ಬೆಂಗಳೂರು
ಬರುವ ಬಜೆಟಿನಲ್ಲಿ ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆಗೆ ಅನುದಾನ ನೀಡುವಂತೆ ಲಿಂಗಾಯತ ಮಠಾಧಿಪತಿಗಳು ಹಾಗೂ ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬಸವಾದಿ ಶರಣರ ವಚನಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಯಿತು.

ನಿಯೋಗದ ಬೇಡಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.
ಕಳೆದ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ‘ವಚನ ವಿಶ್ವವಿದ್ಯಾಲಯಕ್ಕೆ ನೆರವು ನೀಡುವುದಾಗಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದರು.

ನಿಯೋಗದಲ್ಲಿ ಪರಮಪೂಜ್ಯರುಗಳಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದದೇವರು, ಡಾ. ತೋಂಟದ ಸಿದ್ದರಾಮ ಸ್ವಾಮಿಗಳು, ಶ್ರೀ ಗುರುಮಹಾಂತಾ ಸ್ವಾಮಿಗಳು, ಶ್ರೀ ಪ್ರಭುಚನ್ನಬಸವ ಸ್ವಾಮಿಗಳು, ಹಂದಿಗುಂದದ ಶಿವಾನಂದ ಸ್ವಾಮಿಗಳು, ಬೆಳಗಾವಿ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಪ್ರಭುಚನ್ನಬಸವ ಸ್ವಾಮೀಜಿ, ಬೆಂಗಳೂರು ಬಸವಯೋಗಿ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸೇರಿದಂತೆ ವಿವಿಧ ಮಠಗಳ ಗುರುಗಳು, ಸಚಿವರಾದ ಈಶ್ವರ ಖಂಡ್ರೆ ಎಮ್ ಬಿ ಪಾಟೀಲ್, ಹಿರಿಯ ಶಾಸಕ ಬಿ.ಆರ್. ಪಾಟೀಲ್ ಮತ್ತು ಇತರರು ಉಪಸ್ಥಿತರಿದ್ದರು.
ಮಾರ್ಚ್ 6ರಂದು ಸಿದ್ದರಾಮಯ್ಯ ತಮ್ಮ 17ನೇ ಬಜೆಟ್ ಮಂಡಿಸಲಿದ್ದಾರೆ.
