ರಾಜ್ಯದ್ಯಂತ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿ ಒಂದೇ ಪುಸ್ತಕವನ್ನು ಪದೇ ಪದೇ ಬಿಡುಗಡೆ ಮಾಡುತ್ತಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ
ವಿಜಯಪುರ
ಆರೆಸ್ಸೆಸ್ ನೇತೃತ್ವದಲ್ಲಿ “ವಚನ ದರ್ಶನ” ಪುಸ್ತಕವನ್ನು ಬಸವ ಜನ್ಮ ಸ್ಥಳದಲ್ಲಿ ಬಿಡುಗಡೆ ಮಾಡಿರುವುದು ಬಸವಣ್ಣನವರಿಗೆ ಮಾಡಿದ ಅವಮಾನ ಎಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಹೇಳಿದರು.
ಈ ಬಸವಾದಿ ಶರಣರ ಆಶಯಗಳ ವಿರೋಧಿ ಪುಸ್ತಕವನ್ನು ಬಿಡುಗಡೆ ಮಾಡಿರುವ ಸ್ವಾಮಿಗಳು ಎಂದೂ ಬಸವಣ್ಣನವರ ಭಾವಚಿತ್ರವನ್ನು ತಮ್ಮ ಮಠಗಳಲ್ಲಿ ಹಾಕದ ಸ್ವಾಮಿಗಳು, ಎಂದು ಹೇಳಿದರು.
ಈ ಪುಸ್ತಕವನ್ನು ಬರೆದವರು ಆರೆಸ್ಸೆಸ್ ನ ಪೂರ್ಣಾವಧಿ ಕಾರ್ಯಕರ್ತರಾಗಿದ್ದು, ರಾಜ್ಯದ್ಯಂತ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿ ಪದೇ ಪದೇ ಒಂದೇ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದರ ಹಿಂದೆ ವೈದಿಕರ ದೊಡ್ಡ ಷಡ್ಯಂತ್ರ ಅಡಗಿದೆ, ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದರು.
ಬಸವಾದಿ ಶರಣರು 12ನೇ ಶತಮಾನದಲ್ಲಿ ವೇದ, ಆಗಮ,ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿ ಸಮಸಮಾಜ, ಸ್ತ್ರೀ ಸ್ವಾತಂತ್ರ್ಯ, ಸಮಾಜವಾದ, ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಹಾಗೂ ಕೇವಲ ಭಕ್ತಿ ಮಾರ್ಗ ಹೇಳದೆ ಬಂಡಾಯ ಚಳುವಳಿಯನ್ನು ರೂಪಿಸಿದ್ದನ್ನು ಮರೆ ಮಾಚುವ ಹುನ್ನಾರ ಅಡಗಿದೆ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದಾಗಿನಿಂದ ಮತ್ತು ಮುಂದೆ ಬಸವಣ್ಣನವರ ತತ್ವಗಳಾದ ಸಮಸಮಾಜ, ಸ್ತ್ರೀ ಸ್ವಾತಂತ್ರ್ಯತೆ, ಸಮಾಜವಾದ, ಆಸ್ಪೃಶ್ಯತೆ ನಿವಾರಣೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುವುದನ್ನು ಸಹಿಸಲಾರದೇ ಸಂಘ ಪರಿವಾರದವರು ಮನುವಾದವನ್ನು ಮತ್ತೆ ಜಾರಿಗೊಳಿಸಬೇಕೆಂಬ ದುರುದ್ದೇಶದಿಂದ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ.
ಬಸವಣ್ಣ ತನ್ನ ಎಂಟನೇ ವಯಸ್ಸಿನಲ್ಲಿ ಲಿಂಗತಾರತಮ್ಯದ ಜನಿವಾರ ಧಾರಣೆಯಂತ ಸಂಪ್ರದಾಯಗಳನ್ನು ಧಿಕ್ಕರಿಸಿ ಮನೆ ಬಿಟ್ಟು ಹೊರಗೆ ಹೋಗುತ್ತಾರೆ. ಗುಡಿಯೊಳಗೆ ಶೂದ್ರರಿಗೆ ಪ್ರವೇಶವಿಲ್ಲದ್ದನ್ನು ಮನಗಂಡು ಅಂಗೈಯಲ್ಲಿ ಲಿಂಗ ತಂದು ಕೊಟ್ಟ ಮಹಾನ್ ಶರಣ.
ಅಂತರ್ಜಾತಿ ವಿವಾಹ ಮಾಡಿಸುವುದರ ಮೂಲಕ ಜಾತಿ ಪದ್ದತಿಯನ್ನು ಹೋಗಲಾಡಿಸುವುದಕ್ಕೆ ಮುನ್ನುಡಿ ಹಾಕಿ ಹೀಗೇ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಕ್ರಾಂತಿಯನ್ನು ಮಾಡಿದವರು.
ಇದನ್ನು ಸಹಿಸದ ವೈದಿಕರು ಅಂದು 12ನೇ ಶತಮಾನದಲ್ಲಿ ಬಸವಾದಿ ಶರಣರು ಬರೆದ ಸುಮಾರು 160ಕೋಟಿ ವಚನಗಳನ್ನು ಸುಟ್ಟು ಹಾಕಿದರು. ಅಲ್ಲದೇ ಹಣೆ ಮೇಲೆ ವಿಭೂತಿ ಕಂಡಲ್ಲಿ ಸಹಸ್ರ ಸಹಸ್ರ ಶರಣರನ್ನು ಕಂಡ ಕಂಡಲ್ಲಿ ಕೊಲೆ ಮಾಡಿದರು. ಈಗ ಆ ವಚನಗಳನ್ನು ಸುಟ್ಟ ಬೂದಿಯಲ್ಲಿ’ ವಚನದರ್ಶನ’ವೆಂಬ ಪುಸ್ತಕ ಅದೇ ಸಂತತಿಯವರು ಮಾಡುತ್ತಿರುವುದು ವಚನ ಚಳುವಳಿಯನ್ನು ಮರೆ ಮಾಚಲು ಹೂಡಿರುವ ನಾಟಕವೆಂಬುದು ಸರ್ವ ವಿಧಿತ ಎಂದರು.
ಬಸವಣ್ಣನ ತತ್ವಗಳನ್ನು ಪ್ರಸಾರ ಮಾಡುವ ಸದುದ್ದೇಶ ಸಂಘ ಪರಿವಾರದವರಿಗೆ ಇದ್ದರೆ ಕರಾವಳಿ, ಉಡುಪಿ ಕಡೆ ಮಡೇ ಸ್ನಾನ, ಎಡೆ ಸ್ನಾನ ಸ್ನಾನಗಳಂತ ಅನಿಷ್ಟ ಪದ್ಧತಿ ಇರುವ ಕಡೆ ಸರಕಾರ ಪ್ರಕಟಿಸಿರುವ ಮೂಲ ವಚನಗಳನ್ನು ಪ್ರಸಾರ ಮಾಡಲಿ. ಸಂಘದ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯ ಮಾಡಲಿ ಮತ್ತು ಬಸವಣ್ಣನ ಲಿಂಗಾಯತ ಧರ್ಮಕ್ಕೆ ಬೌದ್ಧ, ಜೈನ ಸಿಖ ಧರ್ಮಗಳಂತೆ ಮಾನ್ಯತೆ ಕೊಡಿಸಲಿ ಅಂದಾಗ ಮಾತ್ರ ಲಿಂಗಾಯತರು ಮೇಲೆ ಹೇಳಿದ ಧರ್ಮಗಳವರಂತೆ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಪ್ರಯೋಜನ ಪಡೆಯಲಿದ್ದಾರೆ. ಅದನ್ನು ಬಿಟ್ಟು ವಚನಗಳನ್ನು ವಿರೂಪಗೊಳಿಸಿ ಅರ್ಧಂಬರ್ಧ ಸಾಲುಗಳನ್ನು ತೆಗೆದುಕೊಂಡು ಸಮಾಜವನ್ನು ತಪ್ಪು ದಾರಿಗೆ ಎಳೆಯುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಸರಕಾರ ವಚನದರ್ಶನ ವೆಂಬ ಸುಳ್ಳುಗಳು ತುಂಬಿದ ಬಸವಾದಿ ಶರಣರ ತತ್ವಕ್ಕೆ ಅಪಚಾರ ಮಾಡುವ ಪುಸ್ತಕವನ್ನು ಕೂಡಲೇ ಮುಟ್ಟುಗೊಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು.