ಬೆಂಗಳೂರು:
ಮದುವೆಯ ಹೆಸರಿನಲ್ಲಿ ಅನಾವಶ್ಯಕ ಆಚರಣೆಗಳು ಮತ್ತು ದುಂದುವೆಚ್ಚಗಳ ಬದಲಿಗೆ ಮಹಾತ್ಮ ಬಸವಣ್ಣನವರು ನುಡಿದು ಆಚರಿಸಿದ ವಚನಗಳ ನೆಲೆಗಟ್ಟಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಉತ್ತಮ ಕಾರ್ಯ ಎಂದು ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮಿಗಳು ಹೇಳಿದರು.
ಹೊಸ ವರ್ಷದ ಮೊದಲ ದಿನದಂದು ರಾಜಧಾನಿಯ ಶ್ರೀ ಗುರುವಣ್ಣದೇವರ ಮಠದಲ್ಲಿ ನಡೆದ ಅನಿಂದಿತಾ ಮತ್ತು ವೈ.ಎನ್. ಪವನ್ ಕುಮಾರ್ ಅವರ ವಚನ ಮಾಂಗಲ್ಯದ ಸಾನಿಧ್ಯ ವಹಿಸಿ ಮಾತನಾಡಿದರು.

ಅರ್ಥವಾಗದ ಭಾಷೆಯಲ್ಲಿ ಅರ್ಥಹೀನ ಆಚರಣೆಗಳ ಬದಲಿಗೆ ವಚನ ಮಾಂಗಲ್ಯದ ಆಶಯ ಮತ್ತು ಬಿನ್ನಹಗಳ ಆಲಿಸಿ ಅತ್ಯಂತ ಸರಳವಾಗಿ ಮತ್ತು ಸಹೃದಯತೆಯಿಂದ ನಡೆದ ವಚನ ಮಾಂಗಲ್ಯ ಎಲ್ಲರಿಗೂ ಆದರ್ಶವಾಗಿ ನಮ್ಮ ಜನ ಇದನ್ನು ಮಾದರಿಯಾಗಿ ಅನುಸರಿಸಬೇಕು ಎಂದು ಕರೆಕೊಟ್ಟರು.
ನೂತನ ಜೋಡಿ ಸತ್ಯಶುದ್ದತೆಯ ಪ್ರಮಾಣ ವಚನ ಸ್ವೀಕರಿಸಿದ್ದು ಅದರಂತೆ ನಡೆದು ಚೆಂದವಾದ ಬದುಕನ್ನು ನಡೆಸಲೆಂದು ಹಾರೈಸಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಅವರು ಆಶಯ ನುಡಿಗಳನ್ನಾಡಿ, 22 ವರ್ಷದ ಹಿಂದೆ ತಾವೇ ಸ್ವತಃ ವಚನ ಮಾಂಗಲ್ಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಯಾವುದೇ ತೊಂದರೆ-ಅಡಚಣೆಗಳು ಎದುರಾಗಿಲ್ಲ ಎಂದು ತಿಳಿಸಿದರು.

ರಾಜಗುರುಗಳು – ರಾಜ ಜ್ಯೋತಿಷ್ಯರುಗಳು ನೋಡಿ ಪಾರ್ವತಿ ಪರಮೇಶ್ವರ ಜೋಡಿ ಎಂದು ಹೇಳಿದ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅರಮನೆ ಮೈದಾನದಲ್ಲಿ ನಡೆದ ವಿವಾಹಗಳು ಆರು ತಿಂಗಳೊಳಗೆ ಮುರಿದು ಬೀಳುತ್ತಿರುವಾಗ, ತಾವು ನಡೆಸಿಕೊಟ್ಟ ನೂರಾರು ವಚನ ಮಾಂಗಲ್ಯಗಳು ಸಫಲವಾಗಿವೆ ಎಂದು ವಿವರಿಸಿದರು.
ವಚನಜ್ಯೋತಿ ಬಳಗದ ಗಾಯಕಿಯರಾದ ಮೀನಾಕ್ಷಿ ಮೇಟಿ ಮತ್ತು ಟಿ.ಎಂ. ಜಾನಕಿ ವಚನ ಗಾಯನ ನಡೆಸಿಕೊಟ್ಟರು. ವಚನಜ್ಯೋತಿ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿಯವರು ವಚನ ಮಾಂಗಲ್ಯದ ಆಶಯವನ್ನು ಎಲ್ಲರಿಗೂ ಮನದಟ್ಟು ಮಾಡಿಕೊಟ್ಟರು.
ಶ್ರೀ ಗುರುವಣ್ಣದೇವರ ಮಠದ ಪೂಜ್ಯರಾದ ನಂಜುಂಡಸ್ವಾಮಿಗಳ ಸಾನ್ನಿಧ್ಯದಲ್ಲಿ ಧಾರವಾಡದ ಅಂಗಡಿ ಮತ್ತು ಗುಂಜಟ್ಟಿ ಪರಿವಾರ, ಬೆಂಗಳೂರಿನ ಅಮಿತಾ ನಾಯರ್ ಪರಿವಾರ, ಪ್ರಯಾಗರಾಜದ ಬ್ರಹ್ಮಾನಂದ ಸಿಂಗ್ ಪರಿವಾರದವರು ಆತ್ಮೀಯವಾಗಿ ಸರ್ವರನ್ನೂ ಸ್ವಾಗತಿಸಿದರು.
ಲಿಂಗೈಕ್ಯ ಸರೋಜಿನಿ ಅಂಗಡಿ, ಎಸ್.ಎಂ. ಅಂಗಡಿ, ಬಿ.ವಿ. ಗುಂಜೆಟ್ಟಿ ಅವರುಗಳ ಆಶೀರ್ವಾದದೊಂದಿಗೆ ಲಿಂಗೈಕ್ಯ ಶರಣ ದಂಪತಿಗಳಾದ ಶೈಲಜ ಅಂಗಡಿ ಮತ್ತು ಸಿದ್ಧರಾಮ ಅಂಗಡಿ ಅವರ ಸುಪುತ್ರಿ ಅಷ್ಟಾವರಣ ಸಂಪನ್ನೆ ಅನಿಂದಿತಾ ಮತ್ತು ಅಷ್ಟಾವರಣ ಸಂಪನ್ನ ಪವನಕುಮಾರ್ ಅವರು ವಚನ ಮಾಂಗಲ್ಯ ಕಾರ್ಯಕ್ರಮದಲ್ಲಿ ಸತಿಪತಿಗಳಾಗಿ ವಚನ ಧರ್ಮದನುಗುಣವಾಗಿ ಚೆಂದ ಬಾಳ್ವೆ ನಡೆಸುತ್ತೇವೆಂದು ಪ್ರಮಾಣಿಸಿದರು.
