ಗುಳೇದಗುಡ್ಡ
ಒಂದೊಂದು ಲಗ್ನಪತ್ರಿಕೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ, ಬೆಳ್ಳಿಯ ತಟ್ಟೆಯಲ್ಲಿ ಲಗ್ನಪತ್ರಿಕೆ ಕೊಟ್ಟಿದ್ದನ್ನು ನೋಡಿದ್ದೇವೆ. ಸಾವಿರಾರು ರೂ. ಲಗ್ನಪತ್ರಿಕೆಯಾಗಲಿ, ಬೆಳ್ಳಿತಟ್ಟೆಯಾಗಲಿ, ಬಹುಕಾಲ ನೆನಪಿನಲ್ಲಿ ಉಳಿಯದು. ಆದರೆ, ಗುಳೇದಗುಡ್ಡದ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ತಮ್ಮ ಮಗನ ಲಗ್ನಪತ್ರಿಕೆಯನ್ನು ವಚನ ತಾಂಬೂಲ ಎಂಬ ೭೯ ಶರಣರ ೩೫೨ ವಚನಗಳ ಸಂಗ್ರಹ ಗ್ರಂಥವನ್ನೇ ಪ್ರಕಟಿಸಿದ ಲಗ್ನಪತ್ರಿಕೆಯನ್ನು ನೀಡಿದ್ದು ಒಂದು ಅಪರೂಪದ ಸಂಗತಿ.
ನಗರದ ವಿಶ್ರಾಂತ ಪ್ರಾಚಾರ್ಯರಾದ ಸಿದ್ದಲಿಂಗಪ್ಪ ಬರಗುಂಡಿ ಹಾಗೂ ಕವಿತಾ ಬರಗುಂಡಿ ಅವರ ಪುತ್ರ ಬಸವರಾಜರ ಮದುವೆಯು ರಾಮದುರ್ಗದ ದೀಪ್ತಿ ಜೊತೆ ಮೇ ೧೦ ರಂದು ನಡೆಯಲಿದ್ದು, ಮಗನ ಲಗ್ನಪತ್ರವನ್ನು ಬಸವಾದಿ ಶರಣರ ವಚನಗಳ ಗ್ರಂಥರೂಪದಲ್ಲಿ ಪ್ರಕಟಿಸಿ, ಮದುವೆಗೆ ಆಹ್ವಾನಿಸಿದ್ದಾರೆ.
೨೧೬ ಪುಟಗಳಲ್ಲಿ ೭೯ ಶರಣರ ಒಟ್ಟು ೩೫೨ ವಚನಗಳನ್ನು ಹೊಂದಿದ್ದು, ಇವು ಬಸವಣ್ಣನವರನ್ನು ಸ್ತುತಿಸುವ ವಚನಗಳಾಗಿದ್ದು ವಿಶೇಷವಾಗಿವೆ. ಇದರಲ್ಲಿ ಒಂದು ಪುಟ ಮಾತ್ರ ಲಗ್ನದ ಆಹ್ವಾನಪತ್ರಿಕೆ, ಒಂದು ಪುಟದಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಮುದ್ರಿಸಲಾಗಿದೆ. ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಹಾಗೂ ಶಂಭುಲಿಂಗ ದುದ್ದಗಿ ಅವರು ವಚನಗಳನ್ನು ಸಂಗ್ರಹಿಸಿದ್ದು, ತಮ್ಮದೇ ಆದ ನೀಲಗಂಗಾ ಪ್ರಕಾಶನದಡಿ ವಚನ ತಾಂಬೂಲ ಗ್ರಂಥ, ಲಗ್ನಪತ್ರಿಕೆಯನ್ನು ಪ್ರಕಟಿಸಲಾಗಿದೆ.

ಮದುವೆಯ ಸಂದರ್ಭದಲ್ಲಿ ಶರಣರ ವಚನಗಳನ್ನು ಮನೆಗೆ ತಲುಪಿಸುವ ಮೂಲಕ ಹೊಸದೊಂದು ಪರಂಪರೆಗೆ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ನಾಂದಿ ಹಾಡಿದ್ದಾರೆ. ಮದುವೆಯ ಸಂಭ್ರಮದಲ್ಲಿ ಲಿಂಗಾಯತ ಧರ್ಮ ಜಾಗೃತಿಯ ಜತೆಗೆ ನಶಿಸುತ್ತಿರುವ ಪುಸ್ತಕ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದಾರೆ.
ವಚನಗಳನ್ನು ಪ್ರಸಾರ ಮಾಡುವ ದಾಸೋಹ ಕಾರ್ಯ ಎಂಬಂತೆ ಮನೆ ಮನೆಗಳಲ್ಲಿ ಶರಣರ ವಚನಗಳನ್ನು ತಲುಪಿಸುವ ಸಣ್ಣ ಪ್ರಯತ್ನವಾಗಿದೆ, ನಮ್ಮ ಮಗನ ಲಗ್ನಪತ್ರಿಕೆಯಲ್ಲಿ ವಚನಗಳನ್ನು ಸಂಗ್ರಹಿಸಿ ಗ್ರಂಥದ ರೂಪದಲ್ಲಿ ಪ್ರಕಟಿಸಿದ್ದೇವೆ. ಒಟ್ಟು ೨೦೦೦ ವಚನ ತಾಂಬೂಲ ಗ್ರಂಥರೂಪದ ಲಗ್ನಪತ್ರಿಕೆಯನ್ನು ಮುದ್ರಿಸಿದ್ದೇವೆ ಎಂದು ಪ್ರೊ. ಸಿದ್ದಲಿಂಗಪ್ಪ ಬರಗುಂಡಿ, ಗುಳೇದಗುಡ್ಡ ಇವರು ಹೇಳುತ್ತಾರೆ.
ಶರಣು
ಚನ್ನಾಗಿದೆ ವಚನಗಳ ಪ್ರಸಾರ ರೀತಿ ಶರಣು ಶರಣಾರ್ಥಿಗಳು
ಶರಣು ಶರಣಾರ್ಥಿಗಳು.ವಚನ ಸಾಹಿತ್ಯ ಪ್ರಸಾರ ಕಾರ್ಯ ವೈಖರಿ ಉತ್ತಮ ಹಾಗು ಸ್ತು ತ್ಯವಾಗಿದೆ.ಪ್ರತಿಯೊಬ್ಬರು
ಈ ಕ್ರಮ ಅನುಸರಿಸಿದರೆ ವಚನಗಳು ಜೀವನಕ್ಕೆ ದಾರಿದೀಪವಾಗುತ್ತವೆ.