ವೈದಿಕ ಆಚರಣೆ ಬಿಟ್ಟು ಲಿಂಗಾಯತ ನಿಜಾಚರಣೆ ಪಾಲಿಸಿ: ಪಾಂಡೋಮಟ್ಟಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ವೈದಿಕ ಆಚರಣೆಯನ್ನು, ಮೌಡ್ಯ, ಕಂದಾಚಾರಗಳನ್ನು ಬಿಟ್ಟು ಧರ್ಮಗುರು ಬಸವಣ್ಣನವರ ತತ್ವ, ಸಿದ್ಧಾಂತ ಮೌಲ್ಯಗಳು, ಲಿಂಗಾಯತ ನಿಜಾಚರಣೆಗಳನ್ನು ಅನುಷ್ಠಾನಗೊಳಿಸುವಂತೆ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಕರೆ ನೀಡಿದರು.

ನಗರದ ಜೆ.ಹೆಚ್. ಪಟೇಲ ಬಡಾವಣೆಯಲ್ಲಿರುವ ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಅರಿವಿನ ಮಹಾಮನೆ’ ಉದ್ಘಾಟನೆ, ವಾರ್ಷಿಕೋತ್ಸವ ಹಾಗೂ ಶರಣರ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಯಾವ ದೋಷಗಳಿಲ್ಲದ್ದು ಲಿಂಗಾಯತ ಧರ್ಮ. ಮನೆಯಲ್ಲಿ ತಂದೆ-ತಾಯಿಗಳು ಲಿಂಗಾಯತ ಧರ್ಮಾಚರಣೆಗಳನ್ನು ಚಾಚೂತಪ್ಪದೇ ಪಾಲಿಸಿದರೆ ಮಕ್ಕಳು ಸಹ ಅನುಕರಣೆ ಮಾಡುತ್ತಾರೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರ ನೀಡುವುದು ಪೋಷಕರ ಕರ್ತವ್ಯ ಎಂದು ಹೇಳಿದರು.

ಸಾಹಿತಿ ಜಿ.ಕೆ. ಕುಲಕರ್ಣಿ ಅವರು ‘ವಚನಗಳಲ್ಲಿ ಆಹಾರ ಪ್ರಜ್ಞೆ’ ಕುರಿತು ಮಾತನಾಡಿ, ಪಾರಮಾರ್ಥಿಕತೆಯ ಬಗೆಗೆ ಯಾವ ರೀತಿಯಾದ ಚಿಂತನೆ ವಚನಗಳಲ್ಲಿ ಕಂಡು ಬರುತ್ತದೆಯೋ ಹಾಗೆ ಲೌಕಿಕದ ಬಗೆಗೂ ವಚನಗಳಲ್ಲಿ ಕಂಡು ಬರುತ್ತದೆ. ಅನ್ನ ಆಹಾರ ಆರೋಗ್ಯದ ಅರ್ಥದ ಬಗೆಗೆ ವಚನಗಳಲ್ಲಿ ಮಾಹಿತಿಯನ್ನು ಕಾಣಬಹುದು ಎಂದರು.

ವಚನಗಳಲ್ಲಿ ಅಪಾರವಾದ ಅನುಕಂಪವಿದೆ. ಜಗತ್ತನ್ನು ದುಃಖದಿಂದ ಮುಕ್ತಗೊಳಿಸಬೇಕು ಎನ್ನುವ ಬಯಕೆ ಇದೆ. ದೀನರು ದಲಿತರನ್ನು ತನ್ನವರೆಂದು ಒಪ್ಪಿಕೊಳ್ಳುವ ಆತ್ಮೀಯತೆ ಇದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ದಿಟ್ಟತನವಿದೆ ಎಂದರು.

ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮಾಸ್ತರ್, ಗೌರವಾಧ್ಯಕ್ಷೆ ಮಂದಾಕಿನಿ ಸ್ವಾಮಿ, ಜಿಲ್ಲಾಧ್ಯಕ್ಷ ಅವರಗೆರೆ ರುದ್ರಮುನಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿ ಜಾಗತಿಕ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕುಸುಮಾ ಲೋಕೇಶ ಮಾತನಾಡಿದರು. ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ವಿನೋದ ಅಜಗಣ್ಣನವರ ಒಕ್ಕಲಿಗ ಮುದ್ದಣ್ಣ, ಮಾದಾರ ಚೆನ್ನಯ್ಯ ಶರಣರ ಸ್ಮರಣೆ ಮಾಡಿದರು.

ಪೂರ್ಣಿಮಾ ಪ್ರಸನ್ನಕುಮಾರ ಮತ್ತು ತಂಡದವರು ವಚನ ಪ್ರಾರ್ಥನೆ ಮಾಡಿದರು. ಪ್ರೇಮಾ ಮಂಜುನಾಥ ಸ್ವಾಗತಿಸಿದರು. ನಿರ್ಮಲ ಶಿವಕುಮಾರ ನಿರೂಪಿಸಿದರು. ಅಮರಕಲಾ ಹಿರೇಮಠ ವಂದಿಸಿದರು.

ಬಿಟಿ ಪ್ರಕಾಶ್ ಮತ್ತು ಸಂಗಡಿಗರು ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ವೀಣಾ ಮಂಜುನಾಥ ಬಹುಮಾನ ವಿತರಿಸಿದರು. ಕುಸುಮಾ ಲೋಕೇಶ ಅವರಿಂದ ದಾಸೋಹ ಸೇವೆ ನೆರವೇರಿತು.

Share This Article
Leave a comment

Leave a Reply

Your email address will not be published. Required fields are marked *