ಕಿಡಿಗೇಡಿಯ ಬಂಧನಕ್ಕೆ ಆಗ್ರಹ
ಬಸವನಬಾಗೇವಾಡಿ :
ವಿಶ್ವಗುರು ಬಸವಣ್ಣನವರ ಹಾಗೂ ಶರಣೆ ಅಕ್ಕಮಹಾದೇವಿ ತಾಯಿಯವರ ಕುರಿತು ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬರೆದು ಮಾನವಕುಲಕ್ಕೆ ಅವಮಾನ ಮಾಡಿರುವ ರಮಾಕಾಂತ್ ಎಂ. ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಬಸವಣ್ಣನವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ರಮಾಕಾಂತ್ ಎಂ. ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶರಣರ ಜನ್ಮಭೂಮಿಯಲ್ಲೇ ಶರಣರಿಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, “ಬಸವಣ್ಣನವರು, ಅಕ್ಕಮಹಾದೇವಿಯವರು ಸಮಾನತೆಯ ಸಂದೇಶ ನೀಡಿದ ಜಗದ ಬೆಳಕಾಗಿದ್ದಾರೆ. ಅಂತಹ ಶರಣರು, ದಾರ್ಶನಿಕರ ಬಗ್ಗೆ ಅಶ್ಲೀಲ, ಅಸಹ್ಯ, ಕೀಳುಮಟ್ಟದ ಶಬ್ದಗಳನ್ನು ಬಳಸಿರುವ ಈ ವ್ಯಕ್ತಿಯು ಸಮಾಜದಲ್ಲಿ ಅಶಾಂತಿ ಹಬ್ಬಿಸಲು ಯತ್ನಿಸುತ್ತಿದ್ದಾನೆ. ಇವನನ್ನು ಸೈಬರ್ ಕ್ರೈಂ ಅಡಿಯಲ್ಲಿ ಕೂಡಲೇ ಬಂಧಿಸಬೇಕು,” ಎಂದು ಒತ್ತಾಯಿಸಿದರು.
ನಂತರ ತಾಲೂಕು ದಂಡಾಧಿಕಾರಿಗಳಾದ ವೈ. ಎಸ್. ಸೋಮನಕಟ್ಟಿ ಅವರಿಗೆ ರಾಷ್ಟ್ರೀಯ ಬಸವಸೈನ್ಯದ ತಾಲೂಕಾ ಅಧ್ಯಕ್ಷ ಸಂಜು ಬಿರಾದಾರ ಅವರು ಮನವಿ ಪತ್ರವನ್ನು ಅರ್ಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮನ್ನಾನ ಶಾಬಾದಿ, ಪ್ರಶಾಂತ ಮುಂಜಾನೆ, ಸಂಗಮೇಶ ಪಟ್ಟಣಶೆಟ್ಟಿ, ಜಟ್ಟಿಂಗರಾಯ ಮಾಲಗಾರ, ಶಂಕರಗುರು ರಜಪೂತ್, ಆನಂದ್ ವನರೊಟ್ಟಿ, ದಯಾನಂದ ಜಾಲಗೇರಿ, ಪುರಸಭೆ ಮಾಜಿ ಉಪಾಧ್ಯಕ್ಷ ಸಂಗನಬಸು ಪೂಜಾರಿ, ಆನಂದ ಕ್ವಾಟಿ, ಮಾಂತೇಶ ಹಾರಿವಾಳ, ಮಹೇಶ ಹಿರೇಕುರಬರ್, ಬಾಬು ಮಸಬಿನಾಳ, ವೀರೇಶ ಗಬ್ಬೂರ, ವಿಠ್ಠಲ ಲಮಾಣಿ ಸೇರಿದಂತೆ ಅನೇಕ ಪದಾಧಿಕಾರಿಗಳು ಮತ್ತು ಬಸವ ಭಕ್ತರು ಪಾಲ್ಗೊಂಡಿದ್ದರು.
