ಹೊನ್ನಾಳಿ
ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಜಗದ್ಗುರು ಡಾ. ಶ್ರೀ ರಾಜೇಂದ್ರ ಮಹಾಸ್ವಾಮಿಗಳ 110ನೇ ಜಯಂತೋತ್ಸವ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
“12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಎಂಬುದು ಅತ್ಯಂತ ಭಯಂಕರವಾಗಿತ್ತು. ಮೇಲ್ವರ್ಗ ಕೆಳವರ್ಗ ಮತ್ತು ಅದರಲ್ಲಿ ಅಂತ್ಯಜ ಎಂಬ ಶ್ರೇಣಿಕೃತ ಸ್ಥರಗಳಿದ್ದವು. ಇದನ್ನು ನೋಡಿದ ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ತಿರುಗಿಬಿದ್ದು ಒಂದು ಬಹುದೊಡ್ಡ ಕ್ರಾಂತಿ ಮಾಡಿದರು.
ಮನುಷ್ಯರೆಲ್ಲ ಒಂದೇ. ಜಾತಿ, ತಾರತಮ್ಯ ಎಂಬುದು ಇಲ್ಲ ಎಂದು ಹೇಳಿ ತಾರತಮ್ಯಕ್ಕೆ ಒಳಗಾದ ಜಾತಿಯವರನ್ನು ಒಂದುಗೂಡಿಸಿ ಅನುಭವ ಗೋಷ್ಠಿಯನ್ನು ನಡೆಸುವ ಬಹುದೊಡ್ಡ ವೇದಿಕೆ ಅನುಭವ ಮಂಟಪವನ್ನು ರಚಿಸಿದರು” ಎಂದು ಅನುಭಾವ ನೀಡಿದ ಉಪನ್ಯಾಸಕ ಮಂಜುನಾಥ ಗೊಲ್ಲರಹಳ್ಳಿ ತಿಳಿಸಿದರು.

“ಜ್ಞಾನ ಎಂಬುದೊಂದಿದ್ದರೆ ಮನುಷ್ಯನಿಗೆ ಎಲ್ಲವೂ ಸರಿಯಾಗುತ್ತದೆ. ಇಂತಹ ಜ್ಞಾನವನ್ನು ತುಂಬಿದ ವಚನಗಳಿಗೆ ನಮ್ಮ ಇಡೀ ಜೀವನವನ್ನೇ ತಿದ್ದುವಂತಹ ಶಕ್ತಿ ಇದೆ. ವಚನಕಾರರು ಬಹಳ ಶ್ರೇಷ್ಠ ವಿಷಯಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಹೇಳುವುದರಲ್ಲಿ ನಿಪುಣರು. ಅಂತಹ ವಚನಗಳನ್ನು ಕೇಳುವ ಮನಸಿದ್ದವರಿಗೆ ಮಾತ್ರ ಅರ್ಥವಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ. ಪ್ರವೀಣ್ ದೊಡ್ಡ ಗೌಡ್ರು ತಿಳಿಸಿದರು.
ಗೌಡ್ರು ಹನುಮಂತಪ್ಪ ಮತ್ತು ಗಿರಿಜಮ್ಮ ಪೊಲೀಸಗೌಡ್ರು ಅರಕೆರೆ ಮತ್ತು ಲಿಂಗೈಕ್ಯ ಬಸಮ್ಮ ಮತ್ತು ಲಿಂಗೈಕ್ಯ ಮುದಿಗೌಡ್ರ ದೊಡ್ಡಬಸಪ್ಪ ಸ್ಮರಣಾರ್ಥ ಸ್ಥಾಪಿಸಿದ ದತ್ತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸಂಗನಾಳ್ಮಠ ವಿವಿಧ ಸಾಹಿತ್ಯ ಪ್ರಕಾರಗಳ ಬಗ್ಗೆ ತಿಳಿಸಿಕೊಟ್ಟರು.
ದತ್ತಿನಿಧಿ ಸ್ಥಾಪಕರಾದ ಶಾರದಾ ಕಣಗೊಟಗಿ, ಶೋಭಾ ರುದ್ರೇಶ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು ನೆರವೇರಿಸಿದರು.
ಕತ್ತಿಗೆ ನಾಗರಾಜ್ ಉಪಸ್ಥಿತರಿದ್ದ ಈ ಕಾರ್ಯಕ್ರಮಕ್ಕೆ ಹೊನ್ನಾಳಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲೋಕೇಶ್ ಎಂ. ಆರ್ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯದರ್ಶಿಗಳಾದ ನಾಗೇಶ್ ಕೆ. ಸ್ವಾಗತಿಸಿದರು. ಡಾ ಬಸವರಾಜ್ ವಂದಿಸಿದರು.
ಉಪನ್ಯಾಸಕ ಸತೀಶ್ ಎ. ಕತ್ತಿಗೆ ನಿರೂಪಿಸಿದರು. ಡಾ. ಪ್ರತಿಮಾ ನಿಜಗುಣ ಶಿವಯೋಗಿ ಸಾಮೂಹಿಕವಾಗಿ ವಚನ ಗಾಯನವನ್ನು ನಡೆಸಿಕೊಟ್ಟರು.