ಕುರಕುಂದಿಯಲ್ಲಿ ವೀರಭದ್ರಪ್ಪ ಶರಣರ ನೆನಹು ಕಾರ್ಯಕ್ರಮ
ಸಿಂಧನೂರು
ಬಸವಾದಿ ಶರಣರ, ವಚನಗಳ ನಿಜಾಚರಣೆಗಳನ್ನು ಮೈಗೂಡಿಸಿಕೊಂಡು ಬಸವತತ್ವ ಪ್ರಚಾರದಲ್ಲೇ ತಮ್ಮ ಜೀವನ ಸವೆಸಿದ ಶರಣ ಪಿ. ವೀರಭದ್ರಪ್ಪ ಕುರಕುಂದಿ ನುಡಿ-ನಡೆಗಳಲ್ಲಿ ಒಂದಾಗಿದ್ದರು ಎಂದು ಹಿರಿಯ ಅನುಭಾವಿ ಅಶೋಕ ಬರಗುಂಡಿ ಹೇಳಿದರು.
ಬಸವಕೇಂದ್ರದ ರಾಯಚೂರು ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಲಿಂಗೈಕ್ಯರಾದ ಹಿನ್ನಲೆಯಲ್ಲಿ ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅವರು ನೆನಹು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವತತ್ವವನ್ನು ಮೂದಲಿಸುವವರದು ಲಿಂಗದ್ರೋಹ, ಜಂಗಮ ದ್ರೋಹವಾಗಲಿದೆ. ಶರಣ ವೀರಭದ್ರಪ್ಪ ತಮ್ಮ ಮನೆ, ವ್ಯವಹಾರ ಬಿಟ್ಟು ಬಸವಾದಿ ಶರಣರ ವಿಚಾರಧಾರೆಗಳನ್ನು ಹೊತ್ತು ಜಂಗಮರಾಗಿ ರಾಜ್ಯಾದದ್ಯಂತ ಪ್ರಚಾರ ಮಾಡಿದರು, ವಚನಗಳ ಸುಗಂಧದ ಪರಿಮಳ ಎಲ್ಲೆಡೆ ಬೀರಿದರು ಎಂದು ಹೇಳಿದರು.
ವಿವಿಧ ಮಠಾಧೀಶರು ತಮ್ಮ ಮಠದ ಕೆಲಸ ಮಾಡುತ್ತಿದ್ದಾರೆ. ಪುಣ್ಯತಿಥಿ, ಪುಣ್ಯಾರಾಧನೆ, ಜಾತ್ರೆ, ಉತ್ಸವಗಳನ್ನು ಮಾಡುತ್ತಾ, ತಮ್ಮ ಅಸ್ತಿತ್ವಕ್ಕಾಗಿ, ಪ್ರತಿಷ್ಠೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ಲಿಂಗಾಯತ ಧರ್ಮ ಉಳಿಸುವರ‍್ಯಾರು? ಈ ಧರ್ಮದ ಆಚರಣೆಗಳನ್ನು ಯುವ ಪೀಳಿಗೆಗೆ ಕೊಂಡೋಯ್ಯುವರ‍್ಯಾರು? ಗೃಹಸ್ಥಾಶ್ರಮದಲ್ಲಿದ್ದುಕೊಂಡು ವೀರಭದ್ರಪ್ಪ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಕೊಂಡಾಡಿದ ಅವರು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವಿಂದು ನಡೆಯಬೇಕಿದೆ ಎಂದರು.
ಡಬ್ಬೇರಮಡ್ಗು ದೇವಾನಂದ ಶರಣರು ಮಾತನಾಡಿ, ಶರಣರು ಮೃತಪಟ್ಟ ಸಮಯದಲ್ಲಿ ದುಖಿಃಸಬಾರದು, ಕಣ್ಣೀರು ಸುರಿಸಬಾರದು. ಏಕೆಂದರೆ ಶರಣರ ಆತ್ಮ ಇಂತಹ ಕಣ್ಣೀರನ್ನು ಒಪ್ಪುವುದಿಲ್ಲ. ಅವರ ಆದರ್ಶಗಳನ್ನು ಪಾಲಿಸಲು ದೃಢನಿರ್ಧಾರ ಕೈಗೊಳ್ಳಬೇಕು.
ಮನುಷ್ಯ ತಾನು ಯಾರು ಎಂಬುವುದನ್ನು ತಿಳಿಯುವುದಕ್ಕಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರೀತಿ ಮತ್ತು ನಿಂದನೆಯನ್ನು ಮೀರಿದ ವ್ಯಕ್ತಿಗಳು ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿ ವೀರಭದ್ರಪ್ಪ ಕುರುಕುಂದಿ ಇದ್ದರು ಎಂದರು.
ವೀರಭದ್ರಯ್ಯಸ್ವಾಮಿ ಜಾಡಲದಿನ್ನಿ ಸೇರಿದಂತೆ ಹಲವು ಮಠಾಧೀಶರು, ವೀರಭದ್ರಪ್ಪ ಅವರ ಹಿತೈಷಿಗಳು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಅವರ ಕಾಯಕ ನಿಷ್ಠೆ, ಬಸವತತ್ವ ಪ್ರಸಾರಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ ತ್ಯಾಗ, ಮೂಢನಂಬಿಕೆಗಳ ವಿರುದ್ಧ, ಏಕದೇವೋಪಾಸನೆ ಬದ್ಧತೆ ಬಗ್ಗೆ ಅವರಿಗಿದ್ದ ನಿಷ್ಠುರ ಮನೋಭಾವ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶಿರೂರಿನ ಬಸಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿಗಳು, ದೇವಾನಂದ ಶರಣರು, ವೆಂಕಟಾಪುರ ಶರಣರು, ಶರಣೆ ಅಕ್ಕಮಹಾದೇವಿ, ಶರಣೆ ಈರಮ್ಮ, ಶರಣೆ ಗಂಗಮ್ಮ ವೀರಭದ್ರಪ್ಪ ಕುರುಕುಂದಿ, ಶೇಖರಪ್ಪ ಮೇಣದಾಳ, ನಾಗಭೂಷಣ ನವಲಿ, ಸಿದ್ರಾಮಪ್ಪ ಮಾಡಶಿರವಾರ, ಗುಂಡಪ್ಪ ಬಳಿಗಾರ, ಕರೇಗೌಡ ಕುರಕುಂದಿ, ಶಾಂತಪ್ಪ ಚಿಂಚರಿಕಿ, ಶರಣಪ್ಪ ತೆಂಗಿನಕಾಯಿ, ಪಂಪಯ್ಯ ಸ್ವಾಮಿ ಸಾಲಿಮಠ, ಬಸಲಿಂಗಪ್ಪ ಬಾದರ್ಲಿ, ಹೆಚ್.ಜಿ. ಹಂಪಣ್ಣ ಸೇರಿದಂತೆ ಬಸವ ಅನುಯಾಯಿಯಳು, ಅಭಿಮಾನಿಗಳು ಭಾಗವಹಿಸಿದ್ದರು. ಶಂಭನಗೌಡ ಕಾರ್ಯಕ್ರಮ ನಿರೂಪಿಸಿದರು.
ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿ, ಮನಗೂಳಿಯ ವಿರತೀಶಾನಂದ ಸ್ವಾಮಿ, ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮಿ, ದಾವಣಗೆರೆಯ ಬಸವಪ್ರಭು ಸ್ವಾಮಿ, ಹಜರತ್ ಸೈಯದ್ ಹುಸೇನಸಾಹೇಬ್, ನಿಡಿಗೋಳ ಮತ್ತಿತರ ಪೂಜ್ಯರು ಸ್ಮರಣೋತ್ಸವದಲ್ಲಿ ಭಾಗವಹಿಸಿ ಲಿಂ. ವೀರಭದ್ರಪ್ಪ ಅವರ ಬಸವಸೇವೆಯನ್ನು ಸ್ಮರಿಸಿ ಕೊಂಡಾಡಿದರು.
ಚಿತ್ರದುರ್ಗದ ಮುರುಘಾ ಶ್ರೀಗಳು ಆಗಮಿಸಿ ಲಿಂಗೈಕ್ಯ ಕುರಕುಂದಿ ವೀರಭದ್ರಪ್ಪನವರ ಸಮಾಧಿಗೆ ಪುಷ್ಪಮಾಲೆ ಅರ್ಪಿಸಿ ಗೌರವ ನಮನ ಸಲ್ಲಿಸಿ ತೆರಳಿದರು.
ಅಣ್ಣಾ ವೀರಭದ್ರಪ್ಪನವರು ಅಮರರಾದರು. ಅವರ ಆತ್ಮಚೈತನ್ಯ ನಮ್ಮನ್ನು ಸದಾ ಜಾಗೃತವಾಗಿಡಲಿ. ಶರಣು ಶರಣಾರ್ಥಿಗಳು