ವಿಜಯೇಂದ್ರ ಪರ ಪೇಮೆಂಟ್ ಸ್ವಾಮೀಜಿಗಳು, ಲಿಂಗಾಯತರು ಬಿ.ಎಸ್.ವೈ ಜೊತೆಯಿಲ್ಲ: ಯತ್ನಾಳ್

ಬಸವ ಮೀಡಿಯಾ
ಬಸವ ಮೀಡಿಯಾ

ಯಡಿಯೂರಪ್ಪ ಕುಟುಂಬಕ್ಕೆ ಹಿನ್ನಡೆಯಾದರೆ ಮುಂದಿನ ಲಿಂಗಾಯತ ನಾಯಕನಾಗಿ ಬಿಂಬಿಸಿಕೊಳ್ಳಲು ಸಣ್ಣ ಪೈಪೋಟಿಯೂ ಶುರುವಾಗಿದೆ.

ನವದೆಹಲಿ

‘ಬಿ.ವೈ. ವಿಜಯೇಂದ್ರ ಜತೆಗೆ ಇಬ್ಬರು ಮೂವರು ಪೇಮೆಂಟ್‌ ಸ್ವಾಮೀಜಿಗಳಿದ್ದಾರೆ ಅಷ್ಟೇ. ಅವರಿಗೆ ಒಂದು ಲಕ್ಷ ಕೊಟ್ಟರೆ ಒಂದು ಸ್ಟೇಟ್‌ಮೆಂಟ್ ಕೊಡ್ತಾರೆ,’ ಎಂದು ಬುಧವಾರ ಬಿಜೆಪಿ ರೆಬೆಲ್‌ ಶಾಸಕ ಬಸನಗೌಡ ಪಾಟೀಲ್‌ ಹೇಳಿದರು.

ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಬಿ.ಎಸ್‌.ಯಡಿಯೂರಪ್ಪ ಪರವಾಗಿ ಎಲ್ಲ ಲಿಂಗಾಯತರು ಇಲ್ಲ. ಯಡಿಯೂರಪ್ಪ ಲಿಂಗಾಯತ ನಾಯಕರನ್ನು ತುಳಿಯುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಬಸವರಾಜ ಪಾಟೀಲ ಸೇಡಂ, ಬಿ.ಬಿ.ಶಿವಪ್ಪ, ಜಿ.ಎಂ. ಸಿದ್ದೇಶ್ವರ, ಮಲ್ಲಿಕಾರ್ಜುನಯ್ಯ ಅವರನ್ನು ಮುಗಿಸಿದರು. ನನ್ನನ್ನು ಮುಗಿಸಲು ಸತತ ಪ್ರಯತ್ನ ಮಾಡಿದರು,’ ಎಂದರು.

ಲಿಂಗಾಯತ ಮತಬ್ಯಾಂಕ್‌

ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡುತ್ತಿರುವ ಯತ್ನಾಳ್‌ ತಂಡಕ್ಕೆ ವಿಜಯೇಂದ್ರ ಬದಲಾವಣೆ ಮಾಡಿದರೆ ಲಿಂಗಾಯತ ಮತಬ್ಯಾಂಕ್‌ ಛಿದ್ರವಾಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಉತ್ತರವಾಗಿ ಫೆಬ್ರವರಿ 10ರಂದು ದೆಹಲಿಯಲ್ಲಿ ಬಿಜೆಪಿ ಲಿಂಗಾಯತ ನಾಯಕರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ.

ಅಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಅಧಿಕೃತ ದಿಲ್ಲಿ ನಿವಾಸದ ಗೃಹಪ್ರವೇಶವಿದೆ. ಹೀಗಾಗಿ ರಾಜ್ಯದ ಎಲ್ಲ ನಾಯಕರಿಗೂ ಆಹ್ವಾನ ನೀಡಲಾಗಿದೆ. ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರ ಹೊರತುಪಡಿಸಿ ಎಲ್ಲ ಲಿಂಗಾಯತ ನಾಯಕರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ಲಿಂಗಾಯತ ನಾಯಕತ್ವ ಯಡಿಯೂರಪ್ಪ ಕುಟುಂಬದಿಂದ ಬದಲಾಗಲೇಬೇಕು ಎಂಬ ಪ್ರಬಲ ಸಂದೇಶ ರವಾನೆ ಮಾಡುವುದಕ್ಕೆ ಯತ್ನಾಳ್‌ ಬಣ ತೀರ್ಮಾನಿಸಿದೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಮತ್ತಿತರ ನಾಯಕರು ಕರ್ನಾಟಕ ಭವನದಲ್ಲಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಹಿಂದೂ ವಿರೋಧಿ

ಯಡಿಯೂರಪ್ಪ ಹಿಂದೂ ವಿರೋಧಿ ಎಂದು ಬಿಂಬಿಸಲು ಭಿನ್ನಮತೀಯ ಬಣ ಮುಂದಾಗಿದೆ. ‘ಹಿಂದೂಗಳ ಹತ್ಯೆಯಾದಾಗ ಯಡಿಯೂರಪ್ಪ ಮೌನವಾಗಿದ್ದರು. ಶಿವಮೊಗ್ಗದಲ್ಲಿ ಔರಂಗಜೇಬನ ಫೋಟೋ ಹಾಕಿದ ಸಂದರ್ಭದಲ್ಲೂ ಹೋರಾಟ ಮಾಡಲಿಲ್ಲ. ಸಚಿವ ಜಮೀರ್ ಅಹ್ಮದ್‌ ಖಾನ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ಕೊನೆಗಾಣಿಸಲು ನಮ್ಮ ಹೋರಾಟ ನಿರಂತರ’ ಎಂದು ಯತ್ನಾಳ ಬುಧವಾರ ಹೇಳಿದರು.

ಮುಂದಿನ ಲಿಂಗಾಯತ ನಾಯಕ

ಯಡಿಯೂರಪ್ಪ ಕುಟುಂಬಕ್ಕೆ ಹಿನ್ನಡೆಯಾದರೆ ಮುಂದಿನ ಲಿಂಗಾಯತ ನಾಯಕನಾಗಿ ಬಿಂಬಿಸಿಕೊಳ್ಳಲು ಸಣ್ಣ ಪೈಪೋಟಿಯೂ ಶುರುವಾಗಿದೆ. ಬೊಮ್ಮಾಯಿ ಅವರು ತಟಸ್ಥ ಬಣದಲ್ಲಿ ಈವರೆಗೆ ಗುರುತಿಸಿಕೊಂಡಿದ್ದರು. ವಿಜಯೇಂದ್ರ ಅವರನ್ನು ಅಧ್ಯಕ್ಷ ರನ್ನಾಗಿ ಮುಂದುವರಿಸುವುದಕ್ಕೆ ಈಗ ಅವರೂ ವಿರೋಧ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 10 ಸೋಮಣ್ಣನವರ ನೂತನ ನಿವಾಸದಲ್ಲಿ ನಡೆಯುತ್ತಿರುವ ಸಭೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ. ‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಕೋಟಾ ಬಂದರೆ ನಾನೇ ಅಭ್ಯರ್ಥಿ,’ ಎಂದು ಯತ್ನಾಳ್‌ ಹೇಳಿದ್ದಾರೆ.

ಯತ್ನಾಳ್ ಕ್ಷಮೆ ಕೇಳಲಿ

ವಿಜಯೇಂದ್ರ ಪರ ಇಬ್ಬರು ‍ಪೇಮೆಂಟ್ ಸ್ವಾಮೀಜಿಗಳಿದ್ದಾರೆ ಎಂಬ ಯತ್ನಾಳ್ ಹೇಳಿಕೆಯನ್ನು ವಿಜಯೇಂದ್ರ ಬಣದಲ್ಲಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಖಂಡಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ರೇಣುಕಾಚಾರ್ಯ ಸ್ವಾಮೀಜಿಗಳು ಹಣ ತೆಗೆದುಕೊಂಡು ಹೇಳಿಕೆ ನೀಡುತ್ತಾರೆಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲ ಸ್ವಾಮೀಜಿಗಳನ್ನು ಮತ್ತು ಇಡೀ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ, ಅವರು ಕ್ಷಮೆ ಕೇಳಬೇಕೆಂದರು.

ಯಡಿಯೂರಪ್ಪನವರು ಕೇವಲ ವೀರಶೈವ ಅಥವಾ ಲಿಂಗಾಯತ ಸಮುದಾಯದ ನಾಯಕರಲ್ಲ, ರಾಜ್ಯದ ಎಲ್ಲ ಸಮುದಾಯಗಳ ನಾಯಕರು, ಕೇವಲ ಒಂದು ಸಮುದಾಯದ ಬೆಂಬಲದಿಂದ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಯಡಿಯೂರಪ್ಪರನ್ನು ಮೋಸದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ವೀರಶೈವ ಲಿಂಗಾಯತರು ವಿಮುಖರಾಗಿದ್ದರು ಎಂದು ರೇಣುಕಾಚಾರ್ಯ ಹೇಳಿದರು.

Share This Article
7 Comments
  • ಯತ್ನನಾಳನಲ್ಲಿ ಲಿಂಗಾಯತದ ಯಾವ ಲಕ್ಷಣಗಳೂ ಇಲ್ಲ. ಆಚರಣೆಯೂ ಇಲ್ಲ. ಹೇಗೆ ಲಿಂಗಾಯತ ಆತನೆ ಹೇಳಲಿ

  • ಬಸವನಗೌಡ ಪಾಟೀಲ ಲಿಂಗಾಯತ ಅಲ್ಲ ಯಡಿಯೂರಪ್ಪ ಅವರ ಮಗನೂ ಲಿಂಗಾಯತ ಇವರು ಯಾರು ಲಿಂಗಾಯತ ಅಲ್ಲ ಲಿಂಗಾಯತ ಧರ್ಮದ ಲಕ್ಷಣಗಳು ಇಲ್ಲವೆ ಇಲ್ಲ ಧರ್ಮದ ಬಗ್ಗೆ ಅಭಿಮಾನ ಒಂದಿಷ್ಟು ಇಲ್ಲ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ವಿರೋಧ ಮಾಡಿದವರೂ ಇವರೆ ಇಂಥವರು ಹೇಗೆ ಲಿಂಗಾಯತ ನಾಯಕ ಆಗಲು ಸಾಧ್ಯ. ??

    • ಯತ್ನಾಳ ಲಿಂಗಾಯತ ಎಂದು ಹೇಳಿಕೊಳ್ಳಲು ಅವನ ಹಣೆಯ ಮೇಲೆ ಇರುವ ವಿಭೂತಿಯೋ ಅಥವಾ ಕುಂಕುಮ ಎಂದು ಅವರೇ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಉತ್ತಮ ಇವರ್ಯಾರಿಗೂ ಲಿಂಗಾಯತ ಧರ್ಮದ ಬಗ್ಗೆ ಆಸಕ್ತಿ ಇಲ್ಲ ಕೇವಲ ರಾಜಕೀಯ ಮಾಡುವುದು ಇವರ ಕಾಯಕ.

  • ಈತ ಯಾವಾಗಲೂ ಹಿಂದುತ್ವದ ಮಲ ತಿಂದು ಲಿಂಗಾಯತ ದ ಬಗ್ಗೆ ಮಾತನಾಡುತ್ತಾ ಬಸವಣ್ಣನ ಬಗ್ಗೆ ಕೀಳು ನುಡಿದಿರುವ ಗೋಸುಂಬೆ ರಾಜಕಾರಣಿ. ಯಡೆಯೂರಪ್ಪ ವಿಜಯೇಂದ್ರ ಜೊತೆಗೆ ಈ ವಿಷ ಜಂತುವನ್ನೂ ಲಿಂಗಾಯತ ಸಮಾಜ ಮಟ್ಟ ಹಾಕಬೇಕು!

  • ಯತ್ನಾಳ್ ಅವರು ಲಿಂಗಾಯತರಲ್ಲಿ , ಅವರಲ್ಲಿ ಯಾವ
    ಪ್ರಜಾಪ್ರಭುತ್ವ ಲಕ್ಷಣಗಳು ಇಲ್ಲ ಅವರು ಮನುವಾದಿಗಳಿಗೆ
    ಕುದುರೆಯ ಆಗಿದ್ದಾರೆ ಇಂಥ ಲಕ್ಷಣಗಳಿದ್ದ ರಾಜಕಾರಣಿಗಳನ್ನು ಲಿಂಗಾಯತ ಧರ್ಮಿಯರನ್ನು
    ಬಹಿಷ್ಕರಿಸಬೇಕು

  • ಯತ್ನಾಳ ಒಬ್ಬ ಹಿಂದೂವಾದಿ ಅವನ ಹಣೆಯ ಮೇಲೆ ವಿಭೂತಿ ಇದೆಯೋ ಅಥವಾ ಕುಂಕುಮ ವಿಧೇಯೋ ಎಂದು ಅವನೇ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು ಇವರ್ಯಾರಿಗೂ ಲಿಂಗಾಯತ ಧರ್ಮದ ಬಗ್ಗೆ ಆಸಕ್ತಿ ಇಲ್ಲ ಕೇವಲ ಇವರು ರಾಜಕೀಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *