ಬಸವಕಲ್ಯಾಣ
ವಿಶ್ವಬಸವಧರ್ಮ ಟ್ರಸ್ಟ್, ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಆಶಯದಂತೆ ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 146 ನೇ ಜಯಂತಿ ಕಾರ್ಯಕ್ರಮ ಬುಧವಾರ ಸಂಜೆ ಜರುಗಿತು.
ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಪೂಜ್ಯ ಬಸವದೇವರು, “ಅಂದು ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನ ಆದೇಶ ಹಿಡಿದು ಗುರು ಬಸವಣ್ಣನವರು ಅವತರಿಸಿದರು. ಇಂದು ಬಸವಾದಿ ಶರಣರ ವಚನ ತಾಡೋಲೆಗಳು ಹಾಳಾಗಿ ಹೋಗಬಾರದೆಂದು ಶರಣರಿಂದ ಕಳುಹಿಸಲ್ಪಟ್ಟವರೆ ಪೂಜ್ಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು.
ಜುಲೈ 02.,1880 ರಲ್ಲಿ ಧಾರವಾಡದಲ್ಲಿ ಜನಿಸಿದ ಹಳಕಟ್ಟಿ ಅಜ್ಜನವರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ಮುಂಬೈನಲ್ಲಿ ಬಿಎ, ಎಲ್ ಎಲ್ ಬಿ ಪದವಿದರರಾಗಿ ವೃತ್ತಿಪರ ಜೀವನಕ್ಕಾಗಿ ವಿಜಯಪುರಕ್ಕೆ ಆಗಮಿಸಿ ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಿ ಹತ್ತು ಹಲವು ಬಗೆಯಲ್ಲಿ ಸಮಾಜ ಸೇವೆ ಮಾಡಿದರು. ಅವರ ಸೋದರ ಮಾವನವರಿಂದ ವಚನ ತಾಡೋಲೆಗಳ ಕುರಿತು ತಿಳಿದುಕೊಂಡರು. ಅದು ಅವರ ಬದುಕಿನ ಪರಿವರ್ತನೆಯ ಘಟ್ಟ. ಅಲ್ಲಿಂದ ಮನೆ ಮಠಗಳಲ್ಲಿ ಗುಪ್ತವಾಗಿದ್ದ ವಚನ ತಾಡೋಲೆಗಳ ಸಂಗ್ರಹ, ಅಧ್ಯಯನ, ಪ್ರಕಟಣೆ ಕಾರ್ಯ ಮಾಡಿದರು.
‘ಹಿತಚಿಂತಕ ಪ್ರಿಂಟಿಂಗ್ ಪ್ರೆಸ್’ ಪ್ರಾರಂಭಿಸಲು ತಮ್ಮ ಸ್ವಂತ ಮನೆಯನ್ನೆ ಮಾರಬೇಕಾಯಿತು. ತಮ್ಮ ಸ್ವಂತ ಮಗ ತೀರಿಹೋದ ಸಂದರ್ಭದಲ್ಲಿ ಕೂಡ ವಿಚಲಿತರಾಗದೆ ವಚನ ಕಾರ್ಯದಲ್ಲಿ ಮಗ್ನರಾಗಿದ್ದು ಹಳಕಟ್ಟಿ ಅವರ ಆತ್ಮಸ್ಥೈರ್ಯ ಮತ್ತು ವಚನಗಳ ಕುರಿತು ಬದ್ಧತೆಯನ್ನು ತೋರಿಸುತ್ತದೆ. ಹರಿದ ಅಂಗಿಯ ಮೇಲೊಂದು ಕೋಟು ಧರಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಅವರು ಆತ್ಮಗೌರವದ ಪ್ರತೀಕ’ ಎಂದರು.
“ಶರಣರ ವಚನಗಳನ್ನು ಓದುವ ಮೊದಲು ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಅವರ ಜೀವನ ಸಂದೇಶವನ್ನು ಎಲ್ಲರೂ ಓದಬೇಕಿದೆ”, ವಚನಗಳ ಅಧ್ಯಯನ, ಅನುಷ್ಠಾನ, ಪ್ರಕಟಣೆಯ ಮೂಲಕ ನಾವಿಂದು ಹಳಕಟ್ಟಿಯವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.
ಪೂಜ್ಯ ಶಿವಾನಂದ ಸ್ವಾಮಿಗಳು ಮಾತನಾಡಿ, ಇಂದು ವಿಶ್ವಕ್ಕೆ ಬಸವಾದಿ ಶರಣರು ಪರಿಚಯವಾಗಲು ಫ.ಗು. ಹಳಕಟ್ಟಿ ಅವರು ತಮ್ಮ ಸುದೀರ್ಘ 36 ವರ್ಷಗಳನ್ನು ಗಂಧದ ಕೊರಡಿನಂತೆ ಸವೆಸಿದರು. ಅವರು ಲಿಂಗಾಯತ ಧರ್ಮದ 771 ನೇ ಅಮರಗಣಂಗಳಾಗಿ ಅವಿಸ್ಮರಣೀಯರಾಗಿದ್ದಾರೆ ಎಂದರು. ಪೂಜ್ಯ ಸುಗುಣಾತಾಯಿ ಮಾತನಾಡಿ, ಹಳಕಟ್ಟಿ ಅವರ ಆದರ್ಶ ಬದುಕು ನಮ್ಮದಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ದಿಲೀಪ ಸಿಂದೆ ಮಾತನಾಡಿ, ಹಳಕಟ್ಟಿ ಅವರ ಬದುಕೇ ನಮಗೊಂದು ಸಂದೇಶ ಅವರ ಆಶಯದಂತೆ ವಚನ ಪ್ರಸಾರಕ್ಕೆ ನಾವೆಲ್ಲ ಬದ್ಧರಾಗೋಣ ಎಂದರು. ಅನೀಲ ಸ್ವಾಮೀಜಿ, ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಮಾಜ ಸೇವಕ ಡಾ. ದಿಲೀಪ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣರಾವ ಹಂದಿಕೆರೆ, ನಾಗಶೆಟ್ಟಿ ಪಾಟೀಲ ವೇದಿಕೆ ಹಂಚಿಕೊಂಡರು. ಶಿವಲೀಲಾ ಕುಂಬಾರ ಸ್ವಾಗತಿಸಿದರು, ಅಶೋಕ ಕುಂಬಾರ ನಿರೂಪಿಸಿದರು. ನೂರಾರು ಜನ ಬಸವಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿ ಮಾಡಿದ ತಮಗೆ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು 🙏