ಲಿಂಗಸುಗೂರು:
ಪಟ್ಟಣದಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ ನಿಮಿತ್ತ, ಶ್ರೀಗಳ ಭಾವಚಿತ್ರ, ವಚನ ಗ್ರಂಥಗಳು, ವಚನ ತಾಡೋಲೆ ಕಟ್ಟಿನ ಪಲ್ಲಕ್ಕಿ ಮೆರವಣಿಗೆ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ವಚನ ಗ್ರಂಥಗಳು, ವಚನ ತಾಡೋಲೆಗಳ ಪಲ್ಲಕ್ಕಿಗೆ ವಚನ ಪಠಣದ ಮೂಲಕ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ದಾವಣಗೆರೆಯ ಬಸವ ಕಲಾಲೋಕದ ವಚನ ಗೀತೆಗಳು, ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು.


ಇಳಕಲ್ಲ ಗುರುಮಹಾಂತಪ್ಪ ಸ್ವಾಮೀಜಿ, ಡಾ. ಬಸವಲಿಂಗ ಸ್ವಾಮೀಜಿ, ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ, ಸಿದ್ದಲಿಂಗ ಶ್ರೀಗಳು, ಅಮರೇಗೌಡ ಬಯ್ಯಾಪುರ, ಭೂಪನಗೌಡ ಪಾಟೀಲ, ಗಿರಿಮಲ್ಲನಗೌಡ ಪಾಟೀಲ, ಕೆ. ನಾಗಭೂಷಣ, ಶಿವಪ್ಪ ಸಕ್ರಿ, ಶಿವಾನಂದ ಐದನಾಳ, ಸೋಮಶೇಖರ ಬಳಗಾನೂರ, ದೊಡ್ಡಪ್ಪ ಸಾಹುಕಾರ, ವಿಶ್ವನಾಥ ಅನ್ವರಿ, ಚೆನ್ನಮ್ಮ ಸಕ್ರಿ, ಡಾ. ಗಂಗಮ್ಮ ಸತ್ಯಂಪೇಟೆ, ಅಶ್ವಿನಿ ಮಿಟ್ಟಿಮನಿ, ಸುಮಿತ್ರ ಪಾಟೀಲ, ಶೇಖರಪ್ಪ ಇಜೇರಿ, ಸಂಗಮೇಶ ಚರಕಿ, ಈರಣ್ಣ ಹುರಕಡ್ಲಿ ಮತ್ತಿತರರು ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ, ಎಂಎ ಅರ್ಥಶಾಸ್ತ್ರ ವಿಭಾಗದಲ್ಲಿ ರಾಯಚೂರು ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಶಾಂತಲಾ ಹಿರೇಮಠ ಮತ್ತು ರಾಷ್ಟ್ರೀಯ ಹ್ಯಾಂಡ್ ಬಾಲ್ ಕ್ರೀಡಾಪಟು ಎಸ್. ಕೆ. ಚಿನ್ಮಯಿ ಅವರನ್ನು ಸನ್ಮಾನಿಸಲಾಯಿತು.


 
							 
			     
			
 
                                