ಹೊಸಪೇಟೆ
ಬಸವ ಸಂಸ್ಕೃತಿಯ ಅಭಿಯಾನ 2025 ಹೊಸಪೇಟೆ ವಿಜಯನಗರ ಜಿಲ್ಲೆ. ವಿಜಯನಗರ ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಭವನದಲ್ಲಿ ಅತ್ಯಂತ ವೈಭವಯುತವಾಗಿ ನೆರವೇರಿತು.
ಪ್ರಾರಂಭದಲ್ಲಿ ಬಸವ ಬಳಗದ ತಾಯಂದಿರು ಸಿದ್ದರಾಮೇಶ್ವರ ತ್ರಿವಿಧಿ ವಚನಗಳನ್ನು ಪ್ರಾರ್ಥನೆಯನ್ನಾಗಿ ಹಾಡಿದರು.
ಸರ್ವರ ಸ್ವಾಗತವನ್ನು ವಿಜಯನಗರ ಜಿಲ್ಲಾ ಬಸವ ಸಂಸ್ಕೃತಿಯ ಅಭಿಯಾನ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಮಹಾಬಲೇಶ್ವರ ರೆಡ್ಡಿ ಅವರು ಮಾಡಿದರು.
ಶೇಗುಣಸಿ ಮಹಾಂತಪ್ರಭು ಮಹಾಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಬಸವ ಸಂಸ್ಕೃತಿ ಅಭಿಯಾನ ಸರ್ವರಲ್ಲಿಯೂ ಬಸವತತ್ವದ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹ ಅರಿವಿನ ಕಾರ್ಯವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಈ ದಿನ ಶರಣ ಧರ್ಮದ ಜಾಗೃತ ತಾಣವಾಗಿರುವ ವಿಜಯನಗರ ಜಿಲ್ಲೆಯಲ್ಲಿ ನೆರವೇರುತ್ತಿರುವುದು ನಮಗೆಲ್ಲರಿಗೂ ಸಂತೋಷಕರ ವಿಷಯವಾಗಿದೆ ಎಂದರು.

ಸಂವಾದ ಕಾರ್ಯಕ್ರಮದ ಮೊದಲು ಷಟಸ್ಥಲ ಧ್ವಜಾರೋಹಣವನ್ನು ಹೊಸಪೇಟೆ ಶಾಸಕರಾದ ಗವಿಯಪ್ಪ ಅವರು ನೆರವೇರಿಸಿದರು.
ಉದ್ಘಾಟನೆಯನ್ನು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳು ನೆರವೇರಿಸಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಮಹಾಮಹಿಮರು. ಸಮಾಜದಲ್ಲಿದ್ದ ಅನೇಕ ಭೇದಗಳನ್ನು ಹೊಡೆದಾಕಿ, ಸರ್ವರಿಗೂ ಸಮಾನತೆ ಕಲ್ಪಿಸಿದ ಮಹಾಗುರು ಬಸವಣ್ಣನವರು ಎಂದು ನುಡಿದರು.
ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅಂತರ್ಜಾತಿ ವಿವಾಹದ ಬಗ್ಗೆ, ಪ್ರಸ್ತುತ ದಿನಮಾನದ ಶರಣ ತತ್ವದ ತಲ್ಲಣಗಳ ಬಗ್ಗೆ , ಶರಣ ಸಂಸ್ಕೃತಿಯ ಅಭಿಯಾನದ ಮಹತ್ವದ ಕುರಿತು ವಿದ್ಯಾರ್ಥಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳ ಅನೇಕ ಕ್ಲಿಷ್ಟಕರವಾದ ಪ್ರಶ್ನೆಗಳಿಗೆ ವೇದಿಕೆ ಮೇಲಿರುವ ಪೂಜ್ಯರು ಸೂಕ್ತವಾಗಿ, ಸರಳವಾಗಿ ಉತ್ತರವನ್ನು ನೀಡಿದರು.
ವಚನ ಗಾಯನವನ್ನು ಸಾಣೇಹಳ್ಳಿ ಶಿವಸಂಚಾರ ತಂಡದವರು ನೆರವೇರಿಸಿದರು.

ಭಾಲ್ಕಿ ಡಾ ಬಸವಲಿಂಗ ಪಟ್ಟದೇವರು, ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ವಿರತೀಶಾನಂದ ಸ್ವಾಮಿಗಳು, ಗುರುಬಸವ ಪಟ್ಟದ್ದೇವರು, ಸಾಹಿತಿ ಕುಂ. ವೀರಭದ್ರಪ್ಪ, ವೀ.ಲಿಂ. ಮಹಾಸಭಾದ ಶ್ರೀನಿವಾಸರೆಡ್ಡಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಸವ ಕಿರಣ, ಪ್ರಾಚಾರ್ಯ ಪ್ರಭುಗೌಡ ಮತ್ತಿತರರು ವೇದಿಕೆಯಲ್ಲಿದ್ದರು.
ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಅಧ್ಯಕ್ಷರಾದ ಮಹಾಬಲೇಶ್ವರರೆಡ್ಡಿ, ಸಂಚಾಲಕರಾದ ಡಾ. ಬಿ. ಎಚ್. ಬಸವರಾಜ, ಡಾ. ಕೆ. ರವೀಂದ್ರನಾಥ, ಮಾವಿನಹಳ್ಳಿ ಬಸವರಾಜ, ಮಧುರಚೆನ್ನ ಶಾಸ್ತ್ರಿ, ಅಕ್ಕಿ ಮಲ್ಲಿಕಾರ್ಜುನ, ಡಾ. ಅಜಯ ತಾಂಡೂರ, ಯುವರಾಜ, ಡಾ. ನಂದೀಶ್ವರ ದಂಡೆ, ಮೀನಾಕ್ಷಿ ಜಂಗಮನಿ, ಸೌಭಾಗ್ಯ ಲಕ್ಷ್ಮಿ, ಬಸವ ಅಭಿಮಾನಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯುವಕರು, ಹಿರಿಯರು ಭಾಗವಹಿಸಿದ್ದರು.