ಹುಬ್ಬಳ್ಳಿ
ಏಕತಾ ಮಿಷನ್ ಸಂಸ್ಥೆಯ ಉದ್ಘಾಟನಾ ಸಮಾರಂಭವು ಶನಿವಾರ ನಗರದ ಸಾಮ್ರಾಟ ಅಶೋಕ ಹೋಟೆಲ್ ಸಭಾಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಶರಣರ ಇವನಾರವ …. ಇವನಮ್ಮವ ವಚನ ಹಾಗೂ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ವಿಚಾರವಾದಿ ಸೈಯ್ಯದ ರೋಷನ್ ಮುಲ್ಲಾ ಸಂಸ್ಥೆಯನ್ನು ಉದ್ಘಾಟಿಸಿದರು, ಅವರು ಮಾತನಾಡುತ್ತ ಬುದ್ಧ, ಬಸವ, ಅಂಬೇಡ್ಕರ್ ಅವರ ಕನಸು ನನಸು ಮಾಡಲು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು, ವಿವಿಧ ಧರ್ಮ, ಜಾತಿಗಳು ಆಚರಿಸುವ ಸಂಪ್ರದಾಯಗಳನ್ನು ಪರಸ್ಪರ ಗೌರವಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಚಿಂತಕರಾದ ಲಕ್ಷ್ಮಣ್ ಬಕಾಯ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಎಲ್ಲರಿಗೂ ಸಮಾನತೆ, ಸಾಮಾಜಿಕ ನ್ಯಾಯ ದೊರಕಿಲ್ಲ ಎಂದು ವಿಷಾದಿಸಿದರು. ರೈತರು, ದುರ್ಬಲರು, ಅಲ್ಪಸಂಖ್ಯಾತರು, ಹಿಂದುಳಿದವರು ಒಗ್ಗಟ್ಟಿನಿಂದ ಹೋರಾಡುವ ಮೂಲಕ ಪ್ರಭುತ್ವದ ರಾಜ್ಯಭಾರ ಹಿಡಿಯಲು ಸಂಸ್ಥೆ ಶ್ರಮಿಸಲಿ ಎಂದರು.
ಇನ್ನೋರ್ವ ಚಿಂತಕರಾದ ತಮ್ಮಣ್ಣ ಮಾದರ್ ಅವರು ಮಾತನಾಡಿ, ಸಂಘಟನೆ ಕೇವಲ ಒಂದು ವರ್ಗದವರಷ್ಟೆ ಇರದೆ ಎಲ್ಲ ಸಮುದಾಯಗಳವರನ್ನು ಒಳಗೊಂಡಿದ್ದು ಒಳ್ಳೆಯ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶ್ರೀ ವೈ. ಬಿ. ಚಲವಾದಿ ಮಾತನಾಡಿ, ಏಕತಾ ಮಿಷನ್ ಸಂಸ್ಥೆ ಮೂಲಕ ಸಾಮಾಜಿಕವಾಗಿ ನೊಂದವರಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮ ನಿರೂಪಣೆ ಮಾಡಿದ ಸಂಘಟನೆಯ ಸಂಚಾಲಕರಾದ ಕುಮಾರಣ್ಣ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡುತ್ತ, ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ಮುಟ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಗಂಗಾಧರ ಪೆರೂರ ಸ್ವಾಗತಿಸಿದರು. ಕಾರ್ಯದರ್ಶಿ ಶಮೀಮ್ ಮುಲ್ಲಾ ಅವರು ಕುರಾನ್‌ನ ಒಂದು ವಚನ ಓದಿದರು. ಫಾದರ್ ಜರ್ಮಯ್ಯ ಬೈಬಲ್‌ನ ಒಂದು ವಚನ ಓದಿದರು. ವೇದಿಕೆಯ ಮೇಲೆ ವಿಜಯ್ ಕುಮಾರ್ ಲುಂಜಾಲಾ, ವಿನಾಯಕ ಓಸೇಕರ್ ಉಪಸ್ಥಿತರಿದ್ದರು. ಸಿದ್ಧಾರ್ಥ ವಂದನಾರ್ಪಣೆ ಮಾಡಿದರು.
ವಿವಿಧ ಸಮಾಜದ ಮುಖಂಡರಾದ ವಿ. ಎಸ್. ಲಿಗಾಡೆ, ಸಿ.ಎಚ್. ಹಡಗಲಿ, ಶರಣಪ್ಪ ಹೊಸಮನಿ, ಸಿ.ಎಮ್. ಚನ್ನಬಸಪ್ಪ, ಕೆ. ಎಸ್. ಕೋರಿಶೆಟ್ಟರ್, ಅಬ್ದುಲ್ ಇಸಾಮದಿ, ಇಂದೂಮತಿ ಸಿರಗಾವಿ, ಪ್ರಕಾಶ್ ಹುಬಳ್ಳಿ, ವಿಕ್ರಂ ನಾಯ್ಡು, ಬಸವರಾಜ ಹುಲ್ಲೋಳಿ. ಚಿಂತಾಮಣಿ ಸಿಂದಗಿ. ಸುನೀಲ ಪಾಟೀಲ, ಶಶಿಧರ ನಾರಾ, ಗುರುರಾಜ ಅವರಾದಿ, ಅಬ್ದುಲಹಮೀದ್ ಬಂಗಾಲಿ, ಭೀಮನಗೌಡ, ಅಭಿಷೇಕ್, ರಮೇಶ ವಡಪಲ್ಲಿ, ಮಲ್ಲಿಕಾರ್ಜುನ್ ಬಿಳಾರ, ಮೆಹಬೂಬ್ ಹನೀಫ್, ರಿಯಾಜ್ ನದಾಫ್ ಮುಂತಾದವರಿದ್ದರು.