ಹಾವೇರಿ:
ಬಸವ ಬಳಗದ ಅಧ್ಯಕ್ಷರಾದ ವಿ.ಜಿ. ಯಳಗೇರಿಯವರು ಮಡಿವಾಳ ಮಾಚಿ ತಂದೆಯವರ ಹೋರಾಟವನ್ನು ಹಾಗೂ ಸಮಾಜಕ್ಕೆ ನೀಡಿದ ಸಂದೇಶವನ್ನು ಮತ್ತು ವಚನಗಳ ಕಟ್ಟುಗಳನ್ನು ಉಳಿಸಲು ಮಾಚಿದೇವರ ಹೋರಾಟವನ್ನು ತಿಳಿಸಿದರು.
ಇಲ್ಲಿನ ಬಸವ ಭವನದಲ್ಲಿ ಇತ್ತೀಚಿಗೆ ಬಸವ ಬಳಗ ಹಾಗೂ ಮಡಿವಾಳ ಮಾಚಿದೇವರ ಸಮಾಜದ ವತಿಯಿಂದ ಮಡಿವಾಳ ಮಾಚೀದೇವರ ಜಯಂತಿಯನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷರಾದ ದೇವರಾಜ ಮಡಿವಾಳರ, ತಾಲೂಕಾ ಅಧ್ಯಕ್ಷ ವೀರಣ್ಣ ಮಡಿವಾಳರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗರಾಜ ಮಡಿವಾಳ ಅವರು ಆಗಮಿಸಿದ್ದರು.
ಆರಂಭದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಚರಾದ ದೇವರಾಜ ಮಡಿವಾಳ ಮಾತನಾಡಿ, ಇದೇ ರೀತಿ ಪ್ರತಿವರ್ಷವು ಮಡಿವಾಳ ಮಾಚಿದೇವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಕರೆ ನೀಡಿದರು.
ವೀರಣ್ಣ ಮಡಿವಾಳ ಅವರು ಮಡಿವಾಳ ಮಾಚಿದೇವರ ಕಾಯಕದ ಬಗ್ಗೆ ಮಾತನಾಡಿದರು. ನಾಗರಾಜ ಮಡಿವಾಳ ಅವರು ಮಾಚಿದೇವರ ಶರಣ ಸಂಕಲ್ಪವನ್ನು ತಿಳಿಸಿದರು.
ಬಸವ ಬಳಗದ ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಅವರು ಮಡಿವಾಳ ಮಾಚಿದೇವರ ವೈಚಾರಿಕ ನಿಲುವನ್ನು ಹಾಗೂ ಅವರ ಆಧ್ಯಾತ್ಮದ ನಿಲುವಿನ ಬಗ್ಗೆ ಉಪನ್ಯಾಸ ಮಾಡಿದರು. ಬಸವ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಹಿಂಚಿಗೇರಿ ಅವರು ಮಡಿವಾಳ ಅವರು ಬಸವಣ್ಣನವರ ಮೇಲಿದ್ದ ಅಪಾರ ಗೌರವ ಪ್ರೀತಿಯ ಬಗ್ಗೆ ಎಲ್ಲರಿಗೂ ವಚನಾಧಾರಿತವಾಗಿ ತಿಳಿಸಿದರು.
ಶಿವಬಸಪ್ಪ ಮುದ್ದಿ ಅವರು ಮಡಿವಾಳ ಮಾಚಿದೇವರ ಜೀವನ ಚರಿತ್ರೆಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಮಡಿವಾಳ ಮಾಚಿದೇವರ ಸಮಾಜದ ಜಿಲ್ಲಾ ಅಧ್ಯಕ್ಷರಾದ ದೇವರಾಜ ಮಡಿವಾಳ, ತಾಲೂಕಾಧ್ಯಕ್ಷರಾದ ವೀರಣ್ಣ ಮಡಿವಾಳ ಹಾಗೂ ಕರ್ನಾಟಕ ರಕ್ಷಣ ವೇಧಿಕೆ ಅಧ್ಯಕ್ಷರಾದ ನಾಗರಾಜ ಮಡಿವಾಳ ಅವರನ್ನು ಬಸವ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಕೊಟ್ರೇಶ ಬಿಜಾಪುರ ನುಡಿದರು. ಶಿವಯೋಗಿ ಬೆನ್ನೂರ ನಿರ್ವಹಿಸಿದರು. ಹನಮಂತಪ್ಪ ಮಡಿವಾಳರವರು ವಂದಿಸಿದರು. ಎಲ್ಲರೂ ವಚನ ಮಂಗಲ ಮಾಡಿದರು. ಕಾರ್ಯಕ್ರಮದಲ್ಲಿ ಮುರಿಗೆಪ್ಪ ಕಡೇಕೊಪ್ಪ, ಶಿವಾನಂದ ಅಂಗಡಿ, ಮಂಡಕ್ಕಿ, ಪುಟ್ಟಪ್ಪ, ಗಂಗಣ್ಣ ಮಸೂರ, ಹೊಸಮನಿ ಮತ್ತು ಅನೇಕರು ಉಪಸ್ಥಿತರಿದ್ದರು.
