ತೇರದಾಳ
ಪಟ್ಟಣದ 15,000 ಶರಣೆಯರು ಎರಡು ಕಿ.ಮೀ ನಡೆಯುತ್ತ, ಶ್ರೀ ಗುರುಬಸವ ಲಿಂಗಾಯ ನಮಃ ಮಂತ್ರ ಹೇಳುತ್ತ, ದೇವಸ್ಥಾನ ಸಮಿತಿಗೆ ಒಂದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಲ್ಲಿಸುವ ವಿಡಿಯೋಗಳು ವೈರಲ್ ಆಗಿವೆ.
ಹನ್ನೆರಡನೇ ಶತಮಾನದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯದೈವ, ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ನವೆಂಬರ್ 11ರಂದು ನಡೆಯಲಿದೆ.
ಇದರ ನಿಮಿತ್ಯ ಬಸವ ಮಹಾಪುರಾಣ ಪ್ರವಚನ ಅಕ್ಟೋಬರ್ 14ರಿಂದ ಪ್ರಾರಂಭಗೊಂಡು, ಪ್ರತಿದಿನ ಸಂಜೆ ಜರುಗುತ್ತಿದೆ.
ಬೆಳಗಾವಿ ಜಿಲ್ಲೆ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭುಸ್ವಾಮೀಜಿ ಅವರು ಹೇಳುತ್ತಿರುವ ಪುರಾಣ ಪ್ರವಚನ ಕೇಳಲು ತೇರದಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಮಳೆಯನ್ನೂ ಲೆಕ್ಕಿಸದೆ ಬರುತ್ತಿದ್ದಾರೆ.
ಪುರಾಣ ಆಲಿಸಲು ಬರುವ ಸಹಸ್ರಾರು ಭಕ್ತರಿಗೆ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾಲುಗ್ಗಿ, ಸಜ್ಜಕ, ಮಾದಲಿ, ಬೂಂದಿ, ಬಾಸುಂದೆ, ಬಾದುಷಾ, ಹೂರಣದ ಹೋಳಿಗೆ, ಜಿಲೇಬಿ, ಚಪಾತಿ, ರೊಟ್ಟಿ, ವಿವಿಧ ತೆರನಾದ ಪಲ್ಲೆ ಅನ್ನ-ಸಾರನ್ನು ಈಗಾಗಲೇ ಭಕ್ತರು ಸವಿದಿದ್ದಾರೆ.
ಸೋಮವಾರ ಅಕ್ಟೋಬರ್ 28ರಂದು ಪಟ್ಟಣದ ಎಲ್ಲ ಭಾಗದ ಮಹಿಳೆಯರು ಶೇಂಗಾ ಹೋಳಿಗೆ ಮನೆಗಳಲ್ಲಿ ತಯಾರಿಸಿ, ಬುಟ್ಟಿಗಳಲ್ಲಿ ತಮ್ಮ ತಲೆ ಮೇಲೆ ಹೊತ್ತು ದೇವಸ್ಥಾನದ ಸಮೀಗೆಸಮಿತಿಗೆ ಅರ್ಪಿಸಿದರು.
ಎಣ್ಣೆ ಹೋಳಿಗೆ ಯಾತ್ರೆ ದೇವಸ್ಥಾನಕ್ಕೆ ತೆರಳುವ ಮುನ್ನ ರಬಕವಿ ರಸ್ತೆಯ ನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಾತೆಯರು ಜಮಾಯಿಸಿದರು. ಚಿಮ್ಮಡದ ಪ್ರಭು ಶ್ರೀ, ಶೇಗುಣಸಿಯ ಡಾ.ಮಹಾಂತಪ್ರಭು, ತೇರದಾಳದ ಗಂಗಾಧರ ದೇವರು, ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ ಶ್ರೀ ಶೇಂಗಾ ಹೋಳಿಗೆ ಬುತ್ತಿ ಜಾತ್ರೆಗೆ ಚಾಲನೆ ನೀಡಿದರು.