ಬೀದರ:
ವಚನ ವಿಜಯೋತ್ಸವದ ಮೂರನೇ ದಿನ ಮುಂಜಾನೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿಯವರೆಗೆ ಗುರುವಚನ ಧರ್ಮಗ್ರಂಥದ ಭವ್ಯ ಮೆರವಣಿಗೆ ನಡೆಯಿತು.
ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಹುಲಸೂರಿನ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ದಿವ್ಯ ಸಾನಿಧ್ಯ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ವಚನ ಪಠಣ ಮಾಡುವುದರ ಮೂಲಕ ಚಾಲನೆ ನೀಡಿದರು.

ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ವಚನಗಳನ್ನು ರಕ್ಷಿಸಿದ ಅತ್ಯಂತ ಮಹತ್ವದ ದಿನವಾಗಿದೆ. ನಾವೆಲ್ಲರೂ ಲಿಂಗಾಯತ ಎನ್ನುವುದನ್ನು ಯಾರು ಮರೆಯಬಾರದು. ನಡೆ-ನುಡಿ ಒಂದಾಗಿರಬೇಕು. ವಿಶ್ವದೆಲ್ಲೆಡೆ ವಚನ ವಿಜಯೋತ್ಸವ ಆಚರಿಸುವ ದಿನ ಬರುತ್ತದೆ ಎಂದರು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಜಗ ಬದುಕಲಿ ಜನ ಬದುಕಲೆಂದು ಬಸವಾದಿ ಶರಣರು ವಚನ ಸಾಹಿತ್ಯವನ್ನು ಪ್ರಾಣತ್ಯಾಗ ಮಾಡಿ ಅದನ್ನು ರಚಿಸಿ, ಉಳಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯ, ಸಮಾನತೆಗೆ ಬೆಲೆ ಬಂದಿದೆ ಎಂದರು.
ಹೂವಿನಿಂದ ಅಲಂಕೃತವಾಗಿದ್ದ ವಚನ ಗ್ರಂಥ ಹೊತ್ತ ರಥವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಸಾವಿರಾರು ಶರಣ ಶರಣೆಯರು ಬಿಳಿವಸ್ತ್ರ ಧರಿಸಿ, ಷಟಸ್ಥಲ ಚಿಹ್ನೆ ಇರುವ ಸ್ಕಾರ್ಪ, ತಲೆಯ ಮೇಲೆ ಟೋಪಿ-ಪೇಟ ಧರಿಸಿ, ವಚನ ಗ್ರಂಥಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.

ಛತ್ರಿ ಚಾಮರಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಡೊಳ್ಳು, ಹೆಜ್ಜೆ ಮೇಳ, ವಿವಿಧ ಗ್ರಾಮಗಳ ಭಜನಾ ಮೇಳ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಿದವು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ, ಮಾಚಿದೇವ ಮತ್ತಿತರ ಶರಣರ ವೇಷಧಾರಿಗಳು ಮುಂಚೂಣಿಯಲ್ಲಿದ್ದರು. ಕುದುರೆ, ಒಂಟೆಯ ಮೇಲೆ ಶರಣರ ವೇಷಧಾರಿಗಳು ಗಮನ ಸೆಳೆದರು.

ಮೆರವಣಿಗೆಯಲ್ಲಿ ಠಾಣಾಕುಶನೂರು ಸಿದ್ಧಲಿಂಗ ಸ್ವಾಮಿಗಳು, ಪೂಜ್ಯ ಶಿವಾನಂದ ದೇವರು, ಸತ್ಯಕ್ಕತಾಯಿ ನೇತೃತ್ವ ವಹಿಸಿದರು.

ವಚನ ವಿಜಯೋತ್ಸವ ಮೆರವಣಿಗೆ ಸಮಿತಿ ಸಂಯೋಜಕರಾದ ರಾಜೇಂದ್ರಕುಮಾರ ದಂಪತಿ ಗುರುಪೂಜೆ ಗೈದರು. ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನ್ಯೂಜಿಲ್ಯಾಂಡ್ ಬಸವ ಸಮಿತಿ ಅಧ್ಯಕ್ಷ ಷಟಸ್ಥಲ ಧ್ವಜಾರೋಹಣಗೈದರು. ಕಲ್ಪನಾ ಕರಬಸಪ್ಪ ಬೀದೆ ದಂಪತಿಗಳು ಗುರುವಚನ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು.
ಮೆರವಣಿಗೆಯಲ್ಲಿ ಶಾಸಕ ಶೈಲೆಂದ್ರ ಬೆಲ್ದಾಳೆ, ಗುರುನಾಥ ಕೊಳ್ಳೂರ, ಬಾಬುವಾಲಿ, ಸೋಮಶೇಖರ ಪಾಟೀಲ ಗಾದಗಿ, ಸುರೇಶ ಚನ್ನಶೆಟ್ಟಿ, ಜಯರಾಜ ಖಂಡ್ರೆ, ಶಿವಶಂಕರ ಕಾಮಶೆಟ್ಟಿ, ವಿರೂಪಾಕ್ಷ ಗಾದಗಿ, ಮಹಾಲಿಂಗಪ್ಪ ಬೆಲ್ದಾಳೆ, ಶಕುಂತಲಾ ಬೆಲ್ದಾಳೆ, ಬಸವರಾಜ ಪಾಟೀಲ, ಪ್ರದೀಪ ಬಿರಾದಾರ, ರವಿಂದ್ರ ಕೋಳಕೂರ, ಆಕಾಶ ಖಂಡಾಳೆ, ಧನರಾಜ ಹಂಗರಗಿ, ಅನಿಲ ಪಾಟೀಲ, ವೀರಶೆಟ್ಟಿ ಪಟ್ನೆ, ಮಲ್ಲಪ್ಪ ಗಿರಿ, ಸೇರಿದಂತೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯ ಸೇರಿದಂತೆ ನೂರಾರು ಗ್ರಾಮ, ಊರುಗಳ ಶರಣ ಶರಣೆಯರು ಪಾಲ್ಗೊಡಿದ್ದರು.

ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರೆ, ಕಲ್ಯಾಣರಾವ ಚಳಕಾಪೂರೆ ನಿರೂಪಿಸಿದರು. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಶಾಸಕ ಶೈಲೆಂದ್ರ ಬೆಲ್ದಾಳೆ ಸೇರಿದಂತೆ ಭಾಗವಹಿಸಿದ ಸಾವಿರಾರರು ಶರಣ ಶರಣೆಯರು ವಚನಗಳ ಹಾಡಿಗೆ ಹೆಜ್ಜೆ ಹಾಕಿ ನಲಿದರು.
