ದಾವಣಗೆರೆ
೧೨ನೇ ಶತಮಾನದ ಬಸವಾದಿ ಶರಣರ ವಚನಗಳು ಮನು ಕುಲದ ‘ಸಾರ್ಥಕ ಬದುಕಿಗೆ ದಾರಿ ದೀಪಗಳಾಗಿವೆ’ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಭರಮಪ್ಪ ಮೈಸೂರು ತಿಳಿಸಿದರು.
ನಗರದ ಭದ್ರಾ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ, “ಲಿಂ. ಶ್ರೀಮತಿ ಇಂದುಮತಿ ಎಂ. ಪಾಟೀಲ” ದತ್ತಿ ಉಪನ್ಯಾಸ ಮತ್ತು ಶರಣ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ “ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಶರಣರು ನುಡಿದಂತೆ ನೆಡೆದರಲ್ಲದೆ, ಸತ್ಯಶುದ್ಧ ಕಾಯಕ, ದಾಸೋಹ ಸಂಸ್ಕೃತಿಯೊಂದಿಗೆ ಸಮಸಮಾಜ ನಿರ್ಮಾಣದ ಚಿಂತನೆ ಹೊಂದಿದ್ದರು ಎಂದು ತಿಳಿಸಿದರು.
ಭದ್ರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಿ. ಚಂದ್ರಪ್ಪ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿನ ಸಮಾಜದ ತಲ್ಲಣಗಳಿಗೆ, ಸಮಸ್ಯೆಗಳಿಗೆ ಶರಣರ ವಚನಗಳು ಸೂಕ್ತ ಪರಿಹಾರ ವಾಗಬಲ್ಲವು. ನಮ್ಮ ಜೀವನದಲ್ಲಿ ವಚನಗಳ ಸಾರವನ್ನು ಅಳವಡಿಸಿಕೊಂಡರೆ ನೆಮ್ಮದಿಯ ಬದುಕಿಗೆ ಮಾರ್ಗದರ್ಶಿಯಾಗಬಲ್ಲವು ಎಂದು ಅಭಿಪ್ರಾಯ ಪಟ್ಟರು.

ದತ್ತಿ ದಾನಿಗಳ ಪರವಾಗಿ ರಾಜೇಶ್ ಎಸ್. ಅಕ್ಕಿಹಾಳ ಅವರು, ನಮ್ಮ ತಾಯಿಯವರ ಹೆಸರಲ್ಲಿ ದತ್ತಿ ಕಾರ್ಯಕ್ರಮ ಏರ್ಪಡಿಸಿ ಶರಣರ ಮೌಲ್ಯಗಳನ್ನು ಜನಮಾನಸದಲ್ಲಿ ಹರಡುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಚ್.ಕೆ ಲಿಂಗರಾಜು, ಮಕ್ಕಳಿಗೆ ಬಹುಮಾನ ವಿತರಿಸಿ ಮಕ್ಕಳು ವಿದ್ಯಾರ್ಥಿ ದಿಸೆಯಿಂದ ವಚನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉತ್ತಮ ಪ್ರಜೆಗಳಾಗಬೇಕೆಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮನೆಯಂಗಳದಲ್ಲಿ, ಶಾಲಾ ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ ಮತ್ತು ಇತರೆ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಆರ್. ಸಿದ್ದೇಶಪ್ಪ ದತ್ತಿ ದಾನಿಗಳ ಪರಿಚಯ ಮಾಡಿದರು, ಉಪನ್ಯಾಸಕರಾದ ಸುಮ ಇವರು ಸ್ವಾಗತಿಸಿದರು, ಜಿ.ಎಂ ಕುಮಾರಪ್ಪ ವಂದಿಸಿದರು, ಬಿ.ಟಿ. ಪ್ರಕಾಶ ವಚನ ಮಂಗಲ ಹಾಡಿದರು ಹಾಗೂ ಎಂ. ನಾಗರಾಜು ಕಾರ್ಯಕ್ರಮವನ್ನು ನಿರೂಪಿಸಿದರು.