ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ
ಶಿವಮೊಗ್ಗ:
ಮಾನವನ ಜೀವನದಲ್ಲಿ ಎದುರಾಗುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಸಮಗ್ರ ಪರಿಹಾರ ಅಡಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ನಡೆದ ಜಿಲ್ಲಾ 7ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಕೇವಲ ಸಾಹಿತ್ಯವಲ್ಲ, ಮಾನವನ ಬದುಕಿಗೆ ದಿಕ್ಕು ತೋರಿಸುವ ದಾರಿದೀಪಗಳಾಗಿವೆ. ಇಂದಿನ ಸಂಕೀರ್ಣ ಜೀವನದಲ್ಲಿಯೂ ಆ ವಚನಗಳು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಚನಗಳ ಮಹತ್ವ ಮತ್ತು ಅದರ ಸಾರವನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ. ಪೋಷಕರು ಹಾಗೂ ಸಮಾಜ ಒಟ್ಟಾಗಿ ಶರಣ ಸಾಹಿತ್ಯದ ಅರಿವು ಮಕ್ಕಳಲ್ಲಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತಬಹುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ. ವಚನ ಸಾಹಿತ್ಯವು ಮನುಕುಲಕ್ಕೆ ಶಕ್ತಿ ತುಂಬಿದ ಮಹತ್ತರ ಸಾಧನವಾಗಿದೆ. ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯಂತಹ ಮಹಾನ್ ಶರಣರ ಭಕ್ತಿ ಈ ನಾಡಿನ ಮಣ್ಣಿನಲ್ಲಿ ನೆಲಸಿದೆ ಎಂದು ಹೇಳಿದರು.
ಹಳೆಯ ಕಾಲದಲ್ಲಿ ಪೋಷಕರು ಮಕ್ಕಳಿಗೆ ಬೆಳಗ್ಗೆ-ಸಂಜೆ ವಚನ, ದೇವರನಾಮಗಳ ಮೂಲಕ ಸಂಸ್ಕಾರ ನೀಡುತ್ತಿದ್ದರು. ಆದರೆ ಇಂದಿನ ಯುಗದಲ್ಲಿ ಮಕ್ಕಳಿಗೂ ಪೋಷಕರಿಗೂ ಸಮಯದ ಕೊರತೆ ಉಂಟಾಗಿದೆ. ಮೊಬೈಲ್‌ಗಳಿಗೆ ಮಾತ್ರ ಸಮಯ ಮೀಸಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈ ಸಮ್ಮೇಳನವು ಕೇವಲ ಸಾಹಿತ್ಯಕ ಕಾರ್ಯಕ್ರಮವಲ್ಲ. ಅದು ಸಮಾಜ ಜಾಗೃತಿಗೆ ದಾರಿಯಾಗುವ ಮಹತ್ವದ ಚಳುವಳಿಯಾಗಿದೆ. ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಸಾಗಿಸುವ ಸೇತುವೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ನಾನು, ನನ್ನದು” ಎಂಬ ಅಹಂಕಾರ, ದ್ವೇಷ ಮತ್ತು ಪ್ರತಿಷ್ಠೆಯನ್ನು ತೊಡೆದು ಹಾಕಿದಾಗ ಸಮಾಜದಲ್ಲಿ ಕಲಹ, ಯುದ್ಧಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.
ವಚನ ಸಾಹಿತ್ಯವು ಕೇವಲ ಓದುವುದಕ್ಕೆ ಮಾತ್ರ ಸೀಮಿತವಲ್ಲ, ಅದು ಪ್ರತಿಯೊಬ್ಬರ ಬದುಕಿನ ಚೌಕಟ್ಟಾಗಬೇಕು. ವಚನಗಳ ಮಾರ್ಗದರ್ಶನವನ್ನು ಅನುಸರಿಸಿದರೆ ಜೀವನ ಸುಂದರವಾಗುತ್ತದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಅವರು ಮಹತ್ವದ ವಿಷಯವೊಂದನ್ನು ಸ್ಮರಿಸಿದರು. ಬಸವಾದಿ ಶರಣರ ವಚನಗಳನ್ನು ನಾವು ಜಗತ್ತಿಗೆ ಸಮರ್ಪಕವಾಗಿ ಪರಿಚಯಿಸಿದ್ದರೆ, ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶರಣರ ವಚನಗಳನ್ನು ಉಲ್ಲೇಖಿಸುತ್ತಿದ್ದರು ಎಂದು ಸುತ್ತೂರು ಶ್ರೀ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ, ಡಾ. ಧನಂಜಯ ಸರ್ಜಿ, ಪರಿಷತ್ ಜಿಲ್ಲಾ ಅಧ್ಯಕ್ಷ ಮಹಾರುದ್ರ, ಮಾಜಿ ಶಾಸಕ ಎಸ್. ರುದ್ರೇಗೌಡ, ಎಸ್. ಎಸ್. ಜ್ಯೋತಿಪ್ರಕಾಶ್, ಬೆನಕಪ್ಪ, ಪರಮೇಶ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ನಡೆಯಿತು. ಬೆಳಗ್ಗೆ 9 ಗಂಟೆಗೆ ಉಡುತಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಅಕ್ಕಮಹಾದೇವಿ ಜ್ಯೋತಿಯನ್ನು ಭವ್ಯವಾಗಿ ಸ್ವಾಗತಿಸಿ, ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಲಿಂಗಾಯತ ಅಂಬೇಡ್ಕರ್ ಗಮನಕ್ಕೆ ತರಲು ಸಂವಿಧಾನ ರಚನೆ ಸಮಿತಿಯ ಲಿಂಗಾಯತರು ಯಾರೂ ಇರಲಿಲ್ಲವೇ?… ಕೋರ್ಟ್ ದಾವೆ ಗಳು ವಿಚಾರಿಸಿ ಇನ್ನೂ ನಿರ್ಣಯ ನೀಡಿಲ್ಲವೇ? ಜಾಮದಾರ ಅವರ ಹತ್ತಿರ ಉತ್ತರ ಸಿಗುತ್ತೆ ವಿಚಾರ ತಿಳ್ಸಿ ಜನಕ್ಕೆ ತಿಳಿಸಿ ಬಲ್ಲವರು ಹೇಳಿ 👏🏻ಶರಣು 👏🏻ಧನ್ಯವಾದಗಳು
ಇನ್ನು ಕಾಲ ಮಿಂಚಿಲ್ಲ ಸುತ್ತುರ ಶ್ರೀಗಳೆ ಲಿಂಗಾಯತ ಧರ್ಮ ಜಾಗತಿಕ ಮಟ್ಟದಲ್ಲಿ ಇರಬೇಕು ಅದಕ್ಕೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟರೆ ಮಾತ್ರ ಜಾಗತಿಕ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮ ಬರುತ್ತೆ ಅದಕ್ಕೆ ತಾವುಗಳು ಸಾಂವಿಧಾನಿಕ ಮಾನ್ಯತೆಗೆ ಸಹಕಾರ ಬೆಂಬಲ ನಿಡಿ.
ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಬಿತ್ತಿದ ತತ್ವ ಆದರ್ಶಗಳನ್ನು ಜನಸಾಮಾನ್ಯರಿಗೆ ದೇಶದಾದ್ಯಂತ ತಲುಪಿಸುವ ಕಾರ್ಯದಲ್ಲಿ ಪ್ರಮುಖವಾಗಿ ಲಿಂಗಾಯತ ಮಠಗಳು ಹಿಂದೆ ಬಿದ್ದಿವೆ.ಈ ಸತ್ಯವನ್ನು ಶ್ರೀಗಳು ಒಪ್ಪಿಕೊಂಡಿರುವುದು ಎಷ್ಟು ಸತ್ಯವೋ, ಅಷ್ಟೇ ಪ್ರಾಮಾಣಿಕವಾಗಿ ಎಲ್ಲ ಮಠಾಧೀಶರು ಸ್ವ ಆತ್ಮ ವಿಮರ್ಶೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಅನ್ಯಾಯವನ್ನು ಸರಿಪಡಿಸಿಕೊಂಡು ಬಸವಾದಿಶರಣರ ತತ್ವ ಆದರ್ಶಗಳನ್ನ ಎತ್ತಿ ಹಿಡಿಯುವ ಕೆಲಸ ಮುಂದುವರಿಸಲಿ.