ವಿಜಯಪುರ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಷೂ ಎಸೆದ ಪ್ರಕರಣವನ್ನು ಖಂಡಿಸಿ ನಡೆದ ವಿಜಯಪುರ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅದರ ಅಂಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ, ಅಂಬೇಡ್ಕರ್ ವೃತ್ತದಲ್ಲಿ ಸಭೆ ನಡೆಯಿತು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡುತ್ತ, ಅನೇಕ ಪ್ರಗತಿಪರ ಚಿಂತಕರು ಘಟನೆಯನ್ನು ಕಟುವಾಗಿ ಖಂಡಿಸಿಲ್ಲ. ಇದು ನಮ್ಮ ದುರ್ದೈವ ಎಂದು ತೀವ್ರ ಅಸಮಾಧಾನ ಹೊರಹಾಕಿದರು. ಪ್ರಧಾನಿ ನರೇಂದ್ರ ಮೋದಿ ಸಹ ಕಾಟಾಚಾರಕ್ಕೆ ಘಟನೆಯನ್ನು ಖಂಡಿಸಿ ಆರೋಪಿಯ ಬಂಧನಕ್ಕೆ ಸಂಬಂಧಿಸಿದಂತೆ ಒಂದೇ ಒಂದು ವಾಕ್ಯ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಬರೆದ ಡಾ.ಬಿ.ಆರ್. ಅಂಬೇಡ್ಕರ ಅವರ ಮೇಲೆಯೂ ಅಪಮಾನ ನಡೆದಿತ್ತು. ಮಹಾತ್ಮಾ ಗಾಂಧೀಜಿ ಅವರ ಮೇಲೆ ಗುಂಡು, ಶಿಕ್ಷಣ ಸಮಾನತೆ ಪ್ರತಿಪಾದಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಮೇಲೆ ಹೆಂಡಿ ಎಸೆಯಲಾಗುತ್ತಿತ್ತು, ಈಗ ಮುಂದುವರೆದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಷೂ ಎಸೆಯಲಾಗಿದೆ ಎಂದರು.
ಕನೇರಿ ಸ್ವಾಮೀಜಿಗಳು ಲಿಂಗಾಯತ ಮಠಾಧೀಶರ ಬಗ್ಗೆ ಅತ್ಯಂತ ಕೀಳು ಪದ ಪ್ರಯೋಗ ಮಾಡಿದ್ದಾರೆ, ಬಸವಾದಿ ಶರಣರ ವಿಚಾರವನ್ನು ಪ್ರತಿಪಾದಿಸುವ ಮಠಾಧೀಶರನ್ನು ಹೊರತುಪಡಿಸಿ ಅನೇಕ ಮಠಾಧೀಶರು ಸಂಘ ಪರಿವಾರದ ಮುಖವಾಣಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ನೋವಿನ ಸಂಗತಿ ಎಂದು ಆಲಗೂರ ವಿಷಾದಿಸಿದರು.

ಅಹಿಂದ ವರ್ಗದವರಿಗೆ ಸ್ವಾತಂತ್ರ‍್ಯ ಕೊಡುವುದಕ್ಕಿಂತ ನಿಮ್ಮ ಗುಲಾಮಗಿರಿಯೇ ಒಳ್ಳೆಯದು ಎಂದು ಸಂಘದ ಸ್ಥಾಪಕರೇ ಅಂದು ಬ್ರಿಟಿಷರಿಗೆ ಹೇಳಿಕೊಂಡಿದ್ದರು ಎಂದರು.
ಒಂದಲ್ಲ ಒಂದು ಹಂತದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯ, ವಿಚಾರಧಾರೆಗಳಿಗೆ ಧಕ್ಕೆ ತರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ, ದಲಿತ ಅಧಿಕಾರಿಗಳು ಸಹ ಅತ್ಯಂತ ಮಾನಸಿಕ ಒತ್ತಡ ಅನುಭವಿಸುವಂತಹ ವಾತಾವರಣವಿದೆ, ಗ್ವಾಲಿಯರ್‌ನಲ್ಲಿ ಓರ್ವ ಐಪಿಎಸ್ ಅಧಿಕಾರಿ ಅಸಮಾನತೆಯಿಂದ ಆತ್ಮಹತ್ಯೆಗೆ ಶರಣಾಗುವಂತಾಯಿತು ಎಂದರು.
ಆದರೆ ವಿಜಯಪುರ ಜನತೆ ಈ ಹೋರಾಟವನ್ನು ಯಶಸ್ವಿಗೊಳಿಸಿದ್ದಾರೆ, ಆದರೆ ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸುವವರಿದ್ದರು, ಮಾರ್ಗಮಧ್ಯದಲ್ಲಿಯೇ ಪೊಲೀಸರು ಅವರನ್ನು ತಡೆದಿದ್ದಾರೆ, ಆದರೆ ಏತಕ್ಕೆ ಎಂಬುದು ಗೊತ್ತಾಗಿಲ್ಲ, ಈ ವಿಷಯದ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡುವೆ ಎಂದು ಆಲಗೂರ ಹೇಳಿದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಷೂ ಎಸೆದಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆಯೇ ಗಲ್ಲಿಗೇರಿಸಬೇಕು ಎಂದರು. ಎಲ್ಲರೂ ಒಂದು ಎಂದು ಹೇಳುವ ಇಲ್ಲಿನ ನಗರ ಶಾಸಕರು ಈ ಘಟನೆಯನ್ನು ಏಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದರು. ಡಾ.ಬಿ.ಆರ್. ಅಂಬೇಡ್ಕರ ಅವರು ಕೊಟ್ಟಿರುವ ಸಂವಿಧಾನದಿಂದ ನಾವೆಲ್ಲರೂ ಇಂದು ಘನತೆಯ ಜೀವನ ನಡೆಸುವಂತಾಗಿದೆ ಎಂದರು.

ಅಹಿಂದ ಮುಖಂಡ ಸೋಮನಾಥ ಕಳ್ಳಮನಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲೂ ಸಂಘ ಪರಿವಾರದ ವಿಚಾರಧಾರೆಯುಳ್ಳವರಿದ್ದಾರೆ, ಅವರು ಈ ಸಂಘಕ್ಕೆ ದೇಣಿಗೆ ನೀಡುತ್ತಾರೆ, ಸತ್ಯವನ್ನು ಪ್ರತಿಪಾದಿಸಿದ ಡಾ.ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಿರುವ ದುಷ್ಟ ಶಕ್ತಿಗಳೇ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಷೂ ಎಸೆದ ಪ್ರಕರಣದ ಹಿಂದೆ ಇದ್ದಾರೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಎಂದರು.
ಮೆರವಣಿಗೆಯಲ್ಲಿ ಲಿಂಗಾಯತ ಮಠಾಧೀಶರನ್ನು ಅವಮಾನಿಸಿದ ಕನ್ನೇರಿ ಕಾಡಸಿದ್ದೇಶ್ವರ ಭಾವಚಿತ್ರಕ್ಕೆ ಪ್ರತಿಭಟನಾಕಾರರು ಚಪ್ಪಲಿ ಏಟು ನೀಡಿ, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭೌದ್ಧ ಧರ್ಮಗುರು ಶ್ರೀ ಡಾ. ಶಾಕು ಬೋಧಿಧಮ್ಮ ಸಾನಿಧ್ಯ ವಹಿಸಿದ್ದರು. ಹಜರತ್ ಸೈಯ್ಯದ್ ಜೈನುಲಾಬುದ್ದೀನ್ ಹಾಶ್ಮೀ, ಅಹಿಂದ ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ರೈತ ಮುಖಂಡ ಅರವಿಂದ ಕುಲಕರ್ಣಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ರಮೇಶ ಆಸಂಗಿ, ಇರ್ಫಾನ್ ಶೇಖ್, ಅಡಿವೆಪ್ಪ ಸಾಲಗಲ್ಲ, ಶರಣು ಚಿಂತಕ ಡಾ.ಜೆ.ಎಸ್. ಪಾಟೀಲ, ಎಂ.ಸಿ. ಮುಲ್ಲಾ, ವಿಡಿಎ ಮಾಜಿ ಅಧ್ಯಕ್ಷ ಆಜಾದ ಪಟೇಲ್, ದಿನೇಶ ಹಳ್ಳಿ, ಆರತಿ ಶಹಪೂರ, ಡಾ.ಗಂಗಾಧರ ಸಂಬಣ್ಣಿ, ಸಿದ್ಧು ರಾಯಣ್ಣವರ, ಪೀರಾ ಜಮಖಂಡಿ, ಫಯಾಜ್ ಕಲಾದಗಿ, ಜಿತೇಂದ್ರ ಕಾಂಬಳೆ, ಅಡಿವೆಪ್ಪ ಸಾಲಗಲ್ಲ, ಸುರೇಶ ಘೊಣಸಗಿ, ಸಂತೋಷ ಶಹಾಪೂರ, ಅಶ್ಪಾಕ್ ಮನಗೂಳಿ, ಡಾ.ರವಿಕುಮಾರ ಬಿರಾದಾರ ಮೊದಲಾದವರು ನೇತೃತ್ವ ವಹಿಸಿದ್ದರು.
ಪ್ರತಿಭಟನೆಯಲ್ಲಿ ಅಹಿಂದ ವರ್ಗ, ಬಸವಪರ ಸಂಘಟನೆಯ ಸಾವಿರಾರು ಜನ ಪಾಲ್ಗೊಂಡಿದ್ದರು. ನ್ಯಾಯವಾದಿ ಶ್ರೀನಾಥ ಪೂಜಾರಿ, ಸುರೇಶ ಬಿಜಾಪೂರ ಕಾರ್ಯಕ್ರಮ ನಿರೂಪಿಸಿದರು.