೆಗ್ಡೆಯವರು ಕಳೆದ ನೂರೈವತ್ತು ವರ್ಷಗಳಿಂದ ವಚನಗಳ ಮೇಲೆ ನಡೆಯುತ್ತಿರುವ ಅಧುನಿಕ ಅಧ್ಯಯನಗಳು ದಾರಿ ಮತ್ತು ದಿಕ್ಕು ತಪ್ಪಿದ್ದು ಅದನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಅವರು ಇಂತಹ ಜವಾಬ್ದಾರಿ ಹೊರಲು ಬಹುಶಃ ಪ್ರಮುಖ ಕಾರಣ ಇತ್ತೀಚಿನ ವರ್ಷಗಳಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕೆಂದು ಲಿಂಗಾಯತ ಸಮುದಾಯದ ದೊಡ್ಡ ದ್ವನಿಗಳು ಮತ್ತು ಹೋರಾಟಗಳು ಎಂಬುದು ಅವರ ಪ್ರಾರಂಭಿಕ ಮಾತುಗಳಲ್ಲೇ ಸುಸ್ಪಷ್ಟವಾಗುತ್ತದೆ.

ಅಂದಹಾಗೆ, ಇವರ ಈ ಪ್ರಯತ್ನ ಹೊಸದೇನೂ ಅಲ್ಲ. ಈ ಹಿಂದೆ, ಡಾ. ರಾಜಾರಾಂ ಹೆಗ್ಡೆಯವರು ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದಾಗ ಇವರನ್ನೂ ಒಳಗೊಂಡಂತೆ ಒಂದು ಗುಂಪು ಭಾರತೀಯ ಮೂಲದ ಬ್ರೆಜಿಲ್ ದೇಶದ ವಿಶ್ವವಿದ್ಯಾಲಯವೊಂದರ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಬಾಲಗಂಗಾಧರ್ ಎಂಬುವವರ ಸಹಯೋಗದಲ್ಲಿ ಶೈಕ್ಷಣಿಕ ಅಧ್ಯಯನಗಳಿಗಾಗಿ ಒಡಂಬಡಿಕೆ ಮಾಡಿಕೊಂಡು ಪ್ರಾರಂಭಿಸಿದ್ದ ಕೆಲಸದ ಮುಂದುವರಿದ ಭಾಗವೇ ಈ “ವಚನ ದರ್ಶನ” ಪುಸ್ತಕ.

ಆ ಸಂದರ್ಭದಲ್ಲಿ ಸುಮಾರು ಒಂದು ತಿಂಗಳ ಕಾಲ ಪ್ರಜಾವಾಣಿ ದಿನಪತ್ರಿಕಯಲ್ಲಿಯೂ ವಚನ ಚಳುವಳಿಯ ಹಿನ್ನೆಲೆ, ಆಶಯ ಮತ್ತು ಅದಕ್ಕೆ ಬಾಲಗಂಗಾಧರ್ ಗುಂಪಿನ ಪ್ರತಿಕ್ರಿಯೆಗಳನ್ನು ದೊಡ್ಡಮಟ್ಟದ ಚರ್ಚೆಗಾಗಿ ಪ್ರಕಟಿಸಲಾಗಿತ್ತು. ಆಗ ಹಿನ್ನೆಲೆಯಲ್ಲಿದ್ದ ಸಂಘಪರಿವಾರ, ಈಗ ಮುನ್ನೆಲೆಯಲ್ಲಿ ನಿಂತು ತನ್ನ ಇತರೆ ಸಹವರ್ತಿ ಸಂಸ್ಥೆಗಳು ಮತ್ತು ಹಿಂದುತ್ವ ರಾಜಕೀಯದಲ್ಲಿ ಸಹಾನುಭೂತಿ ಹೊಂದಿರುವ ಬುದ್ದಿಜೀವಿಗಳನ್ನು ಉಪಯೋಗಿಸಿಕೊಂಡು ನೇರವಾಗಿ ಕಾರ್ಯಾಚರಣೆಗೆ ಇಳಿದಿದೆ. ಇದರ ಭಾಗವಾಗಿಯೇ ಶರಣ/ಬಸವ ಚಳುವಳಿ ಅಂತ ಏನೂ ನಡೆಯಲಿಲ್ಲ, ಬದಲಾಗಿ ಭಕ್ತಿ ಚಳುವಳಿಯ ಭಾಗವಾಗಿ, ದೇವರ ಸಾಕ್ಷಾತ್ಕಾರಕ್ಕಾಗಿ, ಆತ್ಮೋದ್ಧಾರಕ್ಕಾಗಿ, ವೈಯುಕ್ತಿಕವಾಗಿ ಮುಕ್ತಿ ಮತ್ತು ಮೋಕ್ಷವನ್ನು ಪಡೆಯುವ ಮಾರ್ಗದಲ್ಲಿ ವೇದ, ಉಪನಿಷತ್ತು, ಪುರಾಣ, ಸ್ಮೃತಿ, ಶಾಸ್ತ್ರ ಇವೇ ಮುಂತಾದವುಗಳ ಹೇಳಿರುವುದರ ಸಾರವನ್ನು ಸಂಗ್ರಹಿಸಿ ಅವುಗಳ ಮುಂದುವರಿದ ಭಾಗವಾಗಿ ವಚನಗಳನ್ನು ರಚಿಸಿದರೇ ಹೊರತು ಬೇರಿನ್ನೇನೂ ಮಾಡಲಿಲ್ಲ, ಆದುದರಿಂದ, ನಾವು ನಂಬಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಂಡಿರುವ ಸುಮಾರ ಒಂಭೈನೂರು ವರ್ಷಗಳ ಹಿಂದೆ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾಜೋ-ಧಾರ್ಮಿಕ ಚಳುವಳಿಯನ್ನು ಅಲ್ಲಗಳೆದು ಅದು ಹಿಂದೂ ಧರ್ಮದ ಭಾಗವೆಂದು ಸಾಧಿಸಿ ರುಜುವಾತು ಮಾಡುವ ಪ್ರಯತ್ನದ ಭಾಗವಾಗಿ ಈ ಪುಸ್ತಕ ಬಂದಿದೆ.

ಸಾಂಸ್ಕೃತಿಕ ರಾಜಕಾರಣ

ಇದರ ಹಿಂದೆ ಇರುವ ಸಾಂಸ್ಕೃತಿಕ ರಾಜಕಾರಣವನ್ನು ಅರ್ಥಮಾಡಿಕೊಳ್ಳದಿದ್ದರೆ ಈ ಪುಸ್ತಕದಲ್ಲಿ ನಾವು ಪ್ರತಿಭಟಿಸಬೇಕಾದ ವಿಷಯಗಳೇನೂ ಕಾಣುವುದಿಲ್ಲ. ಹಾಗಾಗಿ ನಾವು ಯಾವುದೇ ಹಿಂಜರಿಕೆಯಿಲ್ಲದೆ “ಮಾನವನ ಜೀವನದ ಒಳಿತಿನ ಹಾಗೂ ಸಾರ್ಥಕತೆಯ ಕುರಿತು ವಚನಗಳು ಏನನ್ನು ತಿಳಿಸುತ್ತವೆ ಎಂಬ ಚರ್ಚೆಯು ಇಂದು ದಿಕ್ಕು ತಪ್ಪಿದೆ, ಅದನ್ನು ಸರಿ ದಾರಿ ಮತ್ತು ದಿಕ್ಕಿಗೆ ತರಬೇಕೆಂದರೆ ಅದನ್ನು ತಥಾಕಥಿತ ಹಿಂದೂ ಧರ್ಮದ ಭಾಗವಂದು ನಂಬುವುದರ ಮೂಲಕ ಮಾತ್ರ ಸಾಧ್ಯ ಎಂದು ಶರಣ ಪರಂಪರೆ/ ಬಸವ ಪರಂಪರೆ/ ಲಿಂಗಾಯತ ಪರಂಪರೆಯ ಸಮುದಾಯಕ್ಕೆ ನಂಬಿಸುವ” ದೊಡ್ಡ ಮಟ್ಟದ ಕೆಲಸವನ್ನು ಸಂಘಪರಿವಾರದ ಸಮೂಹಗಳು ಪ್ರಾರಂಬಿಸಿವೆ ಎಂದು ಹೇಳಬಹುದು.

ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮಗಳಂತೆ ಮತ್ತೊಂದು ಹೊಸ ಧರ್ಮದ ಉದಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂಬ ಪ್ರಯತ್ನದ ಭಾಗವಾಗಿ ಈ ಪುಸ್ತಕದ ಪ್ರಕಟಣೆ ಮತ್ತು ಸರದಿಯೋಪಾದಿಯಲ್ಲಿ ದೇಶದಾದ್ಯಂತ ಹಿಂದೂ-ವೀರಶೈವ ಪ್ರಭಾವಕ್ಕೆ ಒಳಗಾಗಿರುವ ಲಿಂಗಾಯತ ಮಠಾಧೀಶರುಗಳನ್ನೇ ಉಪಯೋಗಿಸಿಕೊಂಡು ಸಂಘಪರಿವಾರದ ಇತರೆ ಅಂಗಗಳ ಮೂಲಕ ಬಿಡುಗಡೆ ಮಾಡುವುದರ ಜೊತೆಗೆ, ಅದರ ಇನ್ನೊಂದು ಅಂಗ ಸಂಸ್ಥಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು (ABVP) ಮೂಲಕ ವಿದ್ಯಾರ್ಥಿಗಳಿಗೆ “ಇಷ್ಟಲಿಂಗ ದೀಕ್ಷೆ”, “ಶರಣಕ್ರಾಂತಿ” ಚಲನಚಿತ್ರದ ಬಿಡುಗಡೆಗೆ ಮತ್ತದೇ ತಂತ್ರವಾದ ಲಿಂಗಾಯತ ಮಠಾಧೀಶರುಗಳ ಉಪಯೋಗ, ಇತ್ತೀಚಿನ ಬೆಳವಣಿಗೆಯಾದ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ “ಕುಂಭ ಮೇಳಕ್ಕೆ” ಲಿಂಗಾಯತರಿಗೆ ವಿಶೇಷ ಆಹ್ವಾನ ಕೊಡುವ ಆರ್. ಎಸ್. ಎಸ್ ನ ನಿರ್ಧಾರ ಈ ಎಲ್ಲಾ ಪ್ರಯತ್ನಗಳೂ “ಹಿಂದೂ ನಾವೆಲ್ಲಾ ಒಂದು” ಎಂಬ ಘೋಷಣೆಯಡಿ ಬಹುತ್ವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸಾಂಸ್ಕೃತಿಕ ರಾಜಕಾರಣದ ಪ್ರಮುಖ ಭಾಗವೂ ಹೌದು ಹುನ್ನಾರವೂ ಹೌದು.

ಮುಂದಿನ ಸವಾಲು

ಸಂಘಪರಿವಾರವು ಸಾಂಘಿಕ ಮತ್ತು ಸೈದ್ಧಾಂತಿಕ ಸಾಂಸ್ಕೃತಿಕ ರಾಜಕಾರಣದ ಮೂಲಕ ರಾಷ್ಟ್ರೀಯತೆಯ ಹೆಸರಿನಲ್ಲಿ ಅಧಿಕಾರ ರಾಜಕಾರಣ ಮಾಡುತ್ತಿದೆ. ಪರಿವಾರದ ಈ ಸಾಂಸ್ಕೃತಿಕ ಮತ್ತು ಅಧಿಕಾರ ರಾಜಕಾರಣವನ್ನು ಐತಿಹಾಸಕ ಕಾರಣಗಳಿಗಾಗಿ ಹರಿದು ಹಂಚಿಹೋಗಿರುವ ಲಿಂಗಾಯತ ಸಮುದಾಯಗಳು ಅರ್ಥ ಮಾಡಿಕೊಳ್ಳುತ್ತವೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿ ಕಾಡುತ್ತದ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಹೇಗಿರಬೇಕು ಎಂಬುದು ಬಸವ ಪ್ರಣೀತ ಲಿಂಗಾಯತ ಸಮಾಜದ ಮುಂದಿರುವ ಸವಾಲಾಗಿದೆ.

ಈ ಕಾರಣಕ್ಕಾಗಿ ಇಂದು ತುರ್ತಾಗಿ ಆಗಬೇಕಾಗಿರುವ ಕೆಲಸವೆಂದರೆ ಐತಿಹಾಸಿಕವಾಗಿ ಸುಮಾರು ನೂರು ಉಪಪಂಗಡಗಳಾಗಿ ಹಂಚಿ ಹೋಗಿರುವ ಉಪಪಂಗಡಗಳನ್ನು ಒಂದುಗೂಡಿಸುವುದು ಆದ್ಯತೆಯ ಕೆಲಸವಾಗಬೇಕು. ಈ ಕಾರಣಕ್ಕಾಗಿ, ಎಲ್ಲಾ ಉಪಪಂಗಡ ಸಮಾಜಗಳ ಮುಖಂಡರುಗಳು, ಧಾರ್ಮಿಕ ಮುಖಂಡರಗಳು, ಮಠಗಳು, ಮಠಾಧೀಶರಗಳು, ಬಸವ ಪ್ರಣೀತ ಸಂಘ ಸಂಸ್ಥೆಗಳು, ಶೈಕ್ಷಣಿಕ ತಜ್ಞರುಗಳು, ಶರಣತತ್ವ ವಿದ್ವಾಂಸರುಗಳು, ವಿವಿಧ ರಾಜಕೀಯ ಪಕ್ಷಗಳಲ್ಲಿರುವ ರಾಜಕಾರಣಿಗಳು ಮೊದಲು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು. ಈ ಎಲ್ಲಾ ಗುಂಪುಗಳನ್ನು ಪ್ರತಿನಿಧಿಸುವ ತಜ್ಞರುಗಳ “ವಿಚಾರ ವೇದಿಕೆ (Think Tank) ಒಂದನ್ನು ರೂಪಿಸಿ ಅದು ರೂಪಿಸುವ ಕಾರ್ಯಕ್ರಮಗಳನ್ನು ಅನುಸ್ಠಾನಗೊಳಿಸುವ ಸಾಂಘಿಕ ಪ್ರಯತ್ನ ಆಗಬೇಕು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ಇದರ ಇತ್ತೀಚಿನ ಅಧಿವೇಶನದಲ್ಲಿ ತಗೆದುಕೊಂಡ ನಿರ್ಣಯದಂತೆ) ಸಂಸ್ಥೆಗಳು ಸಂಯುಕ್ತ ಕಾರ್ಯಕ್ರಮ ಮತ್ತು ಹೋರಾಟಗಳನ್ನು ರೂಪಿಸಬೇಕು. ಲಿಂಗಾಯತ ಧರ್ಮವು ಯಾವುದೇ ಧರ್ಮಗಳ ಮತ್ತು ಜಾತಿಗಳ ವಿರೋಧಿಯಲ್ಲ ಬದಲಾಗಿ ಬಸವತತ್ವಾಧಾರಿತ ಹೊಸ ಧರ್ಮ ಎಂಬುದನ್ನು ಸಂಘಪರಿವಾರವೂ ಸೇರಿದಂತೆ ಎಲ್ಲಾ ಹಿಂದೂ ಧರ್ಮದ ಭಾಗವೆಂದು ನಂಬಿರುವ ಎಲ್ಲಾ ಜಾತಿ ಸಮುದಾಯಗಳಿಗೆ ಮತ್ತು ಲಿಂಗಾಯತ ಉಪಪಂಗಡಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ಆಗಬೇಕಾಗಿದೆ. ಅಲ್ಲದೆ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವುದರಿಂದ ಹಿಂದೂ ಧರ್ಮೀಯರಿಗಾಗಲೀ ಅಥವಾ ಬೇರೆ ಧರ್ಮೀಯರಿಗಾಗಲೀ ತೊಂದರೆಯಾಗುವುದಿಲ್ಲ ಎಂಬುದನ್ನು ಆಳುವ ವರ್ಗಕ್ಕೂ ಮನವರಿಕೆ ಮಾಡಿಕೊಡಬೇಕಾಗಿದೆ. ಆದುದರಿಂದ, ಬಸವತತ್ವಾಧಾರಿತ ಲಿಂಗಾಯತ ಸಮುದಾಯಗಳು ಚದುರಿದಂತೆ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳನ್ನು ಮಾಡುವುದರ ಬದಲಾಗಿ ಸಾಂಘಿಕವಾಗಿ ಕಾರ್ಯಾಚರಿಸುವ ಅಗತ್ಯ ಇಂದಿನ ತುರ್ತಾಗಿದೆ. ಈ ವಿಷಯ ಯಾವುದೇ ಪಕ್ಷಪಾತವಿಲ್ಲದೆ ವ್ಯಾಪಕವಾಗಿ ಚರ್ಚೆಯಾಗಲಿ ಎಂಬುದು ನನ್ನ ಆಶಯ.

Share This Article
Leave a comment

Leave a Reply

Your email address will not be published. Required fields are marked *