‘ವಚನಗಳು ಸಮಾಜ ಪರಿವರ್ತನೆಗೆ ದಿವ್ಯ ಔಷಧ’

ಕಲಬುರಗಿ

ವಚನ ಸಾಹಿತ್ಯ ಮೌಲಿಕವಾದುದು ಹಾಗೂ ಅರ್ಥಪೂರ್ಣವಾದದ್ದು. ಸಮಾಜ ಪರಿವರ್ತನೆಗೆ ದಿವ್ಯ ಔಷಧಿಯಂತಿದೆ ಮಹಾಂತಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಪ್ರೊ. ಎಸ್.ಎಲ್. ಪಾಟೀಲರ ಅಮೃತ ಪುಸ್ತಕಾಲಯದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ವಚನ ವೈಭವ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯದಲ್ಲಿ ಮೌಲ್ಯಗಳು’ ವಿಷಯ ಕುರಿತು ಮಾತನಾಡಿದ ಅವರು, ಶರಣರು ಸಮಾಜ ಚಿಕಿತ್ಸಕ ಬುದ್ಧಿಯುಳ್ಳವರಾಗಿದ್ದರು. ವಚನಗಳು ಆತ್ಮಸಾಕ್ಷಿ ಮನಸ್ಸಾಕ್ಷಿಯಾಗಿ ನುಡಿದ ನುಡಿಗಳು. ನಡೆ ನುಡಿ ಒಂದಾಗಿರಬೇಕು ಅಂದಾಗ ಅವು ವಚನಗಳಾಗುತ್ತವೆ ಇಲ್ಲದಿದ್ದರೆ ರಚನೆಗಳಾಗಿ ಉಳಿಯುತ್ತವೆ ಎಂದು ಅವರು ಹೇಳಿದರು.

ಮೌಲಿಕವಾದದ್ದು ಜನಪ್ರಿಯವಾಗುವುದಿಲ್ಲ. ಜನಪ್ರಿಯತೆ ಇದ್ದಿದ್ದು ಮೌಲಿಕವಲ್ಲ. ಆದರೆ ವಚನಕಾರರು ರಚಿಸಿದ ವಚನಗಳು ವಚನಗಳು ಶ್ರೀಸಾಮಾನ್ಯರನ್ನು ಆಕರ್ಷಿಸಿದವು. ವಚನಗಳು ಪಂಡಿತರನ್ನು ಗಮನದಲ್ಲಿರಿಸಿಕೊಂಡು ಬರೆಯದೆ ಶ್ರೀಸಾಮಾನ್ಯರನ್ನು ಗಮನದಲ್ಲಿರಿಸಿಕೊಂಡು ಬರೆದವುಗಳಾಗಿವೆ.

ಭಗವಾನ್ ಬುದ್ಧ ಪ್ರಾಕೃತ ತಿಳಿಯದಿದ್ದಾಗ ಪಾಲಿ ಭಾಷೆಯಲ್ಲಿ ತನ್ನ ಉಪದೇಶಗಳನ್ನು ಬೋಧಿಸಿದ. ಅದೇ ರೀತಿ ಸಂಸ್ಕೃತ ತಿಳಿಯದ ಜನರಿಗೆ ಅಚ್ಚ ಕನ್ನಡದಲ್ಲಿ ಬಸವಾದಿ ಶರಣರು ವಚನಗಳನ್ನು ರಚಿಸಿದರು.

ವಚನ ಪಚನವಾದರೆ ಸಮಾಜದಲ್ಲಿ ಕುಕೃತ್ಯಗಳು ನಿಂತು ಹೋಗುತ್ತವೆ. ಈ ಎಲ್ಲ ಕಾರಣಕ್ಕಾಗಿ ಬಸವಣ್ಣನವರನ್ನು ಕರ್ನಾಟಕದ ಸರ್ಕಾರ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದೆ. ಅನುಭವ ಮಂಟಪದಲ್ಲಿ 335 ವಚನಕಾರರು ಭಾಗವಹಿಸುತ್ತಿದ್ದರು ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ತು. ಮುಕ್ತವಾಗಿ ಮಾತನಾಡುತ್ತಿದ್ದರು ಎಂದರು.

ವಚನಕಾರರರು ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಕನಸಿದ್ದರು.‌ ಅದರಂತೆ ಪ್ರದಾನಿ‌ ಮೋದಿ ಅವರು ಕೂಡ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಮೂಲಕ ಬಸವತತ್ವವನ್ನು ಗೌರವಿಸಿದ್ದಾರೆ. ಆಡಳಿತ, ಅಧಿಕಾರ ಇರುವವರು ಬಸವ ತತ್ವ ಪಾಲನೆ ಮಾಡಿದರೆ ಖಂಡಿತ ಕಲ್ಯಾಣ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಅವರು ವಿಶ್ಲೇಷಣೆ ಮಾಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್‌.ಎಲ್. ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕೋಣೆ ನಿರೂಪಿಸಿದರು. ನೀಲಮ್ಮ ತಾಯಿ ನೆಲೋಗಿ ವಚನ ಗಾಯನ ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಹಾಗಾಂವಕರ್, ಆಶಾ ಕಂಠಿ, ಅಂಬಾರಾಯ ಬಿರಾದಾರ, ವಿಶ್ವನಾಥ ಮಂಗಲಗಿ, ಬಸವರಾಜ ರಾವೂರ, ಬಸವರಾಜ ಕೊನೇಕ್, ಮಾನು ಸಗರ, ಶಿವಶರಣಪ್ಪ ದೇಗಾಂವ, ಡಾ. ಶ್ರೀಶೈಲ ನಾಗರಾಳ, ಡಾ. ಶಿವರಂಜನ ಸತ್ಯಂಪೇಟೆ, ವಿಠ್ಠಲ್ ಚಿಕಣಿ ಇತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *