ವಚನಗಳನ್ನು ಸವಿಯಲು ಸರಿಯಾದ ಕ್ರಮದ ಅವಶ್ಯವಿದೆ

ಶರಣತತ್ವ ಸಿದ್ಧಾಂತಗಳ ಸಕೀಲಗಳ ಒಳ ಸೂಕ್ಷ್ಮ ಸಂಬಂಧಗಳನ್ನು ಅರಿತುಕೊಂಡಿದ್ದರೆ ಮಾತ್ರವೇ ವಚನಗಳ ಅರ್ಥ, ಆಶಯಗಳನ್ನು ತಿಳಿದು ನಿಜಾನುಭೂತಿಯ ಹೊಂದಬಹುದು.

ಬೆಳಗಾವಿ

ಅಪ್ಪ ಬಸವಾದಿ ಶರಣರು ರಚಿಸಿದ ವಚನಗಳು; ನಿಷ್ಪತ್ತಿಯಾದಂಥಾ ಜ್ಞಾನಾಮೃತದ ಹಣ್ಣುಗಳು!
ಇಂತಹ ಹಣ್ಣುಗಳನ್ನು ತಿನ್ನುವುದು ಎಂದರೆ ಅದು ನಮ್ಮ ಬದುಕಿಗೆ ದೊರಕಿದ ಸೌಭಾಗ್ಯವೇ ಆಗಿದೆ.
ಸಾಮಾನ್ಯವಾಗಿ ಸಿಗುವ ಪ್ರತಿಯೊಂದು ವಿಧದ ಹಣ್ಣನ್ನು ತಿನ್ನುವುದರಲ್ಲಿಯೂ ಕೂಡಾ ಅದರದೇ ಆದ ರೀತಿಯಲ್ಲಿ ಬಿಚ್ಚಿ ಅಥವಾ ಹೆಚ್ಚಿಕೊಂಡು ತಿನ್ನಬೇಕಾಗುತ್ತದೆ. ಅದರಲ್ಲೂ ವಿಶೇಷ ರೀತಿಯ ಅಪರೂಪದ ಹಣ್ಣನ್ನು ತಿನ್ನಬೇಕಾದ ಸಂದರ್ಭದಲ್ಲಿ ಅದನ್ನು ಬಿಚ್ಚುವ, ಹೆಚ್ಚುವ ಅಥವಾ ಕಚ್ಚುವ ಸರಿಯಾದ ರೀತಿಯನ್ನ ತಿಳಿದುಕೊಂಡು ಆ ಹಣ್ಣ ಸಮರ್ಪಕವಾಗಿ ಸವಿಯ ಬೇಕಾಗುತ್ತದೆ.

ಇದೇ ಮಾದರಿಯಲ್ಲಿ ಶರಣರ ಜ್ಞಾನಾಮೃತದ ಹಣ್ಣುಗಳಾದಂಥಾ ವಚನಗಳನ್ನು ಸೂಕ್ತವಾಗಿ ಬಿಚ್ಚಿಕೊಂಡರೆ ಮಾತ್ರ ಸರಿಯಾಗಿ ರಸಪೋಲಾಗದಂತೆ ಸವಿಯಲು ಸಾಧ್ಯವಾಗುತ್ತದೆ. ಅಂದ್ರೆ ಇಲ್ಲಿ ಶರಣತತ್ವ ಸಿದ್ಧಾಂತಗಳ ಸಕೀಲಗಳ ಒಳ ಸೂಕ್ಷ್ಮ ಸಂಬಂಧಗಳನ್ನು ಅರಿತುಕೊಂಡಿದ್ದರೆ ಮಾತ್ರವೇ ವಚನಗಳನ್ನ ಪ್ರವೇಶ ಮಾಡಿ ಸರಿಯಾಗಿ ತಿಳಿದು ಅರ್ಥ ಮಾಡಿಕೊಂಡು ವಚನಾಶಯಗಳ ನಿಜದ ನೆಲೆಯ ಮುಟ್ಟಿ ಸತ್ಯಾಶ್ರಯದಲ್ಲಿ ಇದ್ದುಕೊಂಡು ನಿಜಾನುಭೂತಿಯ ಹೊಂದಬಹುದು.

ಶರಣ ತತ್ವಗಳಾದ ಅಷ್ಟಾವರಣ ಪಂಚಾಚಾರ ಕಾಯಕ ದಾಸೋಹದ ಜೊತೆಗೆ ಇಷ್ಟಲಿಂಗ ನಿಷ್ಠೆ ಷಟಸ್ಥಲ ಸಿದ್ಧಾಂತದ ಆಳ ಅಗಲಗಳ ಅರಿವು, ತನುತ್ರಯಗಳ ತಿಳಿವು, ಅವುಗಳ ನೆಲೆ ಬೆಲೆಯ ನಿಲುವು, ಗುರುಲಿಂಗಜಂಗಮದ ಅರಿವು ಆಚಾರ ಅನುಭಾವದ ವಿಕಸನದ ವಿನ್ಯಾಸ, ಪ್ರಣವದ ಪರಿಚಯ, ಪಂಚಾಕ್ಷರಿ ಮತ್ತು ಷಡಕ್ಷರಿ ಮಂತ್ರಗಳು; ಶರೀರ/ ತನು/ ಕಾಯದೊಳಗವು ಕ್ರಿಯಾಶೀಲವಾಗಿ ಪರಿಣಾಮ ಬೀರುವ ವಿವರಗಳು ಹೀಗೆ ಹತ್ತು ಹಲವು ಲಿಂಗಾಯತ ಸಂಬಂಧಿ ಸಂಗತಿಗಳನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾದಲ್ಲಿ ಹಾಗೂ ಶರಣರು ವಿಶೇಷವಾಗಿ ಪರಿಭಾವಿಸಿ ರೂಪಿಸಿಕೊಂಡ ವಚನದ ಪರಿಭಾಷೆ ಇವನ್ನೆಲ್ಲಾ ಕೂಲಂಕಷವಾಗಿ ಅರಿತುಕೊಂಡಿದ್ದರೆ ವಚನಗಳು ಬೇಗ ದಕ್ಕುತ್ತವೆ. ಆಗ ಅದನ್ನೇ ಇಲ್ಲಿ ಒಂದಷ್ಟು ಪರಿಭಾವನೆಗೆ ತಂದು ಹಸಿವುಳ್ಳವರಿಗೆ ಹಂಚಿ ದಾಸೋಹವನ್ನು ಮಾಡಬಹುದಾಗಿದೆ.

ಈ ಕ್ರಮದಲ್ಲಿ ಶರಣರ ವಚನಗಳ ಹೊಸ ಓದನ್ನ ಹಂಬಲ ಹೊಂದಿದ ಆಸಕ್ತಿ ಉಳ್ಳವರು ಪ್ರಯತ್ನ ಮಾಡಿ ನೋಡಲಿ ಎನ್ನುವುದಷ್ಟೇ ನನ್ನ ಕಾಳಜಿ ಆಗಿದೆ.

Share This Article
Leave a comment

Leave a Reply

Your email address will not be published. Required fields are marked *