ಗದಗ
ಬಸವಣ್ಣ, ಇತರೆ ಶರಣರು ಹಾಗೂ ವಚನ ಸಾಹಿತ್ಯ ಇವುಗಳ ಕುರಿತು ನಡೆದಷ್ಟು ಪರ-ವಿರೋಧದ ಚರ್ಚೆಗಳು ಮತ್ಯಾವುದರ ಬಗ್ಗೆಯೂ ನಡೆದಿಲ್ಲ. ವಚನಗಳಲ್ಲಿನ ಹಲವು ಅಂಶಗಳು ಕೆಲವರಿಗೆ ಪಥ್ಯವಾಗುತ್ತಿಲ್ಲ.
ಏಕೆಂದರೆ ಸಾವಿರಾರು ವರ್ಷಗಳಿಂದ ಜನರ ಮನದಲ್ಲಿ ದೇವರು ಧರ್ಮ ಈ ಬಗೆಗೆ ಮೂಢನಂಬಿಕೆ ಬೆಳೆಸಿ ಅದರಿಂದ ಅನುಕೂಲ ಪಡೆದಂತವರಿಗೆ ವಚನ ಸಾಹಿತ್ಯ ಗರಗಸದಂತೆ ಕಾಣುತ್ತದೆ.
ಶರಣರ ವಿಚಾರಧಾರೆಗಳು ದೇಶ, ಕಾಲವನ್ನು ಮೀರಿದ್ದವಾಗಿವೆ. ಈ ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಅವೆಲ್ಲ ಪುರುಷರಿಂದ ಸ್ಥಾಪಿತವಾದಂತವು. ಅಲ್ಲಿ ಸ್ತ್ರೀಯರ ನೆರಳೂ ಕಾಣುತ್ತಿಲ್ಲ. ಆದರೆ ಲಿಂಗಾಯತರ ಪವಿತ್ರ ಧರ್ಮಗ್ರಂಥ ವಚನ ಸಾಹಿತ್ಯ ನಿರ್ಮಾಣದಲ್ಲಿ ಮಹಿಳೆಯರೂ ಕೂಡಾ ಪ್ರಮುಖವಾಗಿ ಭಾಗಿಯಾಗಿದ್ದರು. ಒಟ್ಟಾರೆ ೩೩ ವಚನಕಾರ್ತಿಯರು ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿದ್ದರೆಂದು ಪ್ರಾಧ್ಯಾಪಕ ಪ್ರೊ. ಎನ್. ಎಂ. ಪವಾಡಿಗೌಡ್ರ ಹೇಳಿದರು.

ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ನೀದೀಶ್ವರ ನಗರದ ಶಿವಾನಂದ ಪಲ್ಲೇದ ಅವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ಮಾತನಾಡಿದರು.
ವಚನ ಶ್ರಾವಣ-೨೦೨೫ದ ಮೂರನೇ ದಿನದ ಕಾರ್ಯಕ್ರಮದಲ್ಲಿ “ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ” ವಚನ ನಿರ್ವಚನಗೈದರು.
ಈ ವಚನವು ಹಡಪದ ಅಪ್ಪಣ್ಣನವರ ಧರ್ಮಪತ್ನಿ ಪುಣ್ಯಸ್ತ್ರೀ ಲಿಂಗಮ್ಮನವರದ್ದಾಗಿದೆ. ತನುವ ಕರಗಿಸುವ ಅಂದರೆ ಈ ಶರೀರಕ್ಕೆ ಬರೀ ಪ್ರಸಾದ ಮಾತ್ರವಲ್ಲ ಆಧ್ಯಾತ್ಮಿಕತೆಯೂ ಅವಶ್ಯ ಬೇಕು. ಈ ಮನವೆಂಬ ಮಂಗ ಅತ್ತ ಇತ್ತ ಹರಿಯದಂತೆ ಚಿತ್ತ ಚಂಚಲವಾಗದಂತೆ, ಚಪಲದತ್ತ ಸಾಗದಂತೆ ಮನಕ್ಕೆ ಆಧ್ಯಾತ್ಮದ ತಡಗೋಡೆ ಕಟ್ಟಬೇಕಿದೆ. ಅದು ಸಂಸ್ಕಾರದಿಂದ ಮಾತ್ರ ಸಾಧ್ಯ. ಇದರಿಂದ ತನುವಿನ ವಿಕಾರ ಕಳೆದುಕೊಂಡು ಸ್ವಚ್ಛವಾಗಿ ಆತ ಮಹದೇವನಾಗುವನು.

ತನುಮನ ಗೆದ್ದಾತನೇ ಯಶಸ್ಸನ್ನು ಸಾಧಿಸುವನು. ಇಲ್ಲಿ ಅಂಗಗುಣಗಳೆಂದರೆ ಮೂಲವಾಗಿ ದುರ್ಗುಣಗಳನ್ನು ಕಳೆದುಕೊಳ್ಳಬೇಕು. ಲಿಂಗಗುಣಗಳೆಂದರೆ ಇಲ್ಲಿ ಲಿಂಗವೆಂದರೆ ದೈವವಾಗಿರುತ್ತದೆ. ದೇವರೆಂದರೆ ಒಳ್ಳೆಯತನವೇ ಆಗಿದೆ. ಯಾವಾಗ ಸುಗುಣಗಳು ನಮ್ಮಲ್ಲಿ ಮನೆ ಮಾಡುವವೋ ಅವೇ ಆಗ ಆತನ ಏಳಿಗೆಗೆ ಕಾರಣವಾಗುವವು. ಇಲ್ಲಿ ಭಾವವೂ ಮುಖ್ಯವಾಗುತ್ತದೆ. ಅಲ್ಲಿರುವ ವಿಕಾರ, ಭ್ರಾಂತಿಗಳು ನಾಶವಾಗದ ಹೊರತು ಆತ ಪರಿಪೂರ್ಣ ಶರಣನಾಗಲಾರ. ಶರಣರ ಪ್ರಕಾರ ಈ ದೇಹವೆಂಬುದು ಪ್ರಸಾದ ಕಾಯವಾಗಿದೆ. ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ಈ ತತ್ವವನ್ನು ಅಳವಡಿಸಿಕೊಂಡಾತನೆ ಮಹಾದೇವ ಅಥವಾ ದೇವನಾಗುವನೆಂದು ಪ್ರೊ. ಪವಾಡಿಗೌಡ್ರ ವಚನ ನಿರ್ವಚನ ಗೈದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮತ್ತೋರ್ವ ಚಿಂತಕ ಅಶೋಕ ಬರಗುಂಡಿಯವರು, ವಚನ ಶ್ರಾವಣದ ಉದ್ದೇಶ ಮನೆ ಮನೆಗಳಿಗೂ ಶರಣರ ವಚನ ಸಂದೇಶ ಮುಟ್ಟಬೇಕೆಂಬುದೇ ಮೂಲ ಆಶಯವಾಗಿದೆ. ಈ ನಿಟ್ಟಿನಲ್ಲಿ ನಾವು ಸಂವಾದವನ್ನೂ ನಡೆಸುತ್ತಿದ್ದೇವೆ. ಸಂದೇಹಿಗಳು ಪ್ರಶ್ನಿಸಿ ಸಮರ್ಪಕ ಉತ್ತರ ಪಡೆಯಲು ಇಲ್ಲಿ ಅವಕಾಶವಿದೆ ಎಂದು ಹೇಳಿದರು.

ಅವರು ಮೇಲಿನ ವಚನ ನಿರ್ವಚನ ಮಾಡುತ್ತಾ ಅವರು ಇಲ್ಲಿ ತನು ಮನ ಭಾವ ಈ ಮೂರು ಪ್ರಮುಖವಾದವು. ಅಂಗದಲ್ಲಿಡಗಿರುವ ಈ ಮೂರು ಗುಣಗಳಿಗೆ ಸಂಸ್ಕಾರ ನೀಡಿದಾಗ ಮಾತ್ರ ದೇಹದಲ್ಲಿ ಲಿಂಗಗುಣಗಳು ಅಳವಡುವವೆಂದು ಬರಗುಂಡಿ ಶರಣರು ಹೇಳಿದರು. ಸಭೆಯ ಸಾನಿಧ್ಯ ವಹಿಸಿದ್ದ ಪೂಜ್ಯ ಡಾ. ಬಸವಲಿಂಗ ಮಹಾಂತದೇವರು ಕೂಡಾ ವಚನ ನಿರ್ವಚನಗೈಯ್ದು, ತನು ಮನ ಭಾವ ಈ ಮೂರನ್ನು ಗೆಲ್ಲುವಾತನ ಬದುಕು ಸಾರ್ಥಕವಾಗುತ್ತದೆಂದರು.
ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ವರನ್ನೂ ಶಿವಾನಂದ ಪಲ್ಲೇದ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ವಿ.ಕೆ.ಕರೇಗೌಡ್ರರಿಂದ ಜರುಗಿತು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಬಸವದಳದ ಕಾರ್ಯಕರ್ತರು, ಬಡಾವಣೆಯ ಶರಣು ಬಂಧುಗಳು ಪಾಲ್ಗೊಂಡಿದ್ದರು.