ವಿದ್ಯಾರ್ಥಿನಿಯರಿಂದ ‘ವಚನ ಮಾಧುರ್ಯ’ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರಗಿ:
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವಾದಿ ಶರಣರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 878ನೆಯ ದತ್ತಿ ಕಾರ್ಯಕ್ರಮದಲ್ಲಿ ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ‘ವಚನ ಮಾಧುರ್ಯ’ ಕಾರ್ಯಕ್ರಮ ನಡೆಸಿಕೊಟ್ಟರು.

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರು ಎಂಬ ವಚನ ಗಾಯನ ಮಾಡಿ ದೇವರೂಪಿಯಾದ ಜೀವಿಗೆ ಅನ್ನದಾಸೋಹ ಮಾಡಿದರೆ ದೇವರಿಗೆ ತಲುಪುತ್ತದೆ ಎಂಬ ಸಂದೇಶ ಸಾರಿದರು.

ತಂದೆ ನೀನು ತಾಯಿ ನೀನು ಎಂಬ ವಚನದ ಮೂಲಕ ನಿರಾಕಾರ ದೇವರೇ ಎಲ್ಲರಿಗೂ ತಂದೆ ತಾಯಿಯಾಗಿದ್ದಾನೆ ಎಂಬ ಸತ್ಯವನ್ನು ಅರುಹಿದರು.

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂಬ ವಚನದ ಮೂಲಕ ದೇಹವೇ ದೇವಾಲಯ ಎಂಬ ಸಂದೇಶ ನೀಡಿದರು.

ಆಸೆ ಎಂಬುದು ಅರಸಂಗಲ್ಲದೆ ಶಿವಭಕ್ತರಿಗೆ ಉಂಟೇ ಅಯ್ಯಾ ಎಂಬ ವಚನದ ಮೂಲಕ ಆಸೆ ತೊರೆದವನು ಶರಣನಾಗುತ್ತಾನೆ ಎಂದರು.

ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿಯಾದ ಲಿಂಗೈಕ್ಯ ಮಹಾಂತೇಶ ಬೀಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೀಳಗಿಯವರ ಕುರಿತು ಮಾತನಾಡಿದ ಉಮೇಶ ಶೆಟ್ಟಿಯವರು, ಮಹಾಂತೇಶ ಅವರು ಬಸವಾದಿ ಶರಣರ ತದ್ರೂಪಿಯಾಗಿದ್ದರು.

ಅತ್ಯಂತ ಕಡುಬಡತನದಲ್ಲಿ ಬೆಳೆದರು. ಅವರ ತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಅವರ ತಂದೆಯ ನಿವೃತ್ತಿಯ ಪಿಂಚಣಿ ಪಡೆಯಲು ಒಂದು ನೂರು ರೂಪಾಯಿ ಲಂಚ ಕೇಳಿದ್ದರಿಂದ ನೊಂದ ಬೀಳಗಿಯವರು ಐಎಎಸ್ ಅಧಿಕಾರಿಯಾಗಿ ಭ್ರಷ್ಟಾಚಾರರಹಿತ ಆಡಳಿತ ನಾಡಿಗೆ ನೀಡುವ ಪಣತೊಟ್ಟರು.

ಬೀಳಗಿಯವರು ರ‍್ಯಾಂಕ್ ಪುರಸ್ಕಾರ ಪಡೆಯಲು ವೇದಿಕೆಗೆ ಹೋಗುವಾಗ ಬೇರೆಯವರ ಕೋಟು, ಬೂಟು ಧರಿಸಿಕೊಂಡು ಹೋಗಬೇಕಾಗುವಷ್ಟು ಬಡತನ ಅವರಿಗಿತ್ತು.

ಬಸವಣ್ಣನವರ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ಹಣೆಯ ಮೇಲೆ ವಿಭೂತಿ ಧರಿಸಿ, ಜನರಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಆಡಳಿತ ನೀಡಿದ್ದಾರೆ.
ಬಡವರ ಸೇವೆ ಮಾಡಿದ್ದಾರೆ. ಕನ್ನಡನಾಡಿಗೆ ಭಾರತಕ್ಕೆ ಅವರೆಂದು ಅವಿಸ್ಮರಣೀಯರು ಎಂದರು.

ವಿದ್ಯಾರ್ಥಿನಿಯರಾದ ರಾಜೇಶ್ವರಿ, ಭಾಗ್ಯಶ್ರೀ, ನಾಗಲಕ್ಷ್ಮಿ, ಸುಪ್ರಿಯ, ರೇಣುಕಾ, ಅನುರಾಧ, ಕಾವ್ಯ, ಶಿವಲೀಲಾ ವಚನ ಗಾಯನ ಮಾಡಿದರು.

ಉಪನ್ಯಾಸಕರಾದ ಸುಪ್ರಿಯ ನಾಗಶೆಟ್ಟಿ ಅವರು ವಚನ ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ , ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಪ್ರಾಚಾರ್ಯರಾದ ಕಲ್ಪನಾ ಭೀಮಳ್ಳಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಬಂಡಪ್ಪ ಕೇಸುರ್, ಅಶೋಕ ಗುರೂಜಿ, ಉದ್ದಂಡಯ್ಯ, ಉಪನ್ಯಾಸಕರಾದ ಲಕ್ಷ್ಮಿ ಕಲಬುರ್ಗ, ಸಿದ್ದಮ್ಮ ಹೊಸಮನಿ, ಅಶ್ವಿನಿ ರಾಜಗಿರಿ, ಮಲಕಮ್ಮ ಮುಗಳಿ, ಸಂಗೀತ ಬಿರಾದರ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *