ದಾವಣಗೆರೆ
ಆಧುನಿಕ ಸಮಾಜದಲ್ಲಿ ಆಸ್ತಿ, ಹಣ, ಅಧಿಕಾರ, ಜಾತಿ, ಧರ್ಮಕ್ಕಾಗಿ ಸಂಘರ್ಷ ಹೆಚ್ಚಾಗಿವೆ. ಈ ಕದನ ತಪ್ಪಿಸಲು ವಚನಗಳ ಅನುಷ್ಠಾನವಾಗಬೇಕು ಎಂದು ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ದೊಡ್ಡಪೇಟೆಯ ವಿರಕ್ತಮಠದಲ್ಲಿ ಬಸವಕೇಂದ್ರ, ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನಡೆದ ವಚನಾನುಷ್ಠಾನ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ-ದೇಶಗಳ ನಡುವಿನ ಯುದ್ಧಗಳನ್ನು ಅಂತ್ಯಗೊಳಿಸಲು ವಚನಗಳ ಪಾಲನೆ ಅವಶ್ಯವಿದೆ. ಬಸವಾದಿ ಶರಣರ ವಚನ ನಮಗೆ ಪಚನವಾದರೆ ಕದನವೇ ಇರುವುದಿಲ್ಲ ಬದಲಾಗಿ ಸ್ವರ್ಗ ಸೃಷ್ಟಿಯಾಗುತ್ತದೆ ಎಂದರು.
ಜೀವಂತ ಆಗಿರುವಾಗಲೇ ಸ್ವರ್ಗ-ನರಕವನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎಂಬುದನ್ನು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಬಸವಣ್ಣನವರ ವಚನ ಹೇಳುತ್ತದೆ. ವಚನಗಳನ್ನು ಓದುವುದು ಮಾತ್ರವಲ್ಲದೇ ಬದುಕಿನಲ್ಲಿ ಪಾಲಿಸಬೇಕು. ವಚನಗಳಲ್ಲಿನ ಅರಿವು, ಆಚಾರ, ಅನುಭಾವದಿಂದ ವ್ಯಕ್ತಿತ್ವದಲ್ಲಿ ಸುಧಾರಣೆ ಕಾಣಬಹುದು ಎಂದು ಸಲಹೆ ನೀಡಿದರು.
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ… ಈ ಸಪ್ತಶೀಲ ವಚನ ಪಾಲಿಸಿದರೆ ಬದುಕು ಭವ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡುತ್ತ, ದಾವಣಗೆರೆಯ ಮಣ್ಣಿಗೆ ವಿಶೇಷ ಗುಣ ಇದೆ. ವಚನ ಚಳುವಳಿಗೆ ಈ ನೆಲವು ಸಾಕಷ್ಟು ಕೊಡುಗೆ ನೀಡಿದೆ. ಮುರುಘಾಮಠವೂ ವಚನ ಚಳವಳಿಗೆ ಪ್ರೋತ್ಸಾಹ ನೀಡಿದೆ.
ವಚನಗಳನ್ನು ರಚಿಸಿದಂತೆ ಅವುಗಳನ್ನು ಉಳಿಸುವುದೂ ಶ್ರೇಷ್ಠ ಕಾರ್ಯವಾಗಿದೆ. ವಚನಗಳು ಜೀವನಾಮೃತವಿದ್ದಂತೆ. ಒಂದೊಂದು ವಚನಗಳಲ್ಲೂ ಜೀವನ ಪ್ರೀತಿ, ಸನ್ಮಾರ್ಗದ ಪಾಠವಿದೆ. ಅವುಗಳ ಅಧ್ಯಯನದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಯುವಜನತೆ ಒತ್ತಡ, ಮಾನಸಿಕ ತಳಮಳದಿಂದ ಬಳಲುತ್ತಿದೆ. ವಚನ ಸಾಹಿತ್ಯ, ಮಹಾತ್ಮರ ಆತ್ಮಚರಿತ್ರೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮೊಬೈಲ್ ಬಿಟ್ಟು ಅಧ್ಯಯನ, ಕ್ರೀಡೆಯಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತಾಡುತ್ತ, ಯುವಜನತೆ ನಟರು, ಕ್ರಿಕೆಟ್ ಆಟಗಾರರ ಮೇಲೆ ಅತಿಯಾದ ಅಭಿಮಾನ ಹೊಂದುವುದು ಸರಿಯಲ್ಲ. ಶ್ರಮವಹಿಸಿ ಅಭ್ಯಾಸದಲ್ಲಿ ತೊಡಗಿದರೆ ಸರ್ಕಾರ ಮಾತ್ರವಲ್ಲದೇ ಆಯಾ ಸಮುದಾಯಗಳೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದರು.
ಭಕ್ತಿಯ ನಾಡು, ದಾನದ ತವರೂರು, ಕೈಗಾರಿಕೆ, ವ್ಯಾಪಾರೋದ್ಯಮಕ್ಕೆ ಹೆಸರಾದ ದಾವಣಗೆರೆಯಲ್ಲಿನ ವಿರಕ್ತಮಠದಲ್ಲಿ ತಿಂಗಳಿಡೀ ಪ್ರವಚನ ನಡೆಯಲಿದೆ. ಹೆಚ್ಚಿನ ಭಕ್ತರು ಭಾಗವಹಿಸಬೇಕು ಎಂದು ಪ್ರವಚನಕಾರ ಬಿ.ಎಂ. ಪಂಚಾಕ್ಷರಿ ಶಾಸ್ತ್ರೀ ಮನವಿ ಮಾಡಿದರು.
ಮುಖಂಡರಾದ ಎಂ. ಜಯಕುಮಾರ, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಹಾಸಭಾವಿ ಕರಿಬಸಪ್ಪ, ಚಿಗಟೇರಿ ಜಯದೇವ, ವೀರಯ್ಯ ಕಾಡದೇವರಮಠ, ನಾಸೀರ್ ಅಹ್ಮದ್ ಮತ್ತಿತರರು ಇದ್ದರು.