ಭಾಲ್ಕಿ:
ಸಂತೃಪ್ತ ಜೀವನವನ್ನು ಸಾಗಿಸಲು ಬಸವಾದಿ ಶಿವಶರಣರ ವಚನಗಳೇ ದಿವ್ಯ ಔಷಧಿ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸುಖಮಯವಾಗಿರಲು ಸಾಧ್ಯವಾಗುತ್ತದೆ ಎಂದು ಶ್ರೀ ಚನ್ನಬಸವೇಶ್ವರ ಗುರುಕುಲದ ಶಿಕ್ಷಕಿ ಕಾವೇರಿ ಅನಿಲಕುಮಾರ ಪಾಟೀಲ ಹೇಳಿದರು.
ತಾಲೂಕಿನ ತಳವಾಡ( ಕೆ) ಗ್ರಾಮದ ಶಿವಪ್ರಕಾಶ ಕುಂಬಾರ ಅವರ ಬಸವ ಬೆಳಗು ಮನೆಯಲ್ಲಿ ಮಹಾಮನೆ 9ನೇ ಮಾಸಿಕ ಕಾರ್ಯಕ್ರಮದಲ್ಲಿ ಅನುಭಾವವ ನೀಡಿದರು.
ಕಾರ್ಯಕ್ರಮವನ್ನು ವಚನ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಬೀದರನ ಅಕೌಂಟೆಂಟ್ ಯೋಗಾನಂದ ಸ್ವಾಮಿ ಅವರು ಬಸವ ಗುರು ಪೂಜೆ ಮಾಡಿ ಜ್ಯೋತಿ ಬೆಳಗಿಸಿದರು.

ತಳವಾಡ ಗ್ರಾಮದ ಪಂಚಾಯತಿ ಅಧ್ಯಕ್ಷರಾದ ಅನುಪಮಾ ರವಿ ರಾಚಣ್ಣಾ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಡೆದು ಬಂದ ದಾರಿಯನ್ನು ವಿವರಿಸಿ, ವಚನ ಸಾಹಿತ್ಯದಿಂದ ಸಮಚಿತ್ತದ, ಸಮಭಾವದ ಜೀವನವನ್ನು ನಡೆಸಲು ವಚನಗಳು ದಾರಿ ದೀಪವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾವೇರಿ ಪಾಟೀಲ ಅವರಿಗೆ ಕುಂಬಾರ ಪರಿವಾರದಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರೇಮಠ ಸಂಸ್ಥಾನ ವಿದ್ಯಾಪೀಠದ ಮುಖ್ಯ ಲೆಕ್ಕಾಧಿಕಾರಿ ಗುರುಸಿದ್ದಯ್ಯ ಸ್ವಾಮಿ, ಪ್ರಭುದೇವ ಕುಂಬಾರ, ತಳವಾಡ ಗ್ರಾಮದ ಅಕ್ಕನ ಬಳಗದ ಶರಣೆಯರು ಹಾಗೂ ಶ್ರೀ ಚನ್ನಬಸವೇಶ್ವರ ಗುರುಕುಲದ ಶಿಕ್ಷಕಿಯರು ಇದ್ದರು.

ಭಾರತಿ ಕುಂಬಾರ ಪ್ರಾರ್ಥನೆ ನಡೆಸಿಕೊಟ್ಟರು. ಶಿವಪ್ರಕಾಶ ಕುಂಬಾರ ನಿರೂಪಿಸಿದರು. ಕುಮಾರ ಪ್ರಜ್ವಲ್ ಕುಂಬಾರ ಶರಣು ಸಮರ್ಪಣೆ ಸಲ್ಲಿಸಿದರು.
