ವಿಶ್ವ ಮಹಿಳಾ ದಿನಾಚರಣೆ
ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ರವಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬಸವಾದಿ ಶರಣ ಬಿಬ್ಬಿ ಬಾಚರಸ ಸ್ಮರಣಾ ದಿನವನ್ನು ಆಚರಿಸಲಾಯಿತು.
ಬಸವ ಕೇಂದ್ರ, ಅಕ್ಕನ ಬಳಗ, ಜಿಲ್ಲಾ ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಾಹಾಸಭಾ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದು ಶಿಸು ತಜ್ಞವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಮಾತನಾಡುತ್ತಾ, ಅಂದು ಬಸವಣ್ಣ ಮಹಾಮನೆಯ ನಿರ್ಮಾಣದ ಮೂಲಕ ಎಲ್ಲಾ ಮಹಿಳೆಯರಿಗೆ ಸಮಾನತೆ ಮತ್ತು ಮುಖ್ಯವಾಗಿ ಮನಸ್ಸಿನ ಭಾವನೆಗಳನ್ನು ಸ್ವತಂತ್ರವಾಗಿ ಆಲೋಚಿಸಿ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ಮುಟ್ಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದರು.

ಯಾವುದೇ ಕಳವಳವಿಲ್ಲದೆ ಶರಣೆ ಅಕ್ಕನಾಗಮ್ಮನ ವಚನದಂತೆ ಮನವ ನೋಡಿಹನೆಂದು ಮನದೊಡೆಯ ಮಹದೇವ ಮನುಜರ ಕೈಯಿಂದ ಒಂದೊಂದೇ ನುಡಿಸುತಿಹನು ಕಳವಡಿಸದೇ, ಕಾತರಿಸದೆ ತಮ್ಮ ತಮ್ಮ ಅಂತರಂಗದ ನುಡಿಯ ಚರ್ಚಿಸಬೇಕೆಂದು ಹೇಳಿದರು.
ಕಲ್ಯಾಣ ಕ್ರಾಂತಿಯ ನಂತರ ವಚನಗಳು ಉಳಿದಿದ್ದರೆ ಅದಕ್ಕೆ ಶರಣೆ ಅಕ್ಕನಾಗಮ್ಮನ ಧೃಡ ನಿರ್ಧಾರವೇ ಕಾರಣ. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬಂತೆ ಅಂದು ಬಸವಣ್ಣ ಮನೆಬಿಟ್ಟು ಹೊರಟಾಗ ತಾಯಿಯಾಗಿ ಜೊತೆಗೆ ಹೊರಟು ಮಗ ಚೆನ್ನಬಸವಣ್ಣನನ್ನು, ಬಸವಣ್ಣನನ್ನು ಕಾಪಾಡಿದ್ದು ಅಕ್ಕನಾಗಮ್ಮ.

ಅಂದು ಅನುಭವ ಮಂಟಪದಲ್ಲಿ 770 ಅಮರಗಣಗಳು ಲಕ್ಷದ ಮೇಲೆ 96 ಸಾವಿರ ಚರ ಜಂಗಮರ ಪ್ರಸಾದ ವ್ಯವಸ್ಥೆಯನ್ನು ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ ತಾಯಿಯವರೆ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು.
ಅತಿಥಿಗಳಾದ ಡಾ. ಶಿಲಾ ಸಗರದ ಮಾತನಾಡಿ, ಎಲ್ಲಾ ಕೆಲಸವನ್ನು ಹುಸಿಯಿಲ್ಲದಂತೆ ಎಲ್ಲರೂ ಮಾಡುವುದೇ ಶರಣ ಸಂಸ್ಕೃತಿ ಎಂದರು. ಓಂ ನಮಃ ಶಿವಾಯ ಮಂತ್ರವನ್ನು ಕಣ್ಣು ಮುಚ್ಚಿ ಪ್ರೀತಿಯಿಂದ ಧ್ಯಾನಿಸಿದರೆ ಶಾಂತತೆ ಬರುತ್ತದೆ. ಮನ ಶುದ್ಧವಿಲ್ಲದವರಿಗೆ ದ್ರವ್ಯದ ಚಿಂತೆ ಸತ್ಯ ಶುದ್ಧ ಕಾಯಕ ಮಾಡಿದವರಿಗೆ ಲಕ್ಷ್ಮಿ ಎತ್ತ ನೋಡಿದಡತ್ತ ತಾನೇ ತಾನಾಗಿಪ್ಪಳು ಇದಕ್ಕೆ ಬಾಳೆ ಕುಂದ್ರಿಯವರೇ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮವನ್ನು ಗಿರಿಜಾ ಶಂಕರ ಸಿರಿವಾರ ಉದ್ಘಾಟಿಸಿ, ಮಾತನಾಡಿದರು. ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀಮತಿ ಜಗದೇವಿ ಚೆನ್ನಬಸವ, ಡಾ. ಸರ್ವಮಂಗಳ ಸಕ್ರಿ, ಉಮಾದೇವಿ ಡಾ. ಮಹಲಿಂಗಪ್ಪ, ಲಲಿತಾ ಡಾ. ಬಸನಗೌಡ, ಚಂದ್ರಕಲಾ ಪಾಟೀಲ, ಸುನಂದ ಪಾಟೀಲ, ಸರ್ವಮಂಗಳಾ ಹಿರೇಮಠ ಉಪಸ್ಥಿತರಿದ್ದರು.
ಪಾರ್ವತೆಮ್ಮ ಮಲದಕಲ್ ಇಂದಿನ ಕಾರ್ಯಕ್ರಮದ ಪ್ರಸಾದ ವ್ಯವಸ್ಥೆ ಮಾಡಿದ್ದರು. ಜಯಶ್ರೀ ಮಹಾಜನಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪಾರ್ವತಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಪ್ರಿಯಾಂಕ ಗದ್ವಾಲ್ ಸ್ವಾಗತಿಸಿದರು. ಸುಮಂಗಲಾ ಸಕ್ರಿ ನಿರೂಪಿಸಿದರು.
ಚನ್ನಬಸವಣ್ಣ ಮಹಾಜನಶೆಟ್ಟಿ, ಜೆ. ಬಸವರಾಜ, ಶಿವಯೋಗಿ ಪಾಟೀಲ ಸೇರಿದಂತೆ ನೂರಾರು ಜನ ಶರಣ, ಶರಣೆಯರು ಭಾಗವಹಿಸಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
